ರಾಷ್ಟ್ರೀಯ

ಪುಲ್ವಾಮಾದಲ್ಲಿ ಯೋಧರಿಂದ ತಪ್ಪಾಗಿದ್ದು ಎಲ್ಲಿ?

Pinterest LinkedIn Tumblr


ಬೆಂಗಳೂರು: ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಸೇನೆಯ ಮೇಲೆ ಭಾರೀ ಪ್ರಮಾಣದಲ್ಲಿ ದಾಳಿ ನಡೆಸಲು ಜೈಷೆ ಮೊಹಮ್ಮದ್ ಉಗ್ರ ಸಂಘಟನೆಯು ವರ್ಷದ ಹಿಂದೆಯೇ ಪ್ಲಾನ್ ಮಾಡಿತ್ತು. ಎರಡು ದಿನಗಳ ಹಿಂದೆಯಷ್ಟೇ ಭಾರತದ ಗುಪ್ತಚರರಿಗೆ ಈ ಪ್ಲಾನ್ ಬಗ್ಗೆ ಮಾಹಿತಿ ಸಿಕ್ಕಿತ್ತು. ಆದರೂ ಕೂಡ 40 ಸಿಆರ್​ಪಿಎಫ್ ಯೋಧರು ಉಗ್ರ ದಾಳಿಗೆ ಬಲಿಯಾಗುವುದನ್ನು ತಪ್ಪಿಸಲಾಗಲಿಲ್ಲ. ಮೇಲ್ನೋಟಕ್ಕೆ ಇಲ್ಲಿ ಯಾವುದೇ ಭದ್ರತಾ ವೈಫಲ್ಯ ಆಗಿಲ್ಲ. ಯಥಾಪ್ರಕಾರ ಭದ್ರತಾ ತಪಾಸಣೆ, ಮುನ್ನೆಚ್ಚರಿಕೆ ಕ್ರಮಗಳನ್ನ ಅನುಸರಿಸಲಾಗಿತ್ತು. ಆದರೆ, ನಾಗರಿಕ ವಾಹನವೊಂದರಲ್ಲಿ ಸ್ಫೋಟಕ ತುಂಬಿಕೊಂಡ ಉಗ್ರಗಾಮಿಯು ಸಿಆರ್​ಪಿಎಫ್ ವಾಹನಕ್ಕೆ ಡಿಕ್ಕಿ ಹೊಡೆದು ಆತ್ಮಾಹುತಿ ದಾಳಿ ಎಸಗುತ್ತಾನೆ.

ನಿನ್ನೆ ದಾಳಿಯ ಸಂದರ್ಭದಲ್ಲಿ 78 ವಾಹನಗಳಲ್ಲಿ ಒಟ್ಟು 2,547 ಯೋಧರು ಎರಡು ಭಾಗಗಳಾಗಿ ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಸಾಗುತ್ತಿದ್ದರು. ಕಳೆದ 6 ದಿನಗಳಿಂದ ಈ ಹೆದ್ಧಾರಿ ಬಂದ್ ಆಗಿದ್ದರಿಂದ ನಿನ್ನೆ ಮಾಮೂಲಿಗಿಂತ ಹೆಚ್ಚು ಸೈನಿಕರು ಆ ಮಾರ್ಗದಲ್ಲಿ ಹೋಗುತ್ತಿದ್ದರು. ಇದೇ ಸಮಯಕ್ಕೆ ಕಾಯುತ್ತಿದ್ದ ಉಗ್ರರಿಗೆ ಇನ್ನೂ ಹೆಚ್ಚು ಮಂದಿಯನ್ನು ಕೊಲ್ಲುವ ಗುರಿ ಇದ್ದಂತಿತ್ತು. ಆದರೆ, ಯೋಧರ ಒಂದು ಬಸ್ ಮಾತ್ರ ದಾಳಿಗೆ ತುತ್ತಾಗಿದೆ.

ದಾಳಿಯ ಮುನ್ಸೂಚನೆ ಇದ್ದರಿಂದ ಟ್ರಕ್ ಸಾಗುವ ಮಾರ್ಗವನ್ನು ಸಂಪೂರ್ಣವಾಗಿ ತಪಾಸಣೆ ಮಾಡಲಾಗಿತ್ತು. ಸೇನೆಯ ಒಂದು ಭಾಗವಾದ ರೋಡ್ ಓಪನಿಂಗ್ ಪಾರ್ಟಿ (ಆರ್​ಓಪಿ) ನಿನ್ನೆ ಬೆಳಗ್ಗೆ ಇಡೀ ಮಾರ್ಗವನ್ನು ತಲಾಶ್ ಮಾಡಿತ್ತು. ಯಾವುದೇ ಐಇಡಿ ಸ್ಫೋಟಕಗಳು ಪತ್ತೆಯಾಗಲಿಲ್ಲ. ಗುಂಡು ಅಥವಾ ಗ್ರೆನೇಡ್ ದಾಳಿ ಆಗುವ ಯಾವ ಅಪಾಯವೂ ಕಾಣಲಿಲ್ಲ. ಆದರೆ, ಹೆದ್ದಾರಿಗೆ ಕೂಡಿಕೊಳ್ಳುವ ಅಡ್ಡ ರಸ್ತೆಯಿಂದ ಬಂದ ವಾಹನವು ಈ ದುರಂತಕ್ಕೆ ಕಾರಣವಾಗಿರುವುದು ಸದ್ಯಕ್ಕೆ ತಿಳಿದುಬಂದ ಮಾಹಿತಿಯಾಗಿದೆ.

ಅಡ್ಡದಾರಿಯಲ್ಲಿ ವಾಹನ ಬರಲು ಅವಕಾಶ ಸಿಕ್ಕಿದ್ದಾದರೂ ಹೇಗೆ? ಭಾರತೀಯ ಸೇನೆಗೆ ಮುಳುವಾಗಿದ್ದು ಇಲ್ಲಿಯೇ. ಜಮ್ಮು-ಕಾಶ್ಮೀರದ ಸ್ಥಳೀಯರಿಗೆ ಹೆದ್ದಾರಿ ಬಳಸುವ ಮುಕ್ತ ಅವಕಾಶ ನೀಡಿದ್ದು ಎರವಾಗಿದೆ. ಆತ್ಮಾಹುತಿ ದಾಳಿಕೋರನು ಸ್ಥಳೀಯ ಗ್ರಾಮಸ್ಥರು ಸಂಚರಿಸುವ ಸರ್ವಿಸ್ ರೋಡ್ ಮುಖಾಂತರ ತನ್ನ ವಾಹನವನ್ನು ಚಲಾಯಿಸಿಕೊಂಡು ಬಂದು ಯೋಧರ ಕಾನ್ವಾಯ್​ನತ್ತ ನುಗ್ಗಿಸಿರುವ ಸಾಧ್ಯತೆ ಇದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿಯೊಂದರಲ್ಲಿ ಶಂಕಿಸಲಾಗಿದೆ.

ಜಮ್ಮುವಿನಿಂದ ಶ್ರೀನಗರಕ್ಕೆ ಹೆದ್ದಾರಿ ಮೂಲಕ ಹೋಗಲು ನಾಲ್ಕೈದು ದಿನವಾದರೂ ಬೇಕಾಗುತ್ತದೆ. ಇಡೀ ಮಾರ್ಗದಲ್ಲಿ ಕ್ಷಣಕ್ಷಣವೂ ಅಪಾಯದ ಪರಿಸ್ಥಿತಿ ಇರುತ್ತದೆ. ರಸ್ತೆ ಮೂಲಕ ಸೈನಿಕರು ಸಾಗುವುದು ನೆತ್ತಿಯ ಮೇಲೆ ಕತ್ತಿ ಸದಾ ತೂಗುವಂತಿರುತ್ತದೆ. ರಸ್ತೆ ಮೂಲಕ ಯೋಧರನ್ನು ಸಾಗಿಸುವ ಬದಲು ವಿಮಾನ ಅಥವಾ ಕಾಪ್ಟರ್ ಮೂಲಕ ಹೋಗುವುದು ಹೆಚ್ಚು ಕ್ಷೇಮಕರವಾಗಿರುತ್ತಿತ್ತು ಎಂದು ಮಾಜಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿರುವುದು ಇಲ್ಲಿ ಗಮನಾರ್ಹ. ಮಾಜಿ ಸಿಎಂ ಮೆಹಬೂಬಾ ಮುಫ್ತಿ ಕೂಡ ಇದೇ ವಿಚಾರವನ್ನು ಪ್ರಸ್ತಾಪಿಸಿ 78 ವಾಹನಗಳು ಒಟ್ಟೊಟ್ಟಿಗೆ ರಸ್ತೆಯ ಮೇಲೆ ಸಾಗಿಸಿದ ಕ್ರಮವನ್ನು ಪ್ರಶ್ನಿಸಿದ್ದಾರೆ.

Comments are closed.