ರಾಷ್ಟ್ರೀಯ

‘ಮಸೂದ್​​​ನನ್ನು ನೀವು ಬಂಧಿಸಿ, ಇಲ್ಲವೇ ನಾವೇ ಬಂಧಿಸುತ್ತೇವೆ: ಪಾಕ್​​ಗೆ ಅಮರೀಂದರ್‌

Pinterest LinkedIn Tumblr


ನವದೆಹಲಿ: “ಜಮ್ಮು-ಕಾಶ್ಮೀರದ ಪುಲ್ವಾಮ ಬಾಂಬ್​​​ ದಾಳಿ ಕೃತ್ಯ ನಾನೇ ಮಾಡಿಸಿದ್ದು ಎಂದು ಹೇಳಿಕೊಂಡಿರುವ ಜೈಶ್​-ಎ-ಮೊಹಮ್ಮದ್​ ಸಂಘಟನೆಯ ಉಗ್ರ ಮಸೂದ್​​​​ ಅಜರ್​ನನ್ನು ನೀವೇ ಬಂಧಿಸಿ; ಇಲ್ಲದೇ ಹೋದರೆ ನಾವೇ ಅರೆಸ್ಟ್​​​ ಮಾಡುತ್ತೇವೆ,” ಎಂದು ಪಂಜಾಬ್​​ ಸಿಎಂ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಪಾಕ್​​​ಗೆ ಎಚ್ಚರಿಕೆ ನೀಡಿದ್ದಾರೆ. “ನಿಮ್ಮದೇ ದೇಶದ​ ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌ ಪಾಕಿಸ್ತಾನದ ಬಹಾವಲಪುರದಲ್ಲಿಯೇ ಇದ್ದಾನೆ. ಮೊದಲು ಆತನನ್ನು ಬಂಧಿಸಿ, ಕಠಿಣ ಕ್ರಮ ಕೈಗೊಳ್ಳಿ,” ಎಂದು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ಗೆ ಅಮರೀಂದರ್​​ ಸಿಂಗ್​​ ಆಗ್ರಹಿಸಿ, ಟ್ವೀಟ್​ ಮಾಡಿದ್ದಾರೆ.

ಭಾರತ ಮೂಲದ 40ಕ್ಕೂ ಹೆಚ್ಚು ಯೋಧರು ಪುಲ್ವಾಮ ಬಾಂಬ್​​ ದಾಳಿಯಲ್ಲಿ ಉಗ್ರರ ಅಟ್ಟಹಾಸಕ್ಕೆ ಬಲಿಯಾಗಿದ್ದರು. ಬಳಿಕ ಈ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡ ಇಲ್ಲ ಎಂದು ಅಲ್ಲಿನ ಪ್ರಧಾನಿ ಇಮ್ರಾನ್​​ ಹೇಳಿದ್ದರು. ಈ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಅಮರೀಂದರ್​​ ಸಿಂಗ್​​, ಯೋಧರ ಸಾವಿಗೆ ಪಶ್ಚಾತ್ತಾಪ ಪಡದೇ ಇಮ್ರಾನ್​​ ಖಾನ್​​ ಸುಖಾಸುಮ್ಮನೇ ಹೇಳಿಕೆ ನೀಡುತ್ತಿದ್ದಾರೆ. ಹೀಗಾಗಿ ನಾವು ಪಾಕ್​​ ಜತೆಗೆ ಬೇರೆಯದೇ ರೀತಿಯಲ್ಲಿ ನಿಷ್ಠುರವಾಗಿ ವ್ಯವಹರಿಸಬೇಕಿದೆ ಎಂದಿದ್ದಾರೆ.

ಇನ್ನು 26/11ರ ಮುಂಬೈ ಉಗ್ರರ ದಾಳಿ ನಡೆದು 10 ವರ್ಷಗಳಾಗುತ್ತ ಬಂದಿದೆ. ಈ ವಿಚಾರದಲ್ಲಿ ನೀವು ಏನು ಮಾಡಿದ್ದೀರಿ ಎಂದು ಕಂಡಿದ್ದೇವೆ. ನಿಮಗೆ ನಿಮ್ಮದೇ ರೀತಿಯಲ್ಲಿ ಉತ್ತರಿಸಬೇಕಿದೆ. ಯಾವುದೇ ಪರಿಸ್ಥಿತಿ ಎದುರಿಸಲು ಭಾರತ ಸರ್ವಸನ್ನದ್ಧವಾಗಿದೆ. ಪುಲ್ವಾಮ ಉಗ್ರ ದಾಳಿಯ ಹೊಣೆಯನ್ನು ಜೈಶ್‌ ಎ ಮೊಹಮ್ಮದ್‌ ಸಂಘಟನೆ ಹೊತ್ತಿದೆ. ಈ ಕೃತ್ಯವನ್ನು ಐಎಸ್‌ಐ ಸಹಾಯದ ಜತೆಗೆ ಎಸಗಿದೆ. ಪಾಕಿಸ್ತಾನದ ಬಹಾವಲಪುರದಲ್ಲೇ ಇರುವ ಆತನನ್ನು ನೀವು ಬಂಧಿಸಿ, ಇಲ್ಲದಿದ್ದರೇ ನಾವೇ ಬಂಧಿಸುತ್ತೇವೆ ಎಂದು ಅಮರೀಂದರ್‌ ಟ್ವೀಟ್​​ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೊಂದೆಡೆ ಪುಲ್ವಾಮಾ ಉಗ್ರ ದಾಳಿಯಲ್ಲಿ ಪಾಕ್‌ ಶಾಮೀಲಾಗಿಲ್ಲ ಎಂದ ಇಮ್ರಾನ್​​ ಖಾನ್​​ಗೆ ಪಿಡಿಪಿ ಅಧ್ಯಕ್ಷೆ ಮೆಹಬೂಬ ಮುಫ್ತಿ ಕೂಡ ಚಾಟಿ ಬೀಸಿದ್ದಾರೆ. ಯೋಧರ ಮೇಲೆ ದಾಳಿ ಮಾಡಿದ್ದ ಜೈಶ್​​ಗೆ ನೀವು ಬೆಂಬಲಿಸಿದರ ಬಗ್ಗೆ ಭಾರತದ ಬಳಿ ಪುರಾವೆ ಇದೆ. ಹೀಗಾಗಿಯೇ ನಿಮ್ಮ ಮೇಲೆ ಭಾರತ ಆರೋಪ ಮಾಡುತ್ತಿದೆ. ನಿಮ್ಮ ದೇಶ ಮೊದಲು ನುಡಿದಂತೆ ನಡೆಯುವುದನ್ನು ಕಲಿಯಬೇಕಿದೆ. ಪಠಾಣ್‌ಕೋಟ್‌ ಉಗ್ರ ದಾಳಿಯ ಬಗ್ಗೆಯೂ ನಿಮಗೆ ಪುರಾವೆ ನೀಡಲಾಗಿತ್ತು. ಆದರೂ ನೀವು ಈ ಬಗ್ಗೆ ಕ್ರಮತೆಗೆದುಕೊಳ್ಳಲಿಲ್ಲ” ಎಂದು ತಿರುಗೇಟು ನೀಡಿದ್ದಾರೆ.

ಇದರ ಜತೆಗೆ ಇಮ್ರಾನ್‌ ಖಾನ್‌ ಇತ್ತೇಚೆಗಷ್ಟೇ ಪಾಕ್​​ ಪ್ರಧಾನಿಯಾಗಿದ್ದಾರೆ. ಅವರೇ ಉಗ್ರರ ವಿರುದ್ಧ ಕ್ರಮ ತೆಗೆದುಕೊಳ್ಳಲು ಒಂದು ಅವಕಾಶ ನೀಡೋಣ. ಚುನಾವಣೆ ಹೊತ್ತಲ್ಲಿಯೇ ಪಾಕ್​​ ವಿರುದ್ಧ ಹೋರಾಟ ಮಾಡುತ್ತೇವೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇಲ್ಲದೇ ಹೋಗಿದ್ದರೇ ಯಾವುದೇ ಕಾರಣಕ್ಕೂ ಪಾಕ್​​ ವಿರುದ್ಧ ಹೋರಾಟದ ಮಾತುಗಳನ್ನು ಆಡುತ್ತಿರಲಿಲ್ಲ ಎಂದು ಕಿಡಿಕಾರಿದ್ದಾರೆ.

ಇತ್ತೇಚೆಗೆ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ವಿಡಿಯೋ ತುಣುಕೊಂದನ್ನು ಬಿಡುಗಡೆ ಮಾಡಿದ್ದರು. ಈ ವಿಡಿಯೋದಲ್ಲಿ ಪಾಕ್​​ ಶಾಂತಿ ಮತ್ತ ಸ್ಥಿರತೆಯನ್ನು ಬಯಸುತ್ತದೆ. ಪುಲ್ವಾಮಾ ಉಗ್ರ ದಾಳಿ ನಡೆಸಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಪೂರಕ ದಾಖಲೆಗಳನ್ನು ನೀಡಿ. ಬಳಿಕ ಜೈಶ್​​​ ಸಂಘಟನೆ ವಿರುದ್ಧ ನಾವು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದರು. ಇದಕ್ಕೆ ಇಡೀ ಪ್ರಪಂಚವೇ ವ್ಯಾಪಕ ವಿರೋಧ ವ್ಯಕ್ತಪಡಿಸಿತ್ತು.

Comments are closed.