ರಾಷ್ಟ್ರೀಯ

ರಾಜ್ಯ ಬಿಜೆಪಿ ನಾಯಕರ ಮೇಲೆ ಮುನಿಸಿಕೊಂಡ ಅಮಿತ್​ ಷಾ

Pinterest LinkedIn Tumblr


ಬೆಂಗಳೂರು: ಒಂದು ಕಡೆ ಮೈತ್ರಿ ಸರ್ಕಾರ ನಾಳೆ ಬಜೆಟ್​ ಮಂಡನೆ ಮಾಡಲು ಎಲ್ಲ ರೀತಿಯ ಸಿದ್ಧತೆ ನಡೆಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ನಾಳೆ ಅಧಿವೇಶನದಲ್ಲಿ ಬಜೆಟ್​ ಮಂಡಿಸದೆ ಇರುವಂತೆ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇದೆಲ್ಲದರ ನಡುವೆ ಲೋಕಸಭಾ ಚುನಾವಣೆಯ ಸಿದ್ಧತೆ ಬಗ್ಗೆ ಚರ್ಚೆ ನಡೆಸಲು ಇಂದು ರಾಜ್ಯ ಬಿಜೆಪಿ ನಾಯಕರೊಂದಿಗೆ ವಿಡಿಯೋ ಕಾನ್ಫರೆನ್ಸ್​ ನಡೆಸಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಷಾ ಮುನಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇಂದು ಸಂಜೆ ಬಿಜೆಪಿ ಕಚೇರಿಯಲ್ಲಿ ಸೋಷಿಯಲ್ ಮೀಡಿಯಾ ತಂಡದ ಜೊತೆ ಅಮಿತ್ ಷಾ ವಿಡಿಯೊ ಕಾನ್ಫರೆನ್ಸ್ ನಡೆಸಿದ್ದು, ರಾಜ್ಯ ಬಿಜೆಪಿ ನಾಯಕರಾದ ಕೆ ಎಸ್ ಈಶ್ವರಪ್ಪ, ಸಿಟಿ ರವಿ, ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.

ಲೋಕಸಭಾ ಚುನಾವಣೆಗೆ ರಾಜ್ಯ ಬಿಜೆಪಿ ತಯಾರಿ ಸರಿಯಾದ ದಿಕ್ಕಿನತ್ತ ಇಲ್ಲ ಎಂದು ಗರಂ ಆದ ಅಮಿತ್​ ಷಾಗೆ ಒಂದು ಲಕ್ಷ ಬೈಕ್ ರ್ಯಾಲಿಗೆ ತಯಾರಿ ಮಾಡಿದ್ದೇವೆ ಎಂದು ಅರುಣ್ ಕುಮಾರ್ ಸಮಜಾಯಿಷಿ ನೀಡಲು ಹೋದರು. ಅರುಣ್ ಕುಮಾರ್ ಮಾತಿನಿಂದ ಸಿಟ್ಟಾದ ಅಮಿತ್ ಷಾ, ಕರ್ನಾಟಕದಲ್ಲಿ ಕೇವಲ ಒಂದು ಲಕ್ಷ ಜನರ ಬೈಕ್ ರ್ಯಾಲಿನಾ? ನೀವೆಲ್ಲಾ ಏನ್ ಮಾಡ್ತಾ ಇದ್ದೀರಿ? ಗಂಭೀರವಾಗಿ ಕೆಲಸ ಆರಂಭ ಮಾಡುವುದು ಯಾವಾಗ? ಎಂದು ಅಮಿತ್​ ಷಾ ಪ್ರಶ್ನೆ ಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ರಾಜ್ಯ ಬಿಜೆಪಿ ನಾಯಕರ ಮೇಲೆ ಕೋಪಗೊಂಡ ಅಮಿತ್ ಷಾ, ನಾನು ಮತ್ತೆ ವಿಡಿಯೊ ಸಂಭಾಷಣೆ ನಡೆಸುತ್ತೇನೆ. ಅಲ್ಲಿಯವರೆಗೆ ಅಂಗಡಿ ಬಾಗಿಲು ಮುಚ್ಚಬೇಡಿ ಎಂದು ರಾಜ್ಯ ನಾಯಕರನ್ನು ಕುಟುಕಿದ್ದು, ಸುಮಾರು ಮುಕ್ಕಾಲು ಗಂಟೆಗಳ ಕಾಲ ರಾಜ್ಯ ನಾಯಕರನ್ನು ವಿಡಿಯೋ ಕ್ಯಾಮೆರಾ ಮುಂದೆಯೇ ಕೂರಿಸಿದ್ದಾರೆ. ಬೇರೆಲ್ಲಾ ರಾಜ್ಯಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ, ಚುನಾವಣೆಗೆ ನಿಮ್ಮ ತಯಾರಿ ಏನು ಇಲ್ಲ ಎಂದು ಅರುಣ್ ಕುಮಾರ್ ಅವರಿಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ.

ಅಮಿತ್​ ಷಾ ರಾಜ್ಯ ನಾಯಕರ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವಾಗ ಸುಮ್ಮನೆ ಕುಳಿತಿದ್ದ ಕೆ.ಎಸ್​. ಈಶ್ವರಪ್ಪ ಮತ್ತು ಸಿ.ಟಿ. ರವಿಯವರನ್ನು ಗಮನಿಸಿದ ಅಮಿತ್​ ಷಾ ಓ ಈಶ್ವರಪ್ಪನವರೂ ಇದ್ದಾರಾ? ಎಂದು ಕೇಳಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್​-ಜೆಡಿಎಸ್​ ಜಂಟಿಯಾಗಿ ಅಖಾಡಕ್ಕೆ ಇಳಿಯುವುದಾಗಿ ಘೋಷಿಸಿರುವುದರಿಂದ ಬಿಜೆಪಿ ನಾಯಕರ ಮೇಲೆ ಒತ್ತಡವೂ ಹೆಚ್ಚೇ ಇದೆ. ಈಗಾಗಲೇ ಯಡಿಯೂರಪ್ಪ ನೇತೃತ್ವದಲ್ಲಿ ಪ್ರಚಾರ ಕಾರ್ಯದ ಬಗ್ಗೆ ತಂತ್ರ ರೂಪಿಸಲಾಗಿದ್ದು, ಅಮಿತ್​ ಷಾ ಅವರ ಎಚ್ಚರಿಕೆಯ ನಂತರ ಚುನಾವಣಾ ಬಿಸಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

Comments are closed.