ರಾಷ್ಟ್ರೀಯ

ಭಾರತದ ಮೇಲಿನ ದಾಳಿಕೋರರನ್ನು ಭಾರತಕ್ಕೊಪ್ಪಿಸುವಂತೆ ಇಮ್ರಾನ್‍ಗೆ ಸಲಹೆ ನೀಡಿ: ಸಿಧುಗೆ ದಿಗ್ವಿಜಯ್ ಕಿವಿಮಾತು

Pinterest LinkedIn Tumblr

ನವದೆಹಲಿ: ಭಾರತದ ಮೇಲಿನ ದಾಳಿಕೋರರನ್ನು ಭಾರತಕ್ಕೊಪ್ಪಿಸುವಂತೆ ಗೆಳೆಯ ಇಮ್ರಾನ್ ಖಾನ್‍ಗೆ ಸಲಹೆ ನೀಡುವಂತೆ ತಮ್ಮದೇ ಪಕ್ಷದ ಸಿಧುಗೆ ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಕಿವಿಮಾತು ಹೇಳಿದ್ದಾರೆ.

“ಪಾಕಿಸ್ತಾನದ ಪ್ರಧಾನಿ, ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ದಿಟ್ಟತನ ಪ್ರದರ್ಶಿಸುವ ಸಮಯ ಬಂದಿದ್ದು, ಉಗ್ರರನ್ನು ಮಟ್ಟ ಹಾಕಬೇಕು. ಹಫೀಜ್ ಸಯೀದ್, ಮಸೂದ್ ಅಜರ್ ಮೊದಲಾದ ದಾಳಿ ಸಂಚು ರೂಪಿಸಿರುವ ದುಷ್ಕರ್ಮಿಗಳನ್ನು ಭಾರತಕ್ಕೆ ಒಪ್ಪಿಸಬೇಕು. ಈ ಬಗ್ಗೆ ಸಲಹೆ ನೀಡಿ” ಎಂದು ಸರಣಿ ಟ್ವೀಟ್ ಮೂಲಕ ಹೇಳಿದ್ದಾರೆ.

ಮುಂದಿನ ಹತ್ತು ವರ್ಷಗಳಲ್ಲಿ ಕಾಶ್ಮೀರಿ ಮುಸ್ಲಿಮ್ ಹಾಗೂ ಕಾಶ್ಮೀರಿ ಪಂಡಿತರ ನಡುವೆ ಸೋದರ ಭಾವ ಮೂಡಲು ಬೇಕಾದ ನಕ್ಷೆ ರೂಪಿಸುವಂತೆ ಬಿಜೆಪಿ, ಕಾಂಗ್ರೆಸ್, ಪಿಡಿಪಿ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳ ಮುಖಂಡರಲ್ಲಿ ದಿಗ್ವಿಜಯ್ ಸಿಂಗ್ ಮನವಿ ಮಾಡಿದ್ದಾರೆ.

“ಪ್ರಧಾನಿ ನರೇಂದ್ರ ಮೋದಿ ಬೆಂಬಲಿಗರು ಕಾಲೆಳೆದರೂ ಪರವಾಗಿಲ್ಲ. ಐಎಸ್‍ಐ ಪ್ರಾಯೋಜಿತ ಉಗ್ರ ಸಂಘಟನೆಗಳು ಮತ್ತು ಮುಸ್ಲಿಂ ಮೂಲಭೂತವಾದಿಗಳನ್ನು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪರಿಗಣನೆಗೆ ತೆಗೆದುಕೊಂಡಿದ್ದಾರೆ ಎಂಬುದನ್ನು ನಂಬುವುದಿಲ್ಲ”ಎಂದು ತಿಳಿಸಿದ್ದಾರೆ.

ದೇಶಾದ್ಯಂತ ಇರುವ ಕಾಶ್ಮೀರಿ ವಿದ್ಯಾರ್ಥಿಗಳು ಹಾಗೂ ವ್ಯಾಪಾರಿಗಳ ಮೇಲಿನ ಕಿರುಕುಳದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ದಿಗ್ವಿಜಯ್ ಸಿಂಗ್, ಅನಗತ್ಯವಾಗಿ ಇಂತಹ ಕಿರುಕುಳ ನೀಡಕೂಡದು. ಕಾಶ್ಮೀರಿಗರೇ ಇಲ್ಲದ ಕಾಶ್ಮೀರವನ್ನು ನಾವು ನೋಡಬೇಕೇ ಎಂದು ಸರಣಿ ಟ್ವೀಟ್‍ನಲ್ಲಿ ಪ್ರಶ್ನಿಸಿದ್ದಾರೆ.

Comments are closed.