ರಾಷ್ಟ್ರೀಯ

ದಶರಥನ ಅರಮನೆಯ 10 ಸಾವಿರ ಕೋಣೆಗಳಲ್ಲಿ ರಾಮ ಹುಟ್ಟಿದ್ದೆಲ್ಲಿ? ಮಣಿಶಂಕರ್‌ ಅಯ್ಯರ್‌

Pinterest LinkedIn Tumblr


ಹೊಸದಿಲ್ಲಿ: ವಿವಾದಿತ ಹೇಳಿಕೆಗಳ ಮೂಲಕ ಕಾಂಗ್ರೆಸ್ ಹೈ ಕಮಾಂಡ್‌ಗೆ ಸದಾ ತಲೆನೋವು ತಂದಿಡುವ ಪಕ್ಷದ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಮತ್ತೆ ಹೊಸ ವಿವಾದವೊಂದನ್ನು ಸೃಷ್ಟಿಸಿದ್ದಾರೆ. ಅವರು ಈ ಬಾರಿ ಆಯ್ದುಕೊಂಡಿದ್ದು ರಾಮ ಜನ್ಮಭೂಮಿ ವಿವಾದವನ್ನು.

ಹೊಸದಿಲ್ಲಿಯಲ್ಲಿ ಡೆಮಾಕ್ರೆಟಿಕ್ ಆಫ್ ಇಂಡಿಯಾ ಆಯೋಜಿಸಿದ್ದ ಏಕ್ ಶಾಮ್ ಬಾಬ್ರಿ ಮಸೀದಿ ಕೇ ನಾಮ್ ( ಬಾಬ್ರಿ ಮಸೀದಿ ಹೆಸರಲ್ಲಿ ಒಂದು ಸಂಜೆ) ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅಯ್ಯರ್, ರಾಜಾ ದಶರಥ ಬಹುದೊಡ್ಡ ಸಾಮ್ರಾಟನಾಗಿದ್ದ. ಆತನ ಅರಮನೆಯಲ್ಲಿ 10ಸಾವಿರ ಕೋಣೆಗಳಿದ್ದವು. ಭಗವಾನ್ ರಾಮ ಯಾವ ಕೋಣೆಯಲ್ಲಿ ಹುಟ್ಟಿದ ಎಂದು ಹೇಳಿ ನೋಡೋಣ ಎಂದು ಬಿಜೆಪಿಯವರನ್ನು ಕೆಣಕಿದ್ದಾರೆ.

ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಜನರನ್ನುದ್ದೇಶಿಸಿ ಮಾತನಾಡಿದ ಅಯ್ಯರ್, ಬಹುದೊಡ್ಡ ರಾಜನಾಗಿದ್ದ ದಶರಥನ ಅರಮನೆಯಲ್ಲಿ 10 ಸಾವಿರ ಕೋಣೆಗಳಿದ್ದವು ಎಂದು ಹೇಳಲಾಗುತ್ತದೆ. ಯಾವ ಕೋಣೆ ಎಲ್ಲಿತ್ತು ಎಂದು ಯಾರಿಗೆ ಗೊತ್ತು? ನೀವು ಅಯೋಧ್ಯೆಯಲ್ಲಿ ಮಂದಿರ ಕಟ್ಟುತ್ತೇವೆ ಎನ್ನುತ್ತೀರಿ. ಕಟ್ಟಿರಿ. ಆದರೆ ಮಂದಿರವನ್ನು ಅಲ್ಲೇ ಕಟ್ಟುತ್ತೇವೆ ( ಮಂದಿರ್ ವಹೀಂ ಬನಾಯೇಂಗೆ)? ಎಂದು ಹೇಳುವುದರಲ್ಲಿ ಏನರ್ಥವಿದೆ ಎಂದು ರಾಮ ಮಂದಿರ ನಿರ್ಮಾಣ ಕುರಿತಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಬಿಜೆಪಿ ಘೋಷವಾಕ್ಯದ ವಿರುದ್ಧ ಪ್ರಶ್ನೆ ಎತ್ತಿದ್ದಾರೆ.

ಇಂತಹದ್ದೇ ಜಾಗದಲ್ಲಿ ನಮ್ಮ ಭಗವಂತ ರಾಮ ಹುಟ್ಟಿದ , ಹೀಗಾಗಿ ನಾವು ಇಲ್ಲೇ ಮಂದಿರ ಕಟ್ಟುತ್ತೇವೆ. ಅದಕ್ಕಾಗಿ ಅಲ್ಲಿರುವ ಮಸೀದಿಯನ್ನು ಮೊದಲು ನಾಶ ಮಾಡಲು ಹೊರಟಿದ್ದೇವೆ. ಹಿಂದೂಸ್ತಾನದಲ್ಲಿ ಅಲ್ಲಾನನ್ನು ನಂಬುವುದು ತಪ್ಪೇ ಎಂದು ಅವರು ಸವಾಲೆಸೆದಿದ್ದಾರೆ.

Comments are closed.