ರಾಷ್ಟ್ರೀಯ

2019ರ ಕೇಂದ್ರ ಬಜೆಟ್: ನೌಕರ ವರ್ಗದವರು 5 ಲಕ್ಷದವರೆಗೂ ಆದಾಯ ತೆರಿಗೆ ಕಟ್ಟಬೇಕಿಲ್ಲ

Pinterest LinkedIn Tumblr

ನವದೆಹಲಿ: ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ಈ ಹೊತ್ತಿನಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಫೆಬ್ರವರಿ 1ರಂದು ಬಜೆಟ್​ ಮಂಡನೆ ಮಾಡಲು ಮುಂದಾಗಿದೆ. ಚುನಾವಣಾ ಪೂರ್ವ ಬಜೆಟ್​ನಲ್ಲಿ ರೂ. 5 ಲಕ್ಷದೊಳಗಿನ ಆದಾಯ ಹೊಂದಿದವರಿಗೆ ತೆರಿಗೆ ವಿನಾಯಿತಿ ಘೋಷಿಸುವ ಸಾಧ್ಯತೆಯಿದೆ. ಈ ಮೂಲಕ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಮತದಾರರನ್ನು ಸೆಳೆಯಲು ಹಣಕಾಸು ಸಚಿವ ಅರುಣ್​ ಜೇಟ್ಲಿ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸದ್ಯ ಆದಾಯ ತೆರಿಗೆ ವಿನಾಯಿತಿಯ ಮಿತಿ ರೂ 2.5 ಲಕ್ಷ ವಾರ್ಷಿಕ ವರಮಾನವಾಗಿತ್ತು. ಇದೀಗ ಈ ಮಿತಿಯನ್ನು ಐದು ಲಕ್ಷಕ್ಕೆ ಏರಿಕೆ ಮಾಡಲು ಕೇಂದ್ರ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಈ ಮಹತ್ವದ ತೆರಿಗೆ ವಿನಾಯಿತಿ ನಿರ್ಧಾರವನ್ನು ಜಾರಿಗೆ ತರುವ ಅವಕಾಶವಿದೆ. ಒಂದರ್ಥದಲ್ಲಿ ಈ ನಿರ್ಣಯ ಮತದಾರರನ್ನು ಸೆಳೆಯುವಲ್ಲಿ ಸಹಕಾರಿಯಾಗಲಿದೆ.

ಜತೆಗೆ ಪರೋಕ್ಷ ತೆರಿಗೆ ಮತ್ತು ವಾಣಿಜ್ಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಅಥವಾ ವಿನಾಯಿತಿ ನೀಡದಿರಲು ಕೇಂದ್ರ ನಿರ್ಧರಿಸಿದೆ ಎನ್ನಲಾಗಿದೆ. ಇದೇ ಫೆಬ್ರವರಿ 1ರಂದು ಅರುಣ್​ ಜೇಟ್ಲಿ ತಮ್ಮ ಐದನೇ ಮತ್ತು ಅಧಿಕಾರಾವಧಿಯ ಕಡೆಯ ಬಜೆಟ್​ ಮಂಡನೆ ಮಾಡುತ್ತಿದ್ದು, ತೆರಿಗೆ ಪದ್ಧತಿಯನ್ನು ಬಲಾಯಿಸಿರಲಿಲ್ಲ.

“ನೌಕರರ ವರ್ಗಕ್ಕೆ ಕಳೆದ ಮೂರು ವರ್ಷಗಳಿಂದ ಎಲ್ಲ ರೀತಿಯ ತೆರಿಗೆ ವಿನಾಯಿತಿ ನೀಡಲಾಗಿದೆ. ಇದಕ್ಕಿಂತ ಹೆಚ್ಚು ವಿನಾಯಿತಿಯಾಗಲೀ ಬದಲವಾಣೆಯನ್ನಾಗಲೀ ಮಾಡಲು ಸಾಧ್ಯವಿಲ್ಲ,” ಎಂದು ಕಳೆದ ಬಜೆಟ್​ ಮಂಡನೆಯ ವೇಳೆ ಜೇಟ್ಲಿ ತಿಳಿಸಿದ್ದರು.

ಈ ಹಿಂದೆ ರೂ. 2.5 ಲಕ್ಷ ಮತ್ತು ರೂ. 5 ಲಕ್ಷ ನಡುವಿನ ಆದಾಯ ಹೊಂದಿರುವವರಿಗೆ 10% ತೆರಿಗೆ ವಿಧಿಸಲಾಗಿತ್ತು. ಈ ಮಿತಿಯನ್ನು 5%ಗೆ 2017ರ ಬಜೆಟ್​ನಲ್ಲಿ ಅರುಣ್​ ಜೇಟ್ಲಿ ಇಳಿಸಿದ್ದರು. ಈಗ 5% ಇದ್ದ ತೆರಿಗೆಯನ್ನು ಸಂಪೂರ್ಣವಾಗಿ ಕಡಿತಗೊಳಿಸಿ, ರೂ. 5 ಲಕ್ಷದವರೆಗೆ ತೆರಿಗೆ ವಿನಾಯಿತಿ ನೀಡಲು ಹೊರಟಿದ್ದಾರೆ. ಇದರಿಂದ ಸಹಜವಾಗಿ ಈ ಮೊತ್ತವನ್ನು ಗಳಿಸುತ್ತಿರುವ ನೌಕರರಿಗೆ ಸಹಾಯವಾಗಲಿದೆ. ಈ ಹಿನ್ನಲೆಯಲ್ಲಿ ಜೇಟ್ಲಿ ಮತ ಕ್ರೋಢೀಕರಣಕ್ಕೆ ಮುಂದಾಗಿದ್ದಾರ ಎಂಬ ಪ್ರಶ್ನೆಯೂ ಕೇಳಿ ಬರುತ್ತಿದೆ. ಒಟ್ಟಿನಲ್ಲಿ ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿ ಮತದಾರನ ಮನವೊಲಿಸಲು ಕೇಂದ್ರ ಸರ್ಕಾರ ಅಂತಿಮ ಪ್ರಯತ್ನಕ್ಕೆ ಕೈ ಹಾಕಿದೆ.

Comments are closed.