ರಾಷ್ಟ್ರೀಯ

99 ಅಂಕ ಪಡೆಯಬೇಕಿದ್ದ ವಿದ್ಯಾರ್ಥಿನಿಗೆ ಸೊನ್ನೆ ನೀಡಿದ್ದ ಶಿಕ್ಷಕಿ ಅಮಾನತು!

Pinterest LinkedIn Tumblr


ತೆಲಂಗಾಣ ರಾಜ್ಯ ಶಿಕ್ಷಣ ಮಂಡಳಿ ನಡೆಸುವ 12ನೇ ತರಗತಿ (ಪಿಯುಸಿ) ಪರೀಕ್ಷೆ ಫಲಿತಾಂಶ ಏಪ್ರಿಲ್ 18ರಂದು ಪ್ರಕಟವಾಗಿತ್ತು. ಆದರೆ ಮೌಲ್ಯಮಾಪನದ ಗೊಂದಲದಿಂದಾಗಿ ಭಾರೀ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದರು. 90ಕ್ಕಿಂತಲೂ ಹೆಚ್ಚಿನ ಅಂಕ ಪಡೆಯಬೇಕಿದ್ದ ವಿದ್ಯಾರ್ಥಿಗಳು ಸೊನ್ನೆ ಅಂಕ ಪಡೆದಿದ್ದಾರೆ.

ನವ್ಯಾ ಎಂಬ ವಿದ್ಯಾರ್ಥಿನಿ ತೆಲುಗು ವಿಷಯದಲ್ಲಿ ಸೊನ್ನೆ ಅಂಕ ಗಳಿಸಿದ್ದರು. ಇದರ ಬಗ್ಗೆ ಪರಿಶೀಲನೆ ನಡೆಸಿದಾಗ ಶಿಕ್ಷಕಿ ಮಾಡಿದ ತಪ್ಪಿನಿಂದಾಗಿ ಆ ವಿದ್ಯಾರ್ಥಿನಿ ಸೊನ್ನೆ ಅಂಕ ಪಡೆಯಬೇಕಾಗಿತ್ತು. ವಾಸ್ತವದಲ್ಲಿ ಆ ವಿದ್ಯಾರ್ಥಿನಿ 99 ಅಂಕ ಗಳಿಸಿದ್ದರು.

ಈ ಪ್ರಕರಣ ಸಂಬಂಧ ನೇಮಿಸಲ್ಪಟ್ಟ ಮೂರು ಜನ ಸದಸ್ಯರಿದ್ದ ಸಮಿತಿಯು ಸರ್ಕಾರದ ಶಿಕ್ಷಣ ಮಂಡಳಿಗೆ (ಬಿಐಇ) ವರದಿ ನೀಡಿ, ಕರ್ತವ್ಯಲೋಪ ಎಸಗಿದ್ದ ಶಿಕ್ಷಕಿ ಮೇಲೆ ಶಿಸ್ತುಕ್ರಮ ಜರುಗಿಸುವಂತೆ ಶಿಫಾರಸ್ಸು ಮಾಡಿತ್ತು. ಶಿಫಾರಸ್ಸಿನಂತೆ ಬಿಐಇ ಭಾನುವಾರ ಶಿಕ್ಷಕಿ ಉಮಾದೇವಿ ಅವರಿಗೆ 5 ಸಾವಿರ ದಂಡ ವಿಧಿಸಿದೆ. ಅಲ್ಲದೇ, ಈ ಪ್ರಮಾದ ತಡೆಗಟ್ಟಲು ವಿಫಲರಾದ ಮೇಲ್ವಿಚಾರಕ, ಬುಡಕಟ್ಟು ಕಲ್ಯಾಣ ಶಾಲೆಯ ಶಿಕ್ಷಕ ವಿಜಯ್​ ಕುಮಾರ್​ ಅವರನ್ನು ಅಮಾನತು ಮಾಡಿದೆ.

ಖಾಸಗಿ ಶಾಲಾ ಶಿಕ್ಷಕಿಯಾಗಿರುವ ಉಮಾದೇವಿ, 12 ತರಗತಿಯ ನವ್ಯಾ ಎಂಬ ವಿದ್ಯಾರ್ಥಿನಿಯ ತೆಲುಗು ಪತ್ರಿಕೆಯನ್ನು ಮೌಲ್ಯಮಾಪನ ಮಾಡಿದ್ದರು. ಈ ಪತ್ರಿಕೆಯಲ್ಲಿ ವಿದ್ಯಾರ್ಥಿನಿ 99 ಅಂಕ ಗಳಿಸಿದ್ದರು. ಆದರೆ, ಶಿಕ್ಷಕಿ ಆಕೆಗೆ ಸೊನ್ನೆ ಅಂಕ ನೀಡಿದ್ದರು. ಖಾಸಗಿ ಶಾಲಾ ಆಡಳಿತ ಮಂಡಳಿ ಶಿಕ್ಷಕಿ ಉಮಾದೇವಿ ಅವರನ್ನು ಹೊರಹಾಕಿದೆ.

ಫಲಿತಾಂಶದಲ್ಲಿ ಉಂಟಾದ ಎಡವಟ್ಟಿನಿಂದಾಗಿ ಈಗಾಗಲೇ ತೆಲಂಗಾಣದಲ್ಲಿ 20 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೋಷಕರು ಬೀದಿಗಿಳಿದು ಬೃಹತ್​ ಪ್ರತಿಭಟನೆ ನಡೆಸಿದ್ದಾರೆ. ತೆಲಂಗಾಣ ಮಾಧ್ಯಮಿಕ ಶಿಕ್ಷಣ ಮಂಡಳಿ ಹಾಗೂ ಸರ್ಕಾರ ಆಗಿರುವ ತಪ್ಪನ್ನು ಒಪ್ಪಿಕೊಂಡು, ತನಿಖೆಗೆ ಆದೇಶಿಸಿದೆ. ಅಲ್ಲದೇ ಫೇಲಾಗಿರುವ ಮೂರು ಲಕ್ಷ ವಿದ್ಯಾರ್ಥಿಗಳ ಉತ್ತರಪತ್ರಿಕೆಯನ್ನು ಮತ್ತೊಮ್ಮೆ ಉಚಿತವಾಗಿ ಮರುಮೌಲ್ಯಮಾಪನ ನಡೆಸುವುದಾಗಿ ಘೋಷಿಸಿದೆ.

Comments are closed.