ರಾಷ್ಟ್ರೀಯ

16 ವರ್ಷಗಳಿಂದ ಮಗಳ ಮೇಲೆ ನಿರಂತರ ಅತ್ಯಾಚಾರ ನಡೆಸುತ್ತಿದ್ದ ತಂದೆ ; ಕೃತ್ಯಕ್ಕೆ ಸಾಥ್ ನೀಡುತ್ತಿದ್ದ ಹೆತ್ತ ತಾಯಿ ! ತಂಗಿಯ ಮೇಲೆ ದೌರ್ಜನ್ಯ ಎಸಗಿದಾಗ ಬಯಲಿಗೆ

Pinterest LinkedIn Tumblr

ಲಖನೌ: ಆಕೆ ಬರೋಬ್ಬರಿ 16 ವರ್ಷದಿಂದ ತಂದೆಯ ಅತ್ಯಾಚಾರವನ್ನು ಸಹಿಸಿಕೊಂಡಿದ್ದಳು. ಆತನ ದೌರ್ಜನ್ಯದ ಫಲವಾಗಿ ಅನೇಕ ಬಾರಿ ಗರ್ಭ ಕೂಡ ಧರಿಸಿದ್ದಳು. ಆಗೆಲ್ಲ ತಾಯಿ ಮಾತ್ರೆ ತಿನ್ನಿಸಿ ಗರ್ಭಪಾತ ಮಾಡಿಸಿದ್ದಳು. ಮನೆಯ ಮಾನ ಹರಾಜಾಗಬಾರದೆಂದು ಎಲ್ಲವನ್ನು ಮೌನವಾಗಿ ಸಹಿಸಿಕೊಂಡಿದ್ದ ಆಕೆ ಕೊನೆಗೂ ಸಿಡಿದೆದ್ದಳು. ಕಾರಣ ಆಕೆಯ ಕಾಮುಕ ತಂದೆ ಮತ್ತೀಗ ಕಿರಿಯ ಮಗಳು ಅಂದರೆ ಪೀಡಿತೆಯ ತಂಗಿಯ ಮೇಲೆ ಕುದೃಷ್ಟಿ ಬೀರಲು ಆರಂಭಿಸಿದ್ದ.

ತಂಗಿಯ ಮೇಲಿನ ದೌರ್ಜನ್ಯದ ವಿರುದ್ಧ 22ರ ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿದಳು. ಇಬ್ಬರು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ತಂದೆಯ ಮೇಲೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆ 2012 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು 44 ವರ್ಷದ ಆರೋಪಿ ಪರಾರಿಯಾಗಿದ್ದಾನೆ. ಆತನ ಅಪರಾಧಕ್ಕೆ ಬೆಂಬಲ ನೀಡಿದ ಆರೋಪದ ಮೇಲೆ ಪತ್ನಿ (42)ಯನ್ನು ಪೊಲೀಸರು ಬಂಧಿಸಿದ್ದಾರೆ.

ಆಶಾ ಜ್ಯೋತಿ ಕೇಂದ್ರ ಎಂಬ ಸ್ವಯಂ ಸೇವಾ ಸಂಸ್ಥೆಯ ಸಹಾಯದಿಂದ ಪೀಡಿತೆ 14 ವರ್ಷದ ತಂಗಿಯ ಮನೆಯಿಂದ ಹೊರ ತರುವಲ್ಲಿ ಯಶಸ್ವಿಯಾಗಿದ್ದಾಳೆ. ದೂರು ನೀಡಿದಾಕೆ ಮನೆಗೆ ಹಿಂತಿರುಗಿದ್ದು, ಆಕೆಯ ತಂಗಿ ಅಪ್ರಾಪ್ತೆಯಾಗಿದ್ದರಿಂದ ಸರಕಾರಿ ಆಶ್ರಯ ತಾಣದಲ್ಲಿರಸಲಾಗಿದೆ.

6 ವರ್ಷದ ಮಗುವಾಗಿದ್ದಾಗಿನಿಂದ ತಂದೆ ತನ್ನ ಮೇಲೆ ಅತ್ಯಾಚಾರ ಎಸಗುತ್ತಿದ್ದು, ಅದೆಲ್ಲ ತಾಯಿಗೆ ತಿಳಿದಿತ್ತು. ಗರ್ಭ ಧರಿಸಿದಾಗಲೆಲ್ಲ ಆಕೆ ಮಾತ್ರೆ ನೀಡಿ ಗರ್ಭಪಾತ ಮಾಡಿಸುತ್ತಿದ್ದಳು. ಇದೆಲ್ಲ ತನ್ನ ಹಣೆಬರಹ ಎಂದಾಕೆ ಎಲ್ಲವನ್ನು ಸಹಿಸಿಕೊಂಡು ಹೋದಳು. ಆದರೆ ತಂಗಿಯ ಮೇಲೂ ಅಪ್ಪ ದೌರ್ಜನ್ಯ ಎಸಗಲು ಆರಂಭಿಸಿದಾಗ ಆಕೆಯಿಂದ ಸಹಿಸಲಾಗಲಿಲ್ಲ, ಹೀಗಾಗಿ ನಮ್ಮಲ್ಲಿ ಸಹಾಯ ಕೇಳಿ ಬಂದಳು, ಎಂದು ಆಶಾ ಜ್ಯೋತಿ ಕೇಂದ್ರದ ಮೇಲ್ವಿಚಾರಕಿ ಅರ್ಚನಾ ಸಿಂಗ್ ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸುವ ಆಕೆಯ ತಂಗಿ, ಕಳೆದ ಮೂರು ವರ್ಷದಿಂದ ಅಪ್ಪ ನನ್ನ ಮೇಲೆ ದೌರ್ಜನ್ಯ ಎಸಗಲು ಪ್ರಯತ್ನಿಸುತ್ತಿದ್ದು, ಪ್ರತಿ ಬಾರಿಯೂ ಅಕ್ಕ ಮಧ್ಯೆ ಬಂದು ಕಾಪಾಡಿದ್ದಾಳೆ. ಹೀಗಾಗಿ ನಾನು ಅತ್ಯಾಚಾರದಿಂದ ಬಚಾವಾದೆ. ಇತ್ತೀಚಿಗೆ ಹೆಚ್ಚು ಆಕ್ರಮಣಕಾರಿಯಾಗಿದ್ದ ಅಪ್ಪ, ಲೈಂಗಿಕತೆ ಕೆರಳಿಸುವಂತಹ ಪತ್ರಗಳನ್ನು ನಮಗಿಬ್ಬರಿಗೆ ಬರೆಯುತ್ತಿದ್ದ, ಎಂದು ಹೇಳಿದ್ದಾಳೆ.

ನನಗಿಬ್ಬರು ಸಹೋದರರಿದ್ದಾರೆ (18 ಮತ್ತು 8 ವಯಸ್ಸು). ನಮ್ಮ ಮನೆಯಲ್ಲಿ ಬಾಡಿಗೆ ಇರುವವರಿಗೆ ಮತ್ತು ಕೆಲವು ಸಂಬಂಧಿಕರಿಗೆ ನನ್ನ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ತಿಳಿದಿತ್ತು. ಆದರೆ ಯಾರು ಕೂಡ ಅವರ ವಿರುದ್ಧ ಮಾತಾಡಲಿಲ್ಲ. ಕೊನೆಗೆ ಧೈರ್ಯ ಮಾಡಿ ನಮ್ಮ ಕಾಲೇಜಿನ ಪ್ರಾಚಾರ್ಯರಿಗೆ ವಿಷಯ ತಿಳಿಸಿದೆ. ಅವರು ಆಶಾ ಜ್ಯೋತಿ ಕೇಂದ್ರವನ್ನು ಸಂಪರ್ಕಿಸಲು ಹೇಳಿದರು, ಎಂದು ಪೀಡಿತೆ ಹೇಳಿಕೊಂಡಿದ್ದಾಳೆ.

Comments are closed.