ರಾಷ್ಟ್ರೀಯ

ಪಾಕ್ ಗಡಿಯೊಳಗೆ ನುಗ್ಗಿ 350ಕ್ಕು ಹೆಚ್ಚು ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ವಾಯುಪಡೆಯ ವಿಮಾನಗಳು

Pinterest LinkedIn Tumblr

ನವದೆಹಲಿ: ಭಾರತೀಯ ವಾಯುಪಡೆಯ ವಿಮಾನಗಳು ಮಂಗಳವಾರ ಬೆಳಗಿನ ಜಾವ ಪಾಕಿಸ್ತಾನದ ಗಡಿಯೊಳಗೆ ನುಗ್ಗಿ 350ಕ್ಕು ಹೆಚ್ಚು ಉಗ್ರರನ್ನು ಹೊಡೆದುರುಳಿಸುವ ಮೂಲಕ ಪುಲ್ವಾಮ ಉಗ್ರ ದಾಳಿಗೆ ಪ್ರತೀಕಾರ ತೀರಿಸಿಕೊಂಡಿದೆ.

ಇಂದು ಬೆಳಗಿನ ಜಾವ 3.30ಕ್ಕೆ ಪಾಕಿಸ್ತಾನದ ಬಾಲಕೋಟ್ ಗೆ ನುಗ್ಗಿದ ಭಾರತೀಯ ವಾಯುಪಡೆಯ 12 ಮಿರಾಜ್-2000 ಯುದ್ಧ ವಿಮಾನಗಳು, ಅಲ್ಲಿರುವ ಉಗ್ರರ ಅಡಗು ತಾಣಗಳನ್ನು ಧ್ವಂಸಗೊಳಿಸಿವೆ.

ಪುಲ್ವಾಮಾ ದಾಳಿ ನಡೆಸಿದ ಜೈಷೆ ಉಗ್ರ ಸಂಘಟನೆಯ ಬಾಲಕೋಟ್‌, ಚಕೋಟಿ, ಮುಜಾಫರಬಾದ್‌ನಲ್ಲಿದ್ದ ನೆಲೆಗಳನ್ನು ಸಂಪೂರ್ಣವಾಗಿ ನಾಶ ಮಾಡಲಾಗಿದೆ.

ಸುಮಾರು 1000 ಕೆಜಿ ಬಾಂಬ್‌ ಅನ್ನು ಉಗ್ರರ ನೆಲೆ ಮೇಲೆ ಹಾಕಲಾಗಿದೆ. ಒಟ್ಟು 12 ಮಿರಾಜ್‌ ಯುದ್ಧ ವಿಮಾನಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವು. 21 ನಿಮಿಷಗಳ ಕಾಲ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರೈಸಿ 12 ವಾಯುಪಡೆ ವಿಮಾನಗಳು ಸುರಕ್ಷಿತವಾಗಿ ವಾಪಸ್‌ ಬಂದಿವೆ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿಗಳು ಖಚಿತಪಡಿಸಿದ್ದಾರೆ.

ವೈಮಾನಿಕ ದಾಳಿ ಬಗ್ಗೆ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ಗುಪ್ತಚರ ಮಾಹಿತಿ ಆಧರಿಸಿದ ಕಾರ್ಯಾಚರಣೆಯಲ್ಲಿ ಭಾರತ ಪಾಕಿಸ್ತಾನದ ಬಾಲಕೋಟ್ ನಲ್ಲಿರುವ ಜೈಶ್-ಇ-ಮೊಹಮ್ಮದ್ ನ ಅತಿ ದೊಡ್ಡ ತರಬೇತಿ ಕ್ಯಾಂಪ್ ಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ. ಈ ದಾಳಿಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜೆಇಎಂ ಭಯೋತ್ಪಾದಕರು, ತರಬೇತಿದಾರರು, ಹಿರಿಯ ಕಮಾಂಡರ್, ಜಿಹಾದಿಗಳನ್ನು ಹತ್ಯೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Comments are closed.