ರಾಷ್ಟ್ರೀಯ

ಮೋದಿಯನ್ನು ಅಣಕಿಸಿದ ರಾಹುಲ್ ​ಗೆ ಭರಪೂರ ಚಪ್ಪಾಳೆ!

Pinterest LinkedIn Tumblr


ಭೋಪಾಲ್​: ಮಧ್ಯಪ್ರದೇಶದ ಭೋಪಾಲ್​ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಅಣಕಿಸುವ ಮೂಲಕ ನೆರೆದಿದ್ದ ಬೆಂಬಲಿಗರಿಂದ ಭರಪೂರ ಚಪ್ಪಾಳೆ ಗಿಟ್ಟಿಸಿಕೊಂಡರು.

ಲೋಕಸಭಾ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ರಾಹುಲ್​, ತಮ್ಮ ಭಾಷಣದಲ್ಲಿ ಮೋದಿ ಅವರನ್ನು ಅನುಕರಿಸುವ ಮೂಲಕವೇ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು. 2014ರ ಚುನಾವಣೆ ಸಮಯದಲ್ಲಿ ಮೋದಿ ಅವರು ತಲೆ ಎತ್ತಿ ನಾನು ಚೌಕಿದಾರ, ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇನೆ ಎಂದು ದರ್ಪದಿಂದ ಹೇಳುತ್ತಿದ್ದರು. ಆದರೆ, ಈಗ ಕುಗ್ಗಿದ ದನಿಯಲ್ಲಿ ಕಾಂಗ್ರೆಸ್​ ನಿರ್ಮೂಲನೆ ಮಾಡುತ್ತೇನೆ ಎನ್ನುತ್ತಿದ್ದಾರೆ ಎಂದು ರಾಹುಲ್ ಹೇಳಿದರು. ರಾಹುಲ್​ ಈ ಮಾತುಗಳನ್ನು ಮೋದಿಯವರನ್ನು ಅನುಕರಿಸುವಂತೆಯೇ ಹೇಳಿದಾಗ ನೆರೆದಿದ್ದ ಸಭಿಕರು ಕರತಾಡನ ಮೊಳಗಿಸಿದರು.

ಭಾರತವನ್ನು ಕಾಂಗ್ರೆಸ್​ ಮುಕ್ತ ದೇಶವನ್ನಾಗಿ ಮಾಡುತ್ತೇನೆ ಎಂದು ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್​ ಶಾ ಶಪಥ ಮಾಡಿದ್ದರು. ಆದರೆ ಇದು ಯಶಸ್ವಿಯಾಗಿಲ್ಲ. ಈ ಬಗ್ಗೆಯೂ ಟೀಕಿಸಿದ ರಾಹುಲ್​, “ಕಾಂಗ್ರೆಸ್​ ನಿರ್ಮೂಲನೆ ಮಾಡುತ್ತೇವೆ ಎಂದು ಬಿಜೆಪಿ ಹೇಳುತ್ತಿದೆ. ಆದರೆ, ಇದು ಎಲ್ಲಿ ಸಾಧ್ಯವಾಗಿದೆ? ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಚತ್ತೀಸ್​ಗಢದಲ್ಲಿ ಸರ್ಕಾರ ರಚನೆ ಮಾಡಿದ್ದೇವೆ. ಕೇಂದ್ರದಲ್ಲೂ ಸರ್ಕಾರ ರಚಿಸುವ ಹಂತದಲ್ಲಿದ್ದೇವೆ,” ಎಂದು ಹೇಳುವ ಮೂಲಕ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.

ರೈತರಿಗೆ ಪ್ರತಿ ವರ್ಷ 6 ಸಾವಿರ ರೂ. ಅನುದಾನ ನೀಡುವ ಘೋಷಣೆಯನ್ನು ಬಜೆಟ್​ ಮಂಡನೆ ವೇಳೆ ಕೇಂದ್ರ ಸರ್ಕಾರ ಮಾಡಿತ್ತು. ಈ ಬಗ್ಗೆ ಕುಹಕವಾಡಿರುವ ರಾಹುಲ್​, “ಬಜೆಟ್​ ಮಂಡನೆ ವೇಳೆ ರೈತರಿಗೆ ಅನುದಾನ ನೀಡುವ ಘೋಷಣೆ ಮಾಡಿದ ಬಳಿಕ ಐದು ನಿಮಿಷಗಳ ಕಾಲ ಬಿಜೆಪಿ ಸಂಸದರು ಮೇಜು ತಟ್ಟಿದರು. ನನಗೆ ಒಮ್ಮೆ ಆಶ್ಚರ್ಯವಾಯಿತು. ಅವರು ಇಷ್ಟೆಲ್ಲ ಸಂತಸ ವ್ಯಕ್ತಪಡಿಸಿದ್ದು ಏಕೆ ಎಂದು ಪಕ್ಕದಲ್ಲಿ ಕುಳಿತ ನಮ್ಮ ನಾಯಕರನ್ನು ಕೇಳಿದೆ. ಈ ಅನುದಾನ ಲೆಕ್ಕ ಹಾಕಿದರೆ ಒಂದು ದಿನಕ್ಕೆ ಪ್ರತಿ ರೈತನಿಗೆ 17 ರೂ. ಮಾತ್ರ ಸಿಗುತ್ತದೆ,” ಎಂದು ರಾಹುಲ್​ ಕೇಂದ್ರ ಬಜೆಟ್​ ವಿರುದ್ಧ ಅಸಮಾಧಾನವನ್ನು ಮತ್ತೊಮ್ಮೆ ಹೊರಹಾಕಿದರು.

Comments are closed.