ರಾಷ್ಟ್ರೀಯ

ಕೇಂದ್ರ ಬಜೆಟ್ : ರಾಜ್ಯಕ್ಕೆ ಹೊಸ 3 ರೈಲ್ವೇ ಮಾರ್ಗಗಳು ಮಂಜೂರು

Pinterest LinkedIn Tumblr

ನವದೆಹಲಿ:  ಹಂಗಾಮಿ ವಿತ್ತ ಸಚಿವ ಪಿಯೂಷ್ ಗೊಯೆಲ್ ಮಂಡಿಸಿರುವ ಮಧ್ಯಂತರ ಬಜೆಟ್ ನಲ್ಲಿ ರಾಜ್ಯಕ್ಕೆ ನೈರುತ್ಯ ರೈಲ್ವೇ ಅಡಿಯಲ್ಲಿ ಮೂರು ಹೊಸ ರೈಲು ಮಾರ್ಗಗಳು ಮಂಜೂರಾಗಿದೆ.

ಒಟ್ಟು 1,963 ಕೋಟಿ ರೂ ವೆಚ್ಚದ ಈ ಯೋಜನೆಗಳಿಗೆ ಈ ಸಾಲಿನ ಬಜೆಟ್ ನಲ್ಲಿ ಮಾತ್ರ ಕೇವಲ ತಲಾ 10 ಲಕ್ಷ ರೂಗಳನ್ನು ಮೀಸಲಿಡಲಾಗಿದೆ.

ಮೋದಿ ಬಜೆಟ್ ನಲ್ಲಿ ರಾಜ್ಯಕ್ಕೆ ಹೊಸ 3 ರೈಲ್ವೇ ಮಾರ್ಗಗಳು ಮಂಜೂರು

ಚಿಕ್ಕಬಳ್ಳಾಪುರ-ಗೌರಿ ಬಿದನೂರು ನ 44 ಕಿಮೀ ರೈಲ್ವೇ ಮಾರ್ಗಕ್ಕೆ 367 ಕೋಟಿ ರೂ, 58 ಕೀಮೀ ಉದ್ದದ ಗದಗ-ಯಾಳವಗಿ ರೈಲ್ವೇ ಮಾರ್ಗಕ್ಕೆ 640 ಕೋಟಿ ರೂ ಮತ್ತು ಶಿವಮೊಗ್ಗ-ಶಿಕಾರಿಪುರ-ರಾಣಿಬೆನ್ನೂರು ಮಧ್ಯೆ 89 ಕಿಮೀ ಉದ್ದದ ರೈಲ್ವೇ ಹಳಿ ನಿರ್ಮಾಣಕ್ಕೆ 956 ಕೋಟಿ ರೂ ಮಂಜೂರು ಮಾಡಲು ರೈಲ್ವೇ ಸಚಿವಾಲಯ ಒಪ್ಪಿಕೊಂಡಿದೆ.  ಆದರೆ ಸದ್ಯ ಕೇವಲ 10 ಲಕ್ಷ ರೂಗಳನ್ನು ಮಾತ್ರ ಈ ಬಜೆಟ್ ನಲ್ಲಿ ತೆಗೆದಿಟ್ಟಿದೆ.

ಮೆಟ್ಟುಪಾಳ್ಯಂಗೂ ವಿಸ್ತಾರಗೊಳ್ಳಲಿರುವ 148 ಕೀಮೀ ಉದ್ದದ ಮೈಸೂರು-ಚಾಮರಾಜನಗರ ರೈಲ್ವೇ ಹಳಿಗಳ ಗೇಜ್ ಪರಿವರ್ತನೆಗೆ ಬಜೆಟ್ ನಲ್ಲಿ ಅನುಮೋದನೆ ಸಿಕ್ಕಿದೆ.

ಯಶವಂತಪುರ-ಚನ್ನಸಂದ್ರ (21.7 ಕಿಮೀ), ಬೈಯ್ಯಪ್ಪನಹಳ್ಳಿ-ಹೊಸೂರು (48ಕೀಮೀ), ಬೆಂಗಳೂರು-ವೈಟ್ ಫೀಲ್ಡ್-ಬೆಂಗಳೂರು ಸಿಟಿ-ಕೃಷ್ಣರಾಜಪುರಂ (23.08 ಕೀ.ಮೀ)ನ ಡಬ್ಲಿಂಗ್ ಕಾಮಗಾರಿ, ರಾಮನಗರ-ಮೈಸೂರು ಜೊತೆಗೆ ಕೆಂಗೇರಿ-ಮೈಸೂರಿನ ವಿದ್ಯುತೀಕರಣ, ಹೊಸದುರ್ಗ-ಚಿಕ್ಕಜಾಜೂರು (28.89 ಕಿಮೀ) ಗಳ ಅಂಶಿಕ ಡಬ್ಲಿಂಗ್ ಗೂ ಬಜೆಟ್ ನಲ್ಲಿ ಸ್ಥಾನ ಸಿಕ್ಕಿದೆ.

ಹೊಸಪೇಟೆ-ಹುಬ್ಬಳ್ಳಿ-ಲೋಂಡಾ-ತಿನೈಘಾಟ್-ವಾಸ್ಕೋ ಡಾಗಾಮಾದ ರೈಲ್ವೇ ಹಳಿಗಳ ಡಬ್ಲಿಂಗ್ ಗೆ 159 ಕೋಟಿ ರೂ ನೀಡಲಾಗುತ್ತಿದೆ. ಯಶವಂತಪುರ-ಚಿಕ್ಕಬಾಣವಾರದ ವಿದ್ಯುತೀಕರಣ ಮತ್ತು ಬೈ ಪಾಸ್ ಗೆ ಒಪ್ಪಿಗೆ ನೀಡಲಾಗಿದೆ.

ಮೈಸೂರು ವಿಭಾಗದಲ್ಲಿ ಕಬ್ಬಿಣದ ಅದಿರು ಸಾಗಣಿಕೆ ಆಗುವ ರೈಲ್ವೇ ನಿಲ್ದಾಣಗಳ ಉನ್ನತೀಕರಣ, ಸವಣೂರು, ತೋಲಹುಣಸೆ, ನವಲೂರು ನಿಲ್ದಾಣಗಳ ಅಭಿವೃದ್ಧಿಯ ಪ್ರಸ್ತಾಪ ಮಾಡಲಾಗಿದೆ.

ಬೆಂಗಳೂರು ಕಾಂಟೋನ್ಮೆಂಟ್ – ವೈಟ್ ಫೀಲ್ಡ್ ನ ಸ್ವಯಂಚಾಲಿತ ಸಿಗ್ನಲಿಂಗ್ ಗೆ 5 ಕೋಟಿ, ಬೈಯಪ್ಪನಹಳ್ಳಿಯಲ್ಲಿ ಮೂರನೇ ಕೋಚಿಂಗ್ ಟರ್ಮಿನಲ್ ಗೆ 20 ಕೋಟಿ, ಅಂಬೆವಾಡಿಯಲ್ಲಿ ಸಿಗ್ನಲಿಂಗ್ ವ್ಯವಸ್ಥೆ ಸುಧಾರಣೆ, ಬಂಗಾರಪೇಟೆಯಲ್ಲಿ ಪ್ಲಾಟ್ ಫಾರಂ ನಂ 5 ಮತ್ತು 6 ರ ವಿಸ್ತರಣೆ, ನಾಗನಹಳ್ಳಿಯಲ್ಲಿ ಸ್ಯಾಟ್ ಲೈಟ್ ಟರ್ಮಿನಲ್ ಸೇರಿ ಒಟ್ಟು 40 ಕೋಟಿ ರೂಗಳ ಕಾಮಗಾರಿಗೆ ಬಜೆಟ್ ನಲ್ಲಿ ಅನುಮೋದನೆ ನೀಡಲಾಗಿದೆ.

ಬೆಂಗಳೂರು ಸಬ್ ಅರ್ಬನ್ ಯೋಜನೆಗೆ 11,546 ಕೋಟಿ ರೂಗಳ ಮಂಜೂರಾತಿ ಸಿಕ್ಕಿದ್ದರೂ ಕೂಡ ಈ ಬಾರಿ ಎಲವೇಟೆಡ್ ಕಾರಿಡಾರ್ ಮತ್ತು ಗ್ರೇಡ್ ಕಾರಿಡಾರ್ ನ ಪ್ರಸ್ತಾಪವನ್ನು ಮಾಡಲಾಗಿದೆ.

ಸದ್ಯ 10 ಕೋಟಿ ರೂಗಳ ಕಾಮಗಾರಿ ನಡೆಯುತ್ತಿದ್ದು ರಾಜ್ಯ ಸರ್ಕಾರ ಮತ್ತು ವಿವಿಧ ಹೂಡಿಕೆಗಳ ನೆರವಿನಿಂದ 159 ಕೋಟಿ ರೂಗಳ ಕಾಮಗಾರಿ ನಡೆಸಲು ಮಧ್ಯಂತರ ಬಜೆಟ್ ನಲ್ಲಿ ಏರ್ಪಾಟುಗಳನ್ನು ಮಾಡಲಾಗಿದೆ.

Comments are closed.