ನವದೆಹಲಿ: ಮೋದಿ ಜೀವನಚರಿತ್ರೆಯ ಕುರಿತು ಮೂಡಿಬರುತ್ತಿರುವ ‘ಮೋದಿ; ಸಾಮಾನ್ಯ ವ್ಯಕ್ತಿಯ ಜೀವನ ಪಯಣ’ ಎಂಬ ವೆಬ್ ಸೀರೀಸ್ ಅನ್ನು ಚುನಾವಣೆ ಮುಗಿಯುವವರೆಗೆ ಪ್ರಕಟಿಸದಂತೆ ಎರೋಸ್ ನೌ ಸಂಸ್ಥೆಗೆ ಚುನಾವಣಾ ಆಯೋಗ ಸೂಚನೆ ನೀಡಿದೆ.
ಅಲ್ಲದೆ, ವೆಬ್ ಸೀರೀಸ್ನ ಎಲ್ಲ ಎಪಿಸೋಡ್ಗಳನ್ನೂ ವೆಬ್ಸೈಟ್ನಿಂದ ಡಿಲೀಟ್ ಮಾಡುವಂತೆ ಆದೇಶ ನೀಡಲಾಗಿದೆ. ಈ ಬಗ್ಗೆ ಏ. 13ರಂದು ಚುನಾವಣಾ ಆಯೋಗದ ಮೆಟ್ಟಿಲೇರಿದ್ದ ಕಾಂಗ್ರೆಸ್, ವೆಬ್ ಸೀರೀಸ್ ರಿಲೀಸ್ ಮಾಡುವ ಮೂಲಕ ನೀತಿ ಸಂಹಿತೆಯನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿತ್ತು. ಈ ವೆಬ್ ಸೀರೀಸ್ ನೋಡುಗರ ಮತ್ತು ಮತದಾರರ ಮೇಲೆ ಪ್ರಭಾವ ಬೀರಲಿದೆ. ಹಾಗಾಗಿ, ಲೋಕಸಭಾ ಚುನಾವಣೆ ಮುಗಿಯುವವರೆಗೆ ಈ ವೆಬ್ ಸೀರೀಸ್ ಪ್ರಕಟವಾಗದಂತೆ ತಡೆಯೊಡ್ಡಬೇಕು ಎಂದು ದೂರಿನಲ್ಲಿ ಹೇಳಲಾಗಿತ್ತು.
ಪ್ರಧಾನಿ ನರೇಂದ್ರ ಮೋದಿ ಅವರ ಜೀವನಕತೆಯನ್ನು ಹೇಳುವ ಈ ವೆಬ್ ಸೀರೀಸ್ನಲ್ಲಿ ಮೋದಿ 12 ವರ್ಷದವರಾಗಿದ್ದಾಗಿನಿಂದ ಪ್ರಧಾನಿಯಾಗುವವರೆಗೆ ಯಾವೆಲ್ಲ ಕಷ್ಟ, ಸವಾಲುಗಳನ್ನು ಎದುರಿಸಿದರು ಎಂಬ ಬಗ್ಗೆ ತಿಳಿಸಲಾಗಿದೆ. ಏ. 3ರಿಂದ ಈ ವೆಬ್ ಸೀರೀಸ್ನ ಎಪಿಸೋಡ್ಗಳು ಪ್ರಕಟವಾಗಲಾರಂಭಿಸಿವೆ. ಈಗಾಗಲೇ 5 ಎಪಿಸೋಡ್ಗಳು ಪ್ರಕಟವಾಗಿದ್ದು, ವೆಬ್ಸೈಟ್ನಿಂದ ಅವುಗಳನ್ನೆಲ್ಲ ಡಿಲೀಟ್ ಮಾಡುವಂತೆ ಸೂಚಿಸಲಾಗಿದೆ. ಈ ಹಿಂದೆ ಮೋದಿ ಜೀವನಕತೆಯನ್ನಾಧರಿಸಿದ, ವಿವೇಕ್ ಒಬೆರಾಯ್ ಅಭಿನಯದ ಬಾಲಿವುಡ್ ಸಿನಿಮಾಗೆ ಕೂಡ ತಡೆ ನೀಡಲಾಗಿತ್ತು. ಲೋಕಸಭಾ ಚುನಾವಣೆ ಮುಗಿಯುವವರೆಗೆ ಸಿನಿಮಾ ಬಿಡುಗಡೆ ಮಾಡದಂತೆ ಆದೇಶಿಸಲಾಗಿತ್ತು.