
ಕೊಲ್ಕತ್ತಾ: ಪಶ್ಚಿಮ ಬಂಗಾಳದ ಸರ್ಕಾರಿ ಶಾಲೆಗಳಲ್ಲಿ ಶೇ.70ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಇದ್ದರೆ ಅಂತಹ ಶಾಲೆಯಲ್ಲಿ ಪ್ರತ್ಯೇಕ ಊಟದ ಕೋಣೆ ಕಟ್ಟಲು ಸಿಎಂ ಮಮತಾ ಬ್ಯಾನರ್ಜಿ ಶುಕ್ರವಾರ ಆದೇಶ ಹೊರಡಿಸಿದ್ದಾರೆ ಎನ್ನುವ ಸುತ್ತೋಲೆ ಟಿಎಂಸಿ ಮತ್ತು ಬಿಜೆಪಿ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದೆ.
ಈ ಸುತ್ತೋಲೆ ವಿಚಾರವಾಗಿ ಸ್ಪಷ್ಟನೆ ನೀಡಿರುವ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಇದು ಸರ್ಕಾರದ ಹಳೆಯ ಸುತ್ತೋಲೆಯಾಗಿದ್ದು, ಸರ್ಕಾರ ಇದನ್ನು ಈಗಾಗಲೇ ಹಿಂತೆಗೆದುಕೊಂಡಿದೆ. ಆದರೆ, ಕೆಟ್ಟ ಅಧಿಕಾರಿಯಿಂದಾಗಿ ಇದು ಸರ್ಕಾರದ ಗಮನಕ್ಕೆ ಬಾರದೆ ಆ ಹಳೆಯ ಸುತ್ತೋಲೆ ಬಿಡುಗಡೆಯಾಗಿದೆ ಎಂದು ಹೇಳಿದ್ದಾರೆ.
ಮಮತಾ ಸರ್ಕಾರದ ಈ ಯೋಜನೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಅವರು, ಇದೊಂದು ದುರಾಲೋಚನೆಯ ಉದ್ದೇಶದಿಂದ ಕೂಡಿರುವ ಯೋಜನೆ ಎಂದು ನೇರವಾಗಿ ಮಮತಾ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಜಿಲ್ಲೆಯಲ್ಲಿ ಯಾವ ಶಾಲೆಗಳಲ್ಲಿ ಶೇ.70ಕ್ಕಿಂತ ಅಲ್ಪ ಸಂಖ್ಯಾತ ವಿದ್ಯಾರ್ಥಿಗಳು ಇರುವ ಶಾಲೆಯ ಮಾಹಿತಿ ನೀಡುವಂತೆ ಅಲ್ಪಸಂಖ್ಯಾತ ಇಲಾಖೆ ಜಿಲ್ಲಾಧಿಕಾರಿ ಜಿಲ್ಲಾ ಶಾಲಾ ಇನ್ಸ್ಪೆಕ್ಟರ್ಗೆ ಸೂಚನೆ ನೀಡಿರುವ ಸರ್ಕಾರದ ಸುತ್ತೋಲೆ ಪ್ರತಿಯನ್ನು ಘೋಷ್ ಟ್ವಿಟರ್ನಲ್ಲಿ ಪ್ರಕಟಿಸಿದ್ದಾರೆ.
ಧರ್ಮದ ಆಧಾರದ ಮೇಲೆ ಏಕೆ ವಿದ್ಯಾರ್ಥಿಗಳ ಮಧ್ಯೆ ಏಕೆ ತಾರತಮ್ಯ ಮಾಡುತ್ತಿದ್ದಿರಿ. ಈ ಯೋಜನೆ ದುರುದ್ದೇಶದಿಂದ ಕೂಡಿರುವಂತಹದ್ದು, ಹೆಚ್ಚು ಮತಬ್ಯಾಂಕ್ ಇರುವ ಅಲ್ಪಸಂಖ್ಯಾತ ಅಭಿವೃದ್ಧಿ ಮೇಲಷ್ಟೇ ಸರ್ಕಾರಕ್ಕೆ ಆಸಕ್ತಿ. ಹಿಂದೂ ವಿದ್ಯಾರ್ಥಿಗಳು ಯಾವ ತಪ್ಪು ಮಾಡಿದರು ಎಂಬ ಕಾರಣಕ್ಕೆ ಅವರಿಗೆ ಊಟದ ಕೋಣೆ ಇಲ್ಲ ಎಂದು ಘೋಷ್ ಸರ್ಕಾರವನ್ನು ಟೀಕಿಸಿದ್ದಾರೆ.
ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಮತಾ ಬ್ಯಾನರ್ಜಿ, ಇದೊಂದು ಹಳೆಯ ಸುತ್ತೋಲೆಯಾಗಿದ್ದು, ಇದನ್ನು ಸರ್ಕಾರ ಈಗಾಗಲೇ ಹಿಂಪಡೆದಿದೆ. ಕೆಟ್ಟು ಅಧಿಕಾರಿಯಿಂದಾಗಿ ಇದು ಸರ್ಕಾರದ ಅರಿವಿಗೆ ಬಾರದೆ ಈ ಸುತ್ತೋಲೆ ಬಿಡುಗಡೆಯಾಗಿದೆ. ಭಾರತ ಸರ್ಕಾರದ ಮಾರ್ಗಸೂಚಿಯನ್ನು ನಾವು ಪಾಲಿಸುತ್ತಿದ್ದೇವೆ. ಇದೊಂದು ತಾಂತ್ರಿಕ ವಿಚಾರವಷ್ಟೇ. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳನ್ನು ಪ್ರತ್ಯೇಕ ಮಾಡುವ ಪ್ರಶ್ನೆಯೇ ಇಲ್ಲ. ಒಂದು ವೇಳೆ ಯಾವ ಶಾಲೆಯಲ್ಲಿ ಊಟದ ಕೋಣೆ ಇಲ್ಲವೋ ಅಲ್ಲಿ ಎಲ್ಲ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿಯೇ ಒಟ್ಟಾಗಿ ಊಟ ಮಾಡುತ್ತಾರೆ ಎಂದಿದ್ದಾರೆ.
Comments are closed.