ರಾಷ್ಟ್ರೀಯ

ಅಜರ್​​​ಗೆ ಆರೋಗ್ಯ ಸರಿ ಇಲ್ಲ, ಮನೆಯಿಂದ ಹೊರಬರಲೂ ಸಾಧ್ಯವಾಗುತ್ತಿಲ್ಲ!- ಪಾಕ್

Pinterest LinkedIn Tumblr


ನವದೆಹಲಿ: ಜೈಷ್-ಇ-ಮೊಹ್ಮದ್​ ಉಗ್ರ ಸಂಘಟನೆಯ ಸ್ಥಾಪಕ ಮೌಲಾನ ಮಸೂದ್​ ಅಜರ್​ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಲು ಭಾರತ ಸೇರಿ ಬಲಿಷ್ಠ ರಾಷ್ಟ್ರಗಳು ಪಟ್ಟು ಹಿಡಿದಿವೆ. ಈ ವಿಚಾರಕ್ಕೆ ಚೀನಾ ನಿರಂತರವಾಗಿ ಅಡ್ಡಗಾಲು ಹಾಕುತ್ತಲೇ ಇದೆ. ಈಗ ಮಸೂದ್​ ಅಜರ್​ ಬಗ್ಗೆ ಬಾಯ್ಬಿಟ್ಟಿರುವ ಪಾಕಿಸ್ತಾನ, ಆತನ​ ಆರೋಗ್ಯ ಸರಿ ಇಲ್ಲ ಎಂದು ಹೇಳಿಕೊಂಡಿದೆ.

ಸಿಎನ್​ಎನ್​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೊಹ್ಮದ್​ ಖುರೇಶಿ, “ಮಸೂದ್​ ಪಾಕಿಸ್ತಾನದಲ್ಲಿ ವಾಸವಾಗಿರುವುದು ಹೌದು. ಆದರೆ, ಆತನ ಆರೋಗ್ಯ ತೀವ್ರವಾಗಿ ಹದಗೆಟ್ಟಿದೆ. ಮಸೂದ್​ ಮನೆಯಿಂದ ಹೊರ ಬರುವ ಸ್ಥಿತಿಯಲ್ಲೂ ಇಲ್ಲ,” ಎಂದಿದ್ದಾರೆ.

ಇನ್ನು, ಮಸೂದ್​ನನ್ನು ಬಂಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಖುರೇಶಿ, “ಆತ ಉಗ್ರ ಎಂಬುದನ್ನು ಪಾಕಿಸ್ತಾನ ನ್ಯಾಯಾಲಯದಲ್ಲಿ ಸಾಬೀತು ಮಾಡಲು ಭಾರತ ನಮಗೆ ಸರಿಯಾದ ಸಾಕ್ಷ್ಯ ಒದಗಿಸಬೇಕು. ಹಾಗಿದ್ದರೆ ಮಾತ್ರ ನಾವು ಅವರನ್ನು ಬಂಧಿಸಲು ಸಾಧ್ಯ,” ಎಂದರು.

ಮಸೂದ್​ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಲು ಅನೇಕ ರಾಷ್ಟ್ರಗಳು ಪ್ರಯತ್ನಿಸುತ್ತಿವೆ. ಆದರೆ, ಚೀನಾ ಮಾತ್ರ ಇದಕ್ಕೆ ಅಡ್ಡಗಾಲು ಹಾಕುತ್ತಿದೆ. ಮಸೂದ್​ ಮೇಲೆ ನಿರ್ಬಂಧ ಹೇರುವ ವಿಚಾರವಾಗಿಯೂ ಖುರೇಶಿ ಮಾತನಾಡಿದ್ದಾರೆ. “ಭಾರತದ ಬಳಿ ಬಲವಾದ ಸಾಕ್ಷ್ಯವಿದ್ದರೆ ಅವರು ಬಂದು ಕುಳಿತು ಮಾತನಾಡಲಿ. ಶಾಂತಿಗೋಸ್ಕರ ಯಾವುದೇ ಕ್ರಮ ಕೈಗೊಂಡರೂ ನಾವು ಅದನ್ನು ಸ್ವಾಗತಿಸುತ್ತೇವೆ,” ಎಂದು ಖುರೇಶಿ ಹೇಳಿದರು.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಅಮೆರಿಕ ಸೇರಿದಂತೆ ಕೆಲ ರಾಷ್ಟ್ರಗಳು ಮಸೂದ್​ನನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಪಟ್ಟು ಹಿಡಿದಿದ್ದವು. ಇದಕ್ಕೆ, ಚೀನಾ ಅಪಸ್ವರ ಎತ್ತಿತ್ತು. ಸರಿಯಾದ ಸಾಕ್ಷ್ಯ ಇಲ್ಲದ ಕಾರಣ ನಾವು ಇದಕ್ಕೆ ಬೆಂಬಲ ಸೂಚಿಸುವುದಿಲ್ಲ ಎಂದು ಹೇಳಿತ್ತು.

ಇನ್ನು, ಪಾಕಿಸ್ತಾನ ಬಂಧಿಸಿರುವ ವಿಂಗ್​ ಕಮಾಂಡರ್​ ಅಭಿನಂದನ್​ ವರ್ತಮಾನ್​ ಅವರನ್ನು ಇಂದು ಬಿಡುಗಡೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಣಿವೆ ರಾಜ್ಯದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

Comments are closed.