ರಾಷ್ಟ್ರೀಯ

ಕಳ್ಳಬಟ್ಟಿ ಸಾರಾಯಿ ಕುಡಿದು 90 ಮಂದಿ ಸಾವು

Pinterest LinkedIn Tumblr


ನವದೆಹಲಿ: ಉತ್ತರ ಪ್ರದೇಶ ಮತ್ತು ಉತ್ತರಾಖಂಡ್ ರಾಜ್ಯಗಳಲ್ಲಿ ಕಳ್ಳಬಟ್ಟಿ ಸಾರಾಯಿ ಸೇವಿಸಿ 90 ಜನರು ಸಾವನ್ನಪ್ಪಿರುವ ದಾರುಣ ಘಟನೆ ವರದಿಯಾಗಿದೆ. ಉತ್ತರ ಪ್ರದೇಶದ ಸಹರಾನ್​ಪುರದಲ್ಲಿ 35 ಜನರು ಸತ್ತಿದ್ದಾರೆ. ಉತ್ತರಾಖಂಡ್​ನ ಹರಿದ್ವಾರದಲ್ಲಿ 12ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಈ ಸಂಬಂಧ 35 ಜನರನ್ನು ಬಂಧಿಸಿಲಾಗಿದೆ.

ನೂರಕ್ಕೂ ಹೆಚ್ಚು ಜನರು ತೀವ್ರ ಅಸ್ವಸ್ಥಗೊಂಡಿದ್ದಾರೆ. ಅವರಲ್ಲಿ ಅನೇಕ ಸ್ಥಿತಿ ಗಂಭೀರವಾಗಿದ್ದು ಜೀವನ್ಮರಣ ಹೋರಾಟದಲ್ಲಿದ್ದಾರೆ. ಉತ್ತರ ಪ್ರದೇಶದಲ್ಲಿ ಮೂರು ದಿನಗಳ ಹಿಂದಷ್ಟೇ ಇದೇ ಕಾರಣಕ್ಕೆ 10 ಜನರು ಸಾವನ್ನಪ್ಪಿದ್ದನ್ನು ಇಲ್ಲಿ ಉಲ್ಲೇಖಿಸಬಹುದು. ಇಷ್ಟಾದರೂ ಉತ್ತರ ಪ್ರದೇಶ ಸರಕಾರ ಎಚ್ಚೆತ್ತುಕೊಂಡಿಲ್ಲದಿರುವುದು ಟೀಕೆಗೆ ಗುರಿಯಾಗಿದೆ.

ಸಹರಾನ್​ಪುರದ ಉಮಾಹಿ ಗ್ರಾಮದಲ್ಲಿ ಕಳ್ಳಬಟ್ಟಿ ಸೇವಿಸಿ ಇವತ್ತು ಬೆಳಗ್ಗೆ ಐವರು ಸಾವನ್ನಪ್ಪಿ, 20 ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. ಶರ್ಬತ್​ಪುರ್ ಗ್ರಾಮದಲ್ಲಿ ಮೂರು ಮಂದಿ ಸತ್ತಿದ್ದಾರೆ. ಇಲ್ಲಿಯ ಸುತ್ತಮುತ್ತಲ ಗ್ರಾಮಗಳಲ್ಲೂ ನಕಲಿ ಸಾರಾಯಿ ಕುಡಿದು ಕೆಲವರು ಸತ್ತಿರುವ ಬಗ್ಗೆ ವರದಿಗಳು ಬಂದಿವೆ.

ಉತ್ತರಾಖಂಡ್​ನ ಹರಿದ್ವಾರದಲ್ಲಿ ಅಂತ್ಯಕ್ರಿಯೆ ಕಾರ್ಯಕ್ರಮವೊಂದಕ್ಕೆಂದು ತಯಾರಿಸಲಾಗಿದ್ದ ಕಳ್ಳಬಟ್ಟಿ ಕುಡಿದು ಈ ದುರಂತ ಸಂಭವಿಸಿದೆ ಎಂದು ಆ ರಾಜ್ಯದ ಅಬಕಾರಿ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಉತ್ತರಾಖಂಡ್​ ಸರಕಾರವು ಅಬಕಾರಿ ಇಲಾಖೆಯ 13 ಮಂದಿ ಉದ್ಯೋಗಿಗಳನ್ನ ಹಾಗೂ 10 ಪೊಲೀಸ್​ರನ್ನು ಅಮಾನತು ಮಾಡಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.

ಇನ್ನೂ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಕುಶಿನಗರ ಹಾಗೂ ಸಹರಾನ್​ಪುರ ಜಿಲ್ಲಾ ಅಬಕಾರಿ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಅಬಕಾರಿ ಇಲಾಖೆಗೆ ಉ. ಪ ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ ಎನ್ನಲಾಗಿದೆ.

ಇದೇ ವೇಳೆ, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರಕಾರವು ಸಾವನ್ನಪ್ಪಿದ ಕುಟುಂಬಕ್ಕೆ ತಲಾ 2 ಲಕ್ಷ ರೂ ಪರಿಹಾರ ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಸ್ವಸ್ಥರಿಗೆ ಮಾನವೀಯತೆ ನೆಲೆಯಲ್ಲಿ 50 ಸಾವಿರ ರೂ ನೆರವನ್ನು ಪ್ರಕಟಿಸಿದ್ದಾರೆ.

Comments are closed.