ರಾಷ್ಟ್ರೀಯ

ಪ್ರಿಯಾಂಕಾ ಗಾಂಧಿ ರಾಜಕೀಯಕ್ಕೆ ಮರುಪ್ರವೇಶದ ಅನುಕೂಲ, ಅನಾನುಕೂಲಗಳು

Pinterest LinkedIn Tumblr


ನವದೆಹಲಿ: ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದ ಪ್ರಿಯಾಂಕ ಗಾಂಧಿ ಮತ್ತೆ ರಾಜಕೀಯ ಜೀವನಕ್ಕೆ ಧುಮುಕಿದ್ದಾರೆ. ರಾಷ್ಟ್ರೀಯ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿದ್ದು ರಾಯಬರೇಲಿ, ಅಮೇಥಿ ಮತ್ತು ಗೋರಖ್‍ಪುರ ಸೇರಿದಂತೆ ಪ್ರತಿಷ್ಠಿತ ಕ್ಷೇತ್ರಗಳು ಒಳಗೊಂಡಿರುವ ಪೂರ್ವ ಉತ್ತರಪ್ರದೇಶದ ಜವಾಬ್ದಾರಿಯನ್ನು ಹೈಕಮಾಂಡ್ ವಹಿಸಿದೆ.

ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಿಂದ ಏಕಾಂಗಿಯಾಗಿ ಸ್ಪರ್ಧಿಸಲು ಮುಂದಾಗಿರುವ ಕಾಂಗ್ರೆಸ್, ಈ ಮೂಲಕ ಪೂರ್ವ ಉತ್ತರಪ್ರದೇಶ ಹಿಡಿತ ಹೊಂದಿರುವ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಟಾಂಗ್ ಕೊಡಲು ಮೆಗಾ ಪ್ಲಾನ್ ಮಾಡಿದೆ. ಪ್ರಿಯಾಂಕಾ ಗಾಂಧಿ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಹಿನ್ನೆಲೆ ಸಾಕಷ್ಟು ನಿರೀಕ್ಷೆಗಳು ಹುಟ್ಟಿಕೊಂಡಿದ್ದು ಕಾರ್ಯಕರ್ತರಲ್ಲಿ ಹೊಸ ಹುರುಪು ಬಂದಿದೆ.

ರಾಬರ್ಟ್ ವಾದ್ರಾ ಮೇಲೆ ಭ್ರಷ್ಟಾಚಾರ ಆರೋಪ ಕೇಳಿ ಬಂದ ನಂತರ ಸಾರ್ವಜನಿಕ ಜೀವನದಿಂದ ಪ್ರಿಯಾಂಕಾ ಗಾಂಧಿ ದೂರ ಉಳಿಯಲು ಇಚ್ಛಿಸಿದ್ದರು. 2019ರ ಲೋಕಸಭೆ ಚುನಾವಣೆ ಹೊಸ್ತಿಲಲ್ಲಿರುವಾಗ ಸಕ್ರಿಯ ರಾಜಕಾರಣಕ್ಕೆ ಮತ್ತೆ ಪ್ರಿಯಾಂಕಾ ಕಾಲಿಟ್ಟಿದ್ದು ಕಾರ್ಯಕರ್ತರ ಪಡೆಯಲ್ಲಿ ಹೆಚ್ಚಿನ ಬಲ ತಂದಿದೆ. ಇದರ ಜೊತೆಗೆ ಉತ್ತರ ಪ್ರದೇಶ ಪಶ್ಚಿಮಕ್ಕೆ ಜ್ಯೋತಿರಾಧಿತ್ಯ ಸಿಂಧಿಯಾ ಅವರು ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿದ್ದು, ಯುವ ನಾಯಕನ ಮೂಲಕ ಉತ್ತರ ಪ್ರದೇಶದಲ್ಲಿ ಪಕ್ಷ ಸಂಘಟನೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಒತ್ತು ಕೊಟ್ಟಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಅವರಿಗೆ ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ, ಹಿರಿಯ ನಾಯಕ ಗುಲಾಂ ನಬೀ ಆಜಾದ್ ಅವರನ್ನ ಹರಿಯಾಣ ಪ್ರಧಾನ ಕಾರ್ಯದರ್ಶಿ ಕಾಂಗ್ರೆಸ್ ಹೈಕಮಾಂಡ್ ನೇಮಕ ಮಾಡಿದೆ.

ಪ್ರಿಯಾಂಕಾ ಗಾಂಧಿ ರಾಜಕೀಯ ಪ್ರವೇಶದಿಂದಾಗುವ ಕಾಂಗ್ರೆಸ್ ಪಕ್ಷಕ್ಕಾಗುವ ಅನುಕೂಲಗಳು:
* ಇಂದಿರಾ ಗಾಂಧಿ ಹೋಲಿಕೆ ಹೊಂದಿರುವ ಪ್ರಿಯಾಂಕಾ ರಾಜಕೀಯ ಪ್ರವೇಶದಿಂದ ಕಾಂಗ್ರೆಸ್‍ಗೆ ಹೆಚ್ಚಿನ ಬಲ.
* ಇಂದಿರಾ ಗಾಂಧಿ ರೀತಿಯ ವಾಕ್ ಚಾತುರ್ಯ, ಚರಿಷ್ಮದಿಂದಾಗಿ ಚುನಾವಣಾ ಪ್ರಚಾರದಲ್ಲಿ ಪಕ್ಷಕ್ಕೆ ಲಾಭ.
* 2014 ಚುನಾವಣಾ ಸೋಲಿನ ಬಳಿಕ ಪ್ರಿಯಾಂಕಾ ರಾಜಕೀಯ ಪ್ರವೇಶ ಕೇಳಿ ಬಂದಿತು, ಅದು ಈಗ ಈಡೇರಿದಂತಾಗಿದ್ದು ಕಾರ್ಯಕರ್ತರಲ್ಲಿ ಖುಷಿ ತಂದಿದೆ.
* ಸತತ ಸೋಲಿನಿಂದ ಕಂಗೆಟ್ಟಿದ ಕಾಂಗ್ರೆಸ್ ಪ್ರಿಯಾಂಕಾ ಗಾಂಧಿ ಹೊಸ ಟಾನಿಕ್ ಆಗಬಹುದು.
* ನೇರವಾಗಿ ಜನರ ಬಳಿ ತೆರಳುವ ಹಾಗೂ ಬೆರೆಯುವ ಮನಸ್ಥತಿ ಹೊಂದಿರುವ ನಾಯಕಿ.
* ಯುವಕರು ಹಾಗೂ ಹಿರಿಯರನ್ನು ಒಟ್ಟಾಗಿ ಕೊಂಡೊಯ್ಯುವ ರಾಜಕೀಯ ಜಾಣ್ಮೆ ಹೊಂದಿರುವ ಪ್ರಿಯಾಂಕಾ.
* ಪೂರ್ವ ಉತ್ತರ ಪ್ರದೇಶದಲ್ಲಿ ರಾಜಕೀಯ ಪ್ರವೇಶದಿಂದ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಕಾಂಗ್ರೆಸ್ ಟಾಂಗ್ ಕೊಡುವ ಪ್ರಯತ್ನ.
* ಸೋನಿಯಾಗಾಂಧಿ ರಾಜಕೀಯ ನಿವೃತ್ತಿ ಸಾಧ್ಯತೆ ಇದ್ದು, ರಾಯಬರೇಲಿಯಿಂದ ಪ್ರಿಯಾಂಕಾ ಸ್ವರ್ಧೆ ಸಾಧ್ಯತೆ.
* ಈ ಮೂಲಕ ಏಕಾಂಗಿಯಾಗಿ ಸ್ವರ್ಧಿಸಲು ಚಿಂತಿಸಿರುವ ಕಾಂಗ್ರೆಸ್ ಪ್ರಿಯಾಂಕಾ ಶಕ್ತಿಯಾಗಿ ನಿಲ್ಲಲಿದ್ದಾರೆ.

ಅನಾನುಕೂಲಗಳು:
* ಭ್ರಷ್ಟಾಚಾರ ಆರೋಪ ಹೊತ್ತಿರುವ ಪತಿ ರಾಬರ್ಟ್ ವಾದ್ರಾರಿಂದ ಪ್ರಿಯಾಂಕ ಗಾಂಧಿಗೆ ರಾಜಕೀಯ ಹಿನ್ನಡೆ ಸಾಧ್ಯತೆ.
* ವಾದ್ರಾರಿಂದ ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್‍ಗೆ ಮುಜುಗರ ಉಂಟಾಗಬಹುದು.
* ಪ್ರಿಯಾಂಕಾಗೆ ಅನುಭವ ಇಲ್ಲದೇ ಇರುವುದರಿಂದ ಪರಿಸ್ಥಿತಿ ನಿಭಾಯಿಸುವುದು ಕಷ್ಟವಾಗಬಹುದು.
* ಪ್ರಿಯಾಂಕ ಗೆದ್ದು ಕಾಂಗ್ರೆಸ್ ಸೋತರೆ ಭವಿಷ್ಯ ಉಜ್ವಲವಾಗದೇ ಇರಬಹುದು.
* ಸ್ವಸಾಮರ್ಥ್ಯ ಇದ್ದರೂ ರಾಹುಲ್ ಗಾಂಧಿ ನೆರಳಲ್ಲೇ ಕೆಲಸ ಮಾಡಬೇಕು.

Comments are closed.