ರಾಷ್ಟ್ರೀಯ

ದೆಹಲಿಯಲ್ಲಿ ಭಾರೀ ಗಾಳಿ, ಆಲಿಕಲ್ಲುಸಹಿತ ಮಳೆ

Pinterest LinkedIn Tumblr


ನವದೆಹಲಿ: ನವದೆಹಲಿಯಲ್ಲಿ ಆಲಿಕಲ್ಲುಸಹಿತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ 30ಕ್ಕೂ ಅಧಿಕ ವಿಮಾನಗಳ ಮಾರ್ಗವನ್ನು ಬದಲಾಯಿಸಲಾಗಿದೆ. ಇಂದು ಸಂಜೆ ಶುರುವಾದ ಮಳೆ ಮತ್ತು ಜೋರಾದ ಗಾಳಿಯಿಂದಾಗಿ ಹವಾಮಾನದಲ್ಲಿ ವೈಪರೀತ್ಯ ಕಂಡುಬಂದಿದ್ದರಿಂದ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು 32 ವಿಮಾನಗಳ ಮಾರ್ಗವನ್ನು ಬದಲಾಯಿಸಲಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ನೊಯ್ಡಾ, ಫರೀದಾಬಾದ್​ ಮುಂತಾದ ನಗರಗಳಲ್ಲಿ ಆಲಿಕಲ್ಲುಸಹಿತ ಮಳೆಯಾಗುತ್ತಿದ್ದು, ರಸ್ತೆಗಳೆಲ್ಲ ಹಿಮ ಮತ್ತು ಆಲಿಕಲ್ಲಿನಿಂದ ತುಂಬಿಹೋಗಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾಕ್ರಮವಾಗಿ 23 ಡೊಮೆಸ್ಟಿಕ್ ಮತ್ತು 9 ಅಂತಾರಾಷ್ಟ್ರೀಯ ವಿಮಾನಗಳ ದಿಕ್ಕನ್ನು ಬದಲಾಯಿಸಲಾಗಿದೆ. 9 ಡೊಮೆಸ್ಟಿಕ್​ ವಿಮಾನಗಳನ್ನು ಜೈಪುರ, 3 ವಿಮಾನಗಳನ್ನು ಲಕ್ನೋ ಮತ್ತು 3 ವಿಮಾನಗಳನ್ನು ಅಮೃತಸರ, 2 ವಿಮಾನಗಳನ್ನು ವಾರಣಾಸಿ, ಒಂದು ವಿಮಾನವನ್ನು ಇಂದೋರ್​ನಲ್ಲಿ ಲ್ಯಾಂಡ್​ ಮಾಡಲು ಅವಕಾಶ ನೀಡಲಾಗಿದೆ.

ದೆಹಲಿಯಲ್ಲಿ ಇಂದು ದಾಖಲೆಯ ತಾಪಮಾನ ವರದಿಯಾಗಿದ್ದು, ಇಂದು 15 ಡಿಗ್ರಿ ಸೆಲ್ಷಿಯಸ್​ ಉಷ್ಣಾಂಶವಿತ್ತು. ಇಂದು ಗರಿಷ್ಠ 19 ಡಿಗ್ರಿ ಸೆಲ್ಷಿಯಸ್​ ತಾಪಮಾನ ದಾಖಲಾಗಿದೆ.

ನವದೆಹಲಿ, ನೊಯ್ಡಾದ ಜನರು ಅನಿರೀಕ್ಷಿತ ಮಳೆಯನ್ನು ಮೊಬೈಲ್​ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಾದ ಟ್ವಿಟ್ಟರ್​ ಮತ್ತು ಫೇಸ್​ಬುಕ್​ ಮೂಲಕ ಶೇರ್​ ಮಾಡುತ್ತಿದ್ದಾರೆ. ಇಂದು ಬೆಳಗ್ಗೆಯಿಂದಲೂ ದೆಹಲಿಯಲ್ಲಿ ಮೋಡ ಕವಿದ ವಾತಾವರಣವಿತ್ತು. ಸಂಜೆಯ ವೇಳೆಗೆ ಜೋರಾದ ಗಾಳಿ ಮತ್ತು ಆಲಿಕಲ್ಲು ಮಳೆ ಬೀಳಲಾರಂಭಿಸಿತು. ಉತ್ತರ ದೆಹಲಿಯ ಕೆಲ ಭಾಗದಲ್ಲಿ ಮಳೆಮತ್ತು ಹಿಮಪಾತದಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಉಳಿದಂತೆ ಯಾವುದೇ ಅವಘಡಗಳು ವರದಿಯಾಗಿಲ್ಲ.

Comments are closed.