ರಾಷ್ಟ್ರೀಯ

ಈಗ ಎದ್ದಿದೆ ಮೋದಿ ಅಲೆ : ಬಿಜೆಪಿ ನಾಯಕರಲ್ಲಿ ಹೆಚ್ಚಿದ ವಿಶ್ವಾಸ

Pinterest LinkedIn Tumblr


ಬೆಂಗಳೂರು: ಲೋಕಸಭಾ ಚುನಾವಣೆಯ ಕಾವು ಆರಂಭವಾಗುವ ಹೊತ್ತಿನಲ್ಲಿ ತುಸು ಆತಂಕದಲ್ಲಿದ್ದ ರಾಜ್ಯ ಬಿಜೆಪಿ ಹಾಲಿ ಸಂಸದರು ಹಾಗೂ ಸಂಭಾವ್ಯ ಅಭ್ಯರ್ಥಿಗಳು ಇದೀಗ ಪ್ರಧಾನಿ ನರೇಂದ್ರ ಮೋದಿ ಅಲೆಯ ಭರವಸೆಯಲ್ಲಿ ತೇಲುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಹಾಲಿ ಸಂಸದರ ಪೈಕಿ ಕೆಲವರಿಗೆ ಟಿಕೆಟ್ ನೀಡುವುದಕ್ಕೆ ಸ್ಥಳೀಯ ಮಟ್ಟದಲ್ಲಿ ವಿರೋಧದ ಅಲೆ ಇದ್ದರೂ ಎಲ್ಲರಿಗೂ ಟಿಕೆಟ್ ನೀಡಲು ಮುಂದಾಗಿರು ವುದಕ್ಕೆ ಮೋದಿ ಬಗ್ಗೆ ವ್ಯಕ್ತವಾಗುತ್ತಿರುವ ಒಲವು ಕಾರಣ ಎನ್ನಲಾಗಿದೆ.

ಪಾಕಿಸ್ತಾನದ ನೆಲದೊಳಗೆ ಪ್ರವೇಶಿಸಿ ಕ್ಷಿಪ್ರ ವಾಯು ದಾಳಿ ಮೂಲಕ ಉಗ್ರರ ನೆಲೆ ಧ್ವಂಸಗೊಳಿಸುವ ದಿಟ್ಟ ನಿಲುವು ಕೈಗೊಂಡ ಪ್ರಧಾನಿ ಮೋದಿ ಅವರ ಬಗ್ಗೆ ಏಕಾಏಕಿ ಅಪಾರ ಪ್ರಮಾಣದ ಮೆಚ್ಚುಗೆ, ಪ್ರಶಂಸೆ ವ್ಯಕ್ತವಾಗತೊಡಗಿದೆ. ಇದರಿಂದ ಸೋಲಿನ ಆತಂಕದಲ್ಲಿದ್ದ ಕೆಲವು ಸಂಸದರು ನೆಮ್ಮದಿಯ ನಿಟ್ಟುಸಿರು ಬಿಟ್ಟಿ ದ್ದಾರೆ. ರಾಜ್ಯ ಬಿಜೆಪಿ ನಾಯಕರೂ ಇದೀಗ ಹೆಮ್ಮೆಯಿಂದ ಪ್ರಚಾರ ನಡೆಸಲು ಮುಂದಾಗುತ್ತಿರುವುದು ಕಂಡು ಬರುತ್ತಿದೆ.

ಒಟ್ಟು 16 ಹಾಲಿ ಸಂಸದರ ಪೈಕಿ ಮೂರ್ನಾಲ್ಕು ಕ್ಷೇತ್ರಗಳಲ್ಲಿ ವಿರೋಧಿ ಅಲೆ ಬೀಸುತ್ತಿರುವುದು ವರಿಷ್ಠರ ಗಮನಕ್ಕೆ ಹೋಗಿತ್ತು. ಹೀಗಾಗಿ, ಪರ್ಯಾಯ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ತೆರೆಮರೆಯ ಪ್ರಯತ್ನವೂ ನಡೆದಿತ್ತು. ಆದರೆ, ಹಾಗೆ ಮಾಡುವು ದರಿಂದ ಹೊಸ ಗೊಂದಲ ಸೃಷ್ಟಿಯಾಗಬಹುದು ಎಂಬ ಕಾರಣಕ್ಕಾಗಿ ಸ್ಪಷ್ಟ ನಿರ್ಧಾರ ಕೈಗೊಳ್ಳದೆ ರಾಜ್ಯ ನಾಯಕರು ಮುಂದೂಡುತ್ತಲೇ ಬಂದಿದ್ದರು. ಯಾವಾಗ ಪ್ರಧಾನಿ ಮೋದಿ ಅವರ ಜನಪ್ರಿಯತೆ ದಿಢೀರನೆ ಮೇಲಕ್ಕೇರಿತೊ ರಾಜ್ಯ ಬಿಜೆಪಿ ನಾಯಕರ ಮುಖದಲ್ಲಿ ಮಂದಹಾಸ ಕಂಡಿತು.

ಹೀಗಾಗಿ, ಈಗಿರುವ ಸಂಸದರನ್ನೇ ಮತ್ತೊಮ್ಮೆ ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳಬಹುದು ಎಂಬ ವಿಶ್ವಾಸ ರಾಜ್ಯ ನಾಯಕರಿಗೆ ಬಂದಿತು ಎಂದು ತಿಳಿದು ಬಂದಿದೆ.

Comments are closed.