ರಾಷ್ಟ್ರೀಯ

ಅಣ್ಣನಿಗೆ ಮದುವೆಯಾಗಿಲ್ಲ ಎಂದು ಪ್ರಿಯಾಂಕಾ ರಾಜಕೀಯ ಪ್ರವೇಶ: ಅಮಿತ್ ಶಾ

Pinterest LinkedIn Tumblr


ಗೋಧ್ರಾ: ”ಕಾಂಗ್ರೆಸ್‌ನಲ್ಲಿ ಪ್ರಧಾನಿ ಹುದ್ದೆ ‘ಜನ್ಮಸಿದ್ಧ’ವಾಗಿ ನಿರ್ಧಾರವಾಗುತ್ತದೆ. ಅಣ್ಣನಿಗೆ ಮದುವೆಯಾಗದೆ ಇರುವುದರಿಂದ ಉತ್ತರಾಧಿಕಾರಿ ಬೇಕು ಎಂಬ ಕಾರಣಕ್ಕೆ ತಂಗಿ ರಾಜಕೀಯ ಪ್ರವೇಶ ಮಾಡಿದ್ದಾರೆ” ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಪ್ರಿಯಾಂಕಾ ಗಾಂಧಿಯ ರಾಜಕೀಯ ಪ್ರವೇಶವನ್ನು ವ್ಯಾಖ್ಯಾನಿಸಿದ್ದಾರೆ.

”ಬಿಜೆಪಿಯಲ್ಲಿ ನನ್ನಂಥ ಒಬ್ಬ ಸಾಮಾನ್ಯ ಬೂತ್‌ ಕಾರ್ಯಕರ್ತ ಕೂಡಾ ಪಕ್ಷದ ಅಧ್ಯಕ್ಷ ಸ್ಥಾನಕ್ಕೇರಬಹುದು, ಚಾಯ್‌ವಾಲಾ ಕೂಡಾ ಪ್ರಧಾನಿಯಾಗಬಹುದು. ಆದರೆ, ಕಾಂಗ್ರೆಸ್‌ನಲ್ಲಿ ಸಾಮಾನ್ಯ ಕಾರ್ಯಕರ್ತರು ಉನ್ನತ ಹುದ್ದೆಯನ್ನು ಏರುವ ಕನಸೂ ಕಾಣುವಂತಿಲ್ಲ, ಯಾಕೆಂದರೆ ಆ ಹುದ್ದೆ ಜನ್ಮದಿಂದ ಸಿದ್ಧವಾಗಿರುತ್ತದೆ” ಎಂದು ಹೇಳಿದರು.

ಬಿಜೆಪಿಗೆ ಮೋದಿ, ಪ್ರತಿಪಕ್ಷಕ್ಕೆ ಯಾರು?

ಅಹಮದಾಬಾದ್‌: ಬಿಜೆಪಿಗೆ ಭರ್ಜರಿ ಜನಬೆಂಬಲ ಹೊಂದಿರುವ ಮೋದಿಯವರು ಪ್ರಧಾನ ನಾಯಕರಾಗಿದ್ದಾರೆ. ಆದರೆ, ರಾಜ್ಯ ಮಟ್ಟದ ನಾಯಕರನ್ನು ಒಟ್ಟು ಸೇರಿಸಲು ಪ್ರಯತ್ನಿಸುತ್ತಿರುವ ಪ್ರತಿಪಕ್ಷಗಳ ಮಹಾಘಟಬಂಧನ್‌ಗೆ ಪ್ರಧಾನಿ ಹುದ್ದೆಯ ಅಭ್ಯರ್ಥಿ ಯಾರು ಎಂಬ ಪ್ರಶ್ನೆಯನ್ನು ಅಮಿತ್‌ ಶಾ ಮುಂದಿಟ್ಟಿದ್ದಾರೆ.

‘ಮೇರಾ ಪರಿವಾರ್‌-ಬಿಜೆಪಿ ಪರಿವಾರ್‌’ ಎಂಬ ಬಿಜೆಪಿಯ ಮತದಾರರ ಸಂಚಯನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ”ದೇವೇಗೌಡರು ಗುಜರಾತ್‌ ಇಲ್ಲವೇ ಪಶ್ಚಿಮ ಬಂಗಾಳದಲ್ಲಿ ಭಾಷಣ ಮಾಡಿದರೆ, ಮಮತಾ ಬ್ಯಾನರ್ಜಿ ಮಹಾರಾಷ್ಟ್ರದಲ್ಲಿ ಮಾತನಾಡಿದರೆ, ಅಖಿಲೇಶ್‌ ಕೇರಳದಲ್ಲಿ ಭಾಷಣ ಬಿಗಿದರೆ ಯಾವ ಪರಿಣಾಮವಾದೀತು. ಏನೂ ಆಗುವುದಿಲ್ಲ. ಯಾಕೆಂದರೆ ಅವರೆಲ್ಲ ರಾಜ್ಯ ಮಟ್ಟಕ್ಕೆ ಸೀಮಿತವಾದ ನಾಯಕರು,” ಎಂದು ಹೇಳಿದರು.

5 ಕೋಟಿ ಮನೆಗಳಲ್ಲಿ ಬಿಜೆಪಿ ಧ್ವಜ ಆಂದೋಲನಕ್ಕೆ ಚಾಲನೆ

ಹೊಸದಿಲ್ಲಿ: ಚುನಾವಣೆ ಘೋಷಣೆಗೆ ಮುನ್ನ ದೇಶದ ಐದು ಕೋಟಿ ಮನೆಗಳಲ್ಲಿ ಬಿಜೆಪಿ ಧ್ವಜ ಹಾರಿಸುವ ಮಹತ್ವಾಕಾಂಕ್ಷಿ ‘ಮೇರಾ ಪರಿವಾರ್‌, ಭಾಜಪಾ ಪರಿವಾರ್‌’ ಆಂದೋಲನಕ್ಕೆ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಗುಜರಾತ್‌ನ ತಮ್ಮ ಮನೆಯಲ್ಲಿ ಧ್ವಜ ಹಾರಿಸುವ ಮೂಲಕ ಚಾಲನೆ ನೀಡಿದರು.

ಮಾರ್ಚ್‌ 2ರವರೆಗೆ ನಡೆಯುವ ಅಭಿಯಾನದ ಮೂಲಕ, ಪ್ರತಿ ಮನೆಯಲ್ಲಿ ಸರಾಸರಿ ನಾಲ್ವರು ಇರುತ್ತಾರೆ ಎಂಬ ಲೆಕ್ಕಾಚಾರದಲ್ಲಿ 20 ಕೋಟಿ ಜನರನ್ನು ನೇರವಾಗಿ ತಲುಪುವ ಮತ್ತು ಅವರು ಬಿಜೆಪಿ ಮತದಾರರು ಎಂಬುದನ್ನು ಖಾತ್ರಿಪಡಿಸುವ ಸಾಹಸ ನಡೆಸಲಿದೆ.

ಕೇಂದ್ರ ಸರಕಾರದ ಜನಧನ್‌, ಉಜ್ವಲ್‌, ಮುದ್ರಾ ಸಾಲ, ಟಾಯ್ಲೆಟ್‌ ನಿರ್ಮಾಣ ಯೋಜನೆ ಫಲಾನುಭವಿಗಳನ್ನು ಬಿಜೆಪಿ ಮತದಾರರಾಗಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ.

2014ರ ಬಳಿಕ ನಡೆದ ಸದಸ್ಯತ್ವ ಆಂದೋಲನದಲ್ಲಿ 11 ಕೋಟಿ ಮಂದಿ ಹೊಸ ಸದಸ್ಯರು ಪಕ್ಷ ಸೇರಿದ್ದು, ಅವರಲ್ಲಿ 9.5 ಕೋಟಿ ಮಂದಿಯ ದಾಖಲೆಗಳನ್ನು ಪರಿಶೀಲಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

17 ಕೋಟಿ

2014ರಲ್ಲಿ ಬಿಜೆಪಿ ಪಡೆದ ಮತ

9.5 ಕೋಟಿ

ಬಿಜೆಪಿಯ ಅಧಿಕೃತ ಸದಸ್ಯರು

ಈಗ ಯಾರ ಮೇಲೆ ಕಣ್ಣು?

35 ಕೋಟಿ ಜನಧನ್‌ ಫಲಾನುಭವಿಗಳು

07 ಕೋಟಿ ಮುದ್ರಾ ಸಾಲ ಪಡೆದವರು

06 ಕೋಟಿ ಉಜ್ವಲ ಎಲ್‌ಪಿಜಿ ಪಡೆದವರು

Comments are closed.