
ಹೊಸದಿಲ್ಲಿ: ಮತದಾರರ ಮೇಲೆ ಕೊನೆಯ ಕ್ಷಣದಲ್ಲಿ ಪ್ರಭಾವ ಬೀರುವುದನ್ನು ತಪ್ಪಿಸಲು ಚುನಾವಣಾ ವ್ಯವಸ್ಥೆಯಲ್ಲಿ ನಿಗದಿಯಾಗಿರುವ ಕೊನೆಯ 48 ಗಂಟೆಗಳ ಬಹಿರಂಗ ಪ್ರಚಾರ ನಿರ್ಬಂಧವನ್ನು ಸಾಮಾಜಿಕ ಮಾಧ್ಯಮಗಳಿಗೂ ವಿಸ್ತರಿಸಲು ಗಂಭೀರ ಚಿಂತನೆ ನಡೆದಿದೆ. ಇದು ಕಾರ್ಯಗತಗೊಂಡರೆ ಪತ್ರಿಕೆ, ಮಾಧ್ಯಮಗಳಂತೆ ವಾಟ್ಸ್ ಆ್ಯಪ್, ಫೇಸ್‌ಬುಕ್, ಟ್ವಿಟರ್‌ನಂಥ ಜಾಲ ತಾಣಗಳಲ್ಲೂ ಈ ಅವಧಿಯಲ್ಲಿ ಯಾವುದೇ ಚುನಾವಣಾ ಸಂಬಂಧಿ ಸುದ್ದಿಗಳನ್ನು ಹಂಚುವಂತಿಲ್ಲ.
ಜನಪ್ರಾತಿನಿಧ್ಯ ಕಾಯಿದೆ 1951ರ ಸೆಕ್ಷನ್ 126ರಲ್ಲಿ ಮಾಡಬಹುದಾದ ಬದಲಾವಣೆಗಳ ಬಗ್ಗೆ ಸಲಹೆ ಕೋರಿ ಚುನಾವಣಾ ಆಯೋಗ 10 ಮಂದಿ ಸದಸ್ಯರ ಸಮಿತಿಯನ್ನು ರಚಿಸಿತ್ತು. ಸೆಕ್ಷನ್ 126 ‘ಮೌನದ ಅವಧಿ’ಯನ್ನು ಸ್ಪಷ್ಟವಾಗಿ ಉಲ್ಲೇಖಿಸುತ್ತಿದ್ದು, ಮತದಾನ ನಡೆಯುವ ಪ್ರದೇಶದಲ್ಲಿ ಎಲ್ಲ ರೀತಿಯ ಬಹಿರಂಗ ಪ್ರಚಾರವನ್ನು ನಿರ್ಬಂಧಿಸುತ್ತದೆ. ಸಮಿತಿಯು ಮತದಾನ ಮುಕ್ತಾಯದ 48 ಗಂಟೆ ಮುನ್ನ ಜಾಲತಾಣದಲ್ಲೂ ಪ್ರಚಾರ ಅಂತ್ಯಗೊಳಿಸಬೇಕೆಂದು ಹೇಳಿದೆ.
ಇದನ್ನು ಕಾರ್ಯಗತಗೊಳಿಸುವುದಕ್ಕಾಗಿ ಮಾಹಿತಿ ತಂತ್ರಜ್ಞಾನ ಕಾಯಿದೆ 2000ರ ಅಂಶಗಳನ್ನು ಬಳಸಿಕೊಂಡು ಜನಪ್ರಾತಿನಿಧ್ಯ ಕಾಯಿದೆಗೆ ತಿದ್ದುಪಡಿ ತರಬೇಕೆಂದು ಸೂಚಿಸಲಾಗಿದೆ.
ಕ್ಯಾಂಬ್ರಿಜ್ ಅನಲಿಟಿಕಾ ಸಂಸ್ಥೆ ಭಾರತದ ಫೇಸ್‌ಬುಕ್ ಬಳಕೆದಾರರ ಮಾಹಿತಿಯನ್ನು ಚುನಾವಣಾ ಅಕ್ರಮಕ್ಕಾಗಿ ಬಳಸಿತ್ತು ಎಂಬ ಆಪಾದನೆಗಳ ಹಿನ್ನೆಲೆಯಲ್ಲಿ ಯೂ ಈ ಕ್ರಮ ಮಹತ್ವ ಪಡೆದಿದೆ.
ನಿಷೇಧ ಯಾಕೆ ಅಗತ್ಯ?
ರಾಜಕೀಯ ಪಕ್ಷಗಳು ಮತ್ತು ಕಾರ್ಯಕರ್ತರು ಸುಳ್ಳು ಮತ್ತು ದ್ವೇಷಪೂರಿತ ಸುದ್ದಿಗಳನ್ನು ಹರಡಲು ಜಾಲ ತಾಣಗಳನ್ನು ಸುಲಭ ದಾರಿಯಾಗಿ ಬಳಸುತ್ತಿದ್ದಾರೆ. ಇದು ಕೊನೆಯ ಹಂತದಲ್ಲಿ ಹೆಚ್ಚು ತೀವ್ರವಾಗುತ್ತದೆ. ಈ ಪಿಡುಗು ಜಾಗತಿಕವಾಗಿದ್ದರೂ ಭಾರತದಲ್ಲಿ ಹೆಚ್ಚು ವ್ಯಾಪಕವಾಗಿದೆ. ಜನರನ್ನು ಪ್ರಭಾವಿತಗೊಳಿಸಿ ದಿಕ್ಕು ತಪ್ಪಿಸುವುದನ್ನು ತಡೆಯಲು ಈ ನಿರ್ಬಂಧ ಅಗತ್ಯ ಎಂದು ಪ್ರತಿಪಾದಿಸಲಾಗಿದೆ.
ಮೌನದ ಅವಧಿ ಪವಿತ್ರ
ಚುನಾವಣೆಯಲ್ಲಿ 48 ಗಂಟೆಗಳ ಮೌನದ ಅವಧಿ ಅತ್ಯಂತ ‘ಪವಿತ್ರ’ವಾಗಿದ್ದು, ಮತದಾರರು ಯಾವುದೇ ಪ್ರಭಾವಗಳಿಗೆ ಒಳಗಾಗದೆ ಸ್ವತಂತ್ರವಾಗಿ ತಮ್ಮ ನಿರ್ಧಾರದ ಬಗ್ಗೆ ಚಿಂತಿಸಲು ಅವಕಾಶ ಮಾಡಿಕೊಡುತ್ತದೆ.
ನಿರ್ಬಂಧ ಹೇಗೆ?
– ಎಲ್ಲ ಚುನಾವಣೆ ಸುದ್ದಿಗಳ ಮೇಲೆ ನಿಗಾ
– ಎಡ್ಮಿನ್‌ಗಳಿಗೆ ಕಠಿಣ ಕ್ರಮದ ಎಚ್ಚರಿಕೆ
– ಸಿಕ್ಕಿಬಿದ್ದವರ ಮೇಲೆ ತೀವ್ರ ಕ್ರಮ ಸಾಧ್ಯತೆ
Comments are closed.