ರಾಷ್ಟ್ರೀಯ

ದೆಹಲಿಯಲ್ಲಿ ಜೀನ್ಸ್​, ಬೇರೆ ಕಡೆ ಸೀರೆ- ಕುಂಕುಮ; ಪ್ರಿಯಾಂಕಾ ಗಾಂಧಿ ಕುರಿತು ಬಿಜೆಪಿ

Pinterest LinkedIn Tumblr


ನವದೆಹಲಿ: ನೆಹರೂ ಕುಟುಂಬದ ನಾಲ್ಕನೇ ತಲೆಮಾರಿನ ಕುಡಿ ಪ್ರಿಯಾಂಕಾ ಗಾಂಧಿ ಸಕ್ರಿಯ ರಾಜಕೀಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂಬ ಘೋಷಣೆಯಾಗುತ್ತಿದ್ದಂತೆ ಬಿಜೆಪಿ ನಾಯಕರು ಹಲವು ರೀತಿಯ ಟೀಕಾಪ್ರಹಾರ ನಡೆಸಿದ್ದರು.

ಇದೀಗ ಮತ್ತೆ ಪ್ರಿಯಾಂಕಾ ಗಾಂಧಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವ ಬಿಜೆಪಿ ಸಂಸದ ಹರೀಶ್​ ದ್ವಿವೇದಿ, ರಾಹುಲ್​ ಗಾಂಧಿ ಸೋತರೆ ಪ್ರಿಯಾಂಕಾ ಕೂಡ ಸೋತಂತೆ. ದೆಹಲಿಯಲ್ಲಿದ್ದಾಗ ಜೀನ್ಸ್- ಟಿ ಶರ್ಟ್​​ ಧರಿಸುವ ಪ್ರಿಯಾಂಕಾ ಗಾಂಧಿ, ತಾನು ಉಸ್ತುವಾರಿ ವಹಿಸಿಕೊಂಡಿರುವ ಮತಕ್ಷೇತ್ರಗಳಿಗೆ ಚುನಾವಣಾ ಪ್ರಚಾರಕ್ಕೆ ಹೋಗುವಾಗ ಸೀರೆ ಧರಿಸಿ ಹಣೆಗೆ ಕುಂಕುಮವನ್ನಿಟ್ಟುಕೊಂಡು ಹೋಗುತ್ತಾರೆ ಎಂದು ಪ್ರಿಯಾಂಕಾ ಅವರ ಉಡುಗೆಯ ಬಗ್ಗೆ ಮಾತನಾಡುವ ಮೂಲಕ ವಿವಾದಕ್ಕೆ ಕಾರಣರಾಗಿದ್ದಾರೆ.

ಬಿಜೆಪಿಯಿಂದ ಇಂತಹ ಹೇಳಿಕೆ ಬರುತ್ತಿರುವುದು ಇದೇ ಮೊದಲೇನಲ್ಲ. ಪ್ರಿಯಾಂಕಾ ರಾಜಕೀಯಕ್ಕೆ ಎಂಟ್ರಿ ಕೊಟ್ಟಾಗಿನಿಂದಲೂ ಆಕೆಯ ಸೌಂದರ್ಯದ ಬಗ್ಗೆ ಅನೇಕ ಬಿಜೆಪಿ ನಾಯಕರು ಕಮೆಂಟ್​ ಮಾಡಿದ್ದರು. ಆಕೆಯ ಸೌಂದರ್ಯ, ರಾಜಕೀಯದ ಬಗ್ಗೆ ಅನುಭವದ ಕೊರತೆ, ಆಕೆಯ ಪತಿ ರಾಬರ್ಟ್​ ವಾದ್ರಾ ಹೀಗೆ ನಾನಾ ಕಾರಣಗಳಿಂದ ಪ್ರಿಯಾಂಕಾ ಬಿಜೆಪಿ ನಾಯಕರ ಟೀಕೆಗಳಿಗೆ ತುತ್ತಾಗುತ್ತಲೇ ಇದ್ದಾರೆ.

ಬಿಹಾರದ ಸಚಿವ ವಿನೋದ್​ ನಾರಾಯಣ ಝಾ ಕೂಡ ಪ್ರಿಯಾಂಕಾ ಬಗ್ಗೆ ಹೇಳಿಕೆ ನೀಡಿದ್ದು, ಸೋನಿಯಾಗಾಂಧಿ ಅವರ ಮಗಳು ಪ್ರಿಯಾಂಕಾ ಗಾಂಧಿ ತುಂಬ ಸುಂದರವಾಗಿದ್ದಾರೆ. ಆಕೆಯ ಸೌಂದರ್ಯದ ಹೊರತು ರಾಜಕೀಯದ ಬಗ್ಗೆ ಯಾವುದೇ ತಿಳುವಳಿಕೆಯಿಲ್ಲ. ಆಕೆ ರಾಜಕೀಯದಲ್ಲಿ ಯಾವ ಸಾಧನೆಯನ್ನೂ ಮಾಡಿಲ್ಲ, ಅಂತಹ ಸಾಮರ್ಥ್ಯವೂ ಆಕೆಗಿಲ್ಲ ಎಂದು ಹೇಳಿದ್ದಾರೆ.

ಹಾಗೇ, ಬಿಜೆಪಿ ಸಂಸದ ವಿನಯ್ ಕಟಿಯಾರ್​ ಕೂಡ ಎರಡು ವರ್ಷಗಳ ಹಿಂದೆ ಪ್ರಿಯಾಂಕಾ ಗಾಂಧಿ ಸೌಂದರ್ಯದ ಬಗ್ಗೆ ಕಮೆಂಟ್​ ಮಾಡಿ ವಿವಾದಕ್ಕೆ ಕಾರಣರಾಗಿದ್ದರು. 2 ವರ್ಷಗಳ ಹಿಂದೆ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ನ ಸ್ಟಾರ್​ ಪ್ರಚಾರಕರಲ್ಲಿ ಪ್ರಿಯಾಂಕಾ ಕೂಡ ಒಬ್ಬರು ಎಂದು ಘೋಷಿಸಿದಾಗ ವಿನಯ್​ ಕಟಿಯಾರ್​, ಪ್ರಿಯಾಂಕಾ ಗಾಂಧಿ ಮಾತ್ರವೇ ಸೌಂದರ್ಯವತಿಯಲ್ಲ. ಆಕೆಗಿಂತಲೂ ಸುಂದರವಾಗಿರುವ ಅನೇಕ ಸ್ಟಾರ್​ ಪ್ರಚಾರಕರು ಇದ್ದಾರೆ. ಹಲವರು ನಟಿಯರು, ಕಲಾವಿದರು ಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತಿದ್ದಾರೆ. ಅವರು ಪ್ರಿಯಾಂಕಾಗಿಂತಲೂ ಸುಂದರವಾಗಿದ್ದಾರೆ ಎಂದು ಹೇಳಿದ್ದರು.

ಇಷ್ಟೇ ಅಲ್ಲ, ಬಿಜೆಪಿ ನಾಯಕ ಸುಬ್ರಮಣ್ಯನ್​ ಸ್ವಾಮಿ ಇನ್ನೂ ಸ್ವಲ್ಪ ಮುಂದೆ ಹೋಗಿ ಪ್ರಿಯಾಂಕಾ ಗಾಂಧಿ ಅವರಿಗೆ ಮಾನಸಿಕ ಕಾಯಿಲೆಯಿದೆ. ಅವರು ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿರಲು ಸಾಧ್ಯವಿಲ್ಲ. ಇದನ್ನು ಬೈಪೋಲಾರ್ ಡಿಸಾರ್ಡರ್​ ಎಂದು ಕರೆಯುತ್ತಾರೆ. ಖಿನ್ನತೆಯಿಂದ ಬಳಲುತ್ತಿರುವ ಅವರು ಜನರಿಗೆ ಹೊಡೆಯುವ ಸಾಧ್ಯತೆಯೂ ಇದೆ ಎಂದು ಹೇಳುವ ಮೂಲಕ ಕಾಂಗ್ರೆಸ್​ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು.

Comments are closed.