ಮನೋರಂಜನೆ

ಬಾಲಿವುಡ್‌ ನಟಿ ಊರ್ಮಿಳಾ ಮಾತೊಂಡ್ಕರ್‌ ಕಾಂಗ್ರೆಸ್‌ ಸೇರ್ಪಡೆ

Pinterest LinkedIn Tumblr

ನವದೆಹಲಿ: ಬಾಲಿವುಡ್​​ ಖ್ಯಾತ ನಟಿ ಊರ್ಮಿಳಾ ಮಾತೊಂಡ್ಕರ್‌ ಇಂದು ಕಾಂಗ್ರೆಸ್​ ಸೇರ್ಪಡೆಯಾಗಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್​​ ಗಾಂಧಿಯವರ ಸಮ್ಮುಖದಲ್ಲೇ ಈ ರಂಗೀಲಾ ಬೆಡಗಿ ಸೇರ್ಪಡೆಯಾಗಿದ್ದು, ಮುಂಬೈ ಉತ್ತರ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಗಳಿವೆ ಎಂದು ನ್ಯೂಸ್​​-18ಗೆ ಕಾಂಗ್ರೆಸ್​​ ಮೂಲಗಳು ತಿಳಿಸಿವೆ. ಹೀಗಾಗಿ ಒಂದು ವೇಳೆ ಊರ್ಮಿಳಾ ಮುಂಬೈ ಉತ್ತರ ಕ್ಷೇತ್ರದದಿಂದಲೇ ಕಣಕ್ಕಿಳಿದರೇ ಬಿಜೆಪಿ ಅಭ್ಯರ್ಥಿಗೆ ಪ್ರಬಲ ಪೈಪೋಟಿ ನೀಡಲಿದ್ದಾರೆ ಎಂಬ ಚರ್ಚೆಡ ಈಗಾಗಲೇ ಶುರುವಾಗಿದೆ.

ಇನ್ನು ಕಾಂಗ್ರೆಸ್​​ ಅಧ್ಯಕ್ಷ ರಾಹುಲ್​​ ಗಾಂಧಿಯವರು ಊರ್ಮಿಳಾ ಮಾತೊಂಡ್ಕರ್ ಅವರನ್ನು ಪಕ್ಷಕ್ಕೆ ಸ್ವಾಗತಿಸಿದರು. ಈ ವೇಳೆ ಮುಂಬೈ ಕಾಂಗ್ರೆಸ್​ ಅಧ್ಯಕ್ಷ ಮಿಲಿಂದ್‌ ದೇವ್ರಾ ಮತ್ತು ಪಕ್ಷದ ವಕ್ತಾರೆ ಪ್ರಿಯಾಂಕ ಚತುರ್ವೇದಿ ಸೇರಿದಂತೆ ರಣದೀಪ್‌ ಸುರ್ಜೆವಾಲರು ಕೂಡ ಹಾಜರಿದ್ದರು. ಊರ್ಮಿಳಾ ಅವರಿಗೆ ಕಾಂಗ್ರೆಸ್​​ ಶಾಲು ಹೊದಿಸುವ ಮೂಲಕ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆ ಮಾಡಿಕೊಳ್ಳಲಾಯ್ತು.

ಕಾಂಗ್ರೆಸ್​​ ಸೇರ್ಪಡೆಯಾದ ಬಳಿಕ ಸುದ್ದಿಗಾರರ ಜತೆಗೆ ಮಾತಾಡಿದ ಬಾಲಿವುಡ್​​ ನಟಿ ಊರ್ಮಿಳಾ ಮಾತೊಂಡ್ಕರ್​​​, ಕಾಂಗ್ರೆಸ್​​ ಪಕ್ಷದಲ್ಲಿ ನನಗೆ ಭಾರೀ ನಂಬಿಕೆಯಿದೆ. ಹೀಗಾಗಿ ಈ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ. ಪಕ್ಷ ನನ್ನನ್ನು ತುಂಬು ಹೃದಯದಿಂದ ಸ್ವಾಗತಿಸಿದೆ. ನನ್ನನ್ನು ಪಕ್ಷಕ್ಕೆ ಬರಮಾಡಿಕೊಂಡ ರಾಹುಲ್‌ ಗಾಂಧಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಇವತ್ತು ನನ್ನ ಪಾಲಿಗೆ ಮಹತ್ವದ ದಿನ ಎಂದರು.

ಇಂದಿನಿಂದ ನಾನು ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸುತ್ತಿದ್ದೇನೆ. ದೇಶಕ್ಕಾಗಿ ಪ್ರಾಣತೆತ್ತ ಮಹಾತ್ಮಾ ಗಾಂಧೀಜಿ, ಜವಹರಲಾಲ್‌ ನೆಹರೂ ಮತ್ತು ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಅಂತಹ ಹೋರಾಟಗಾರರ ಚಿಂತನೆಗಳಿಂದ ಪ್ರಭಾವಿತಗೊಂಡಿದ್ದೇನೆ. ನಮ್ಮ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಬಗೆಗಿನ ಮಹತ್ವದ ಕುರಿತು ಕಾಂಗ್ರೆಸ್ ಪ್ರತಿ ಹಂತದಲ್ಲೂ ಉತ್ತಮ ಸಂದೇಶ ಸಾರಿದೆ. ಈ ಪಕ್ಷದಲ್ಲಿ ನನಗೆ ನಂಬಿಕೆಯಿದೆ ಎಂದು ತಿಳಿಸಿದರು.

ಚುನಾವಣೆ ಹೊತ್ತಲ್ಲಿಯೇ ವಿವಿಧ ಕ್ಷೇತ್ರದ ಗಣ್ಯರು ರಾಜಕೀಯಕ್ಕೆ ಪ್ರವೇಶ ಮಾಡುವುದು ಸಾಮಾನ್ಯ. ಆದರೀಗ ಕಾಂಗ್ರೆಸ್​​​ ಬಾಲಿವುಡ್​​ ನಟಿ ಊರ್ಮಿಳಾ ಮಾತೊಂಡ್ಕರ್​​ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮತದಾರರನ್ನು ಸುಲಭವಾಗಿ ಪಕ್ಷದತ್ತ ಸೆಳೆಯಬಹುದು ಎಂಬುದು ಅಸಲಿ ಲೆಕ್ಕಚಾರ.

Comments are closed.