ರಾಷ್ಟ್ರೀಯ

ಆಪರೇಷನ್ ಡಜನ್’ಗೆ ಶಾ ಪ್ಲ್ಯಾನ್: ದೆಹಲಿಗೆ ಬರುವಂತೆ ರಾಜ್ಯದ ಎಲ್ಲ ಬಿಜೆಪಿ ಶಾಸಕರಿಗೆ ಸೂಚನೆ

Pinterest LinkedIn Tumblr


ಬೆಂಗಳೂರು: ಕಾಂಗ್ರೆಸ್‍ನ ಅತೃಪ್ತ 12 ಜನ ಶಾಸಕರನ್ನು ಬಿಜೆಪಿ ಸೇರ್ಪಡೆ ಮಾಡುವುದು ಹೇಗೆ, ಯಾವ ಸಮಯದಲ್ಲಿ ಏನು ಮಾಡಬೇಕು ಅಂತ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. ಪ್ಲ್ಯಾನ್ ಪ್ರಕಾರ ಸಂಕ್ರಾಂತಿಗೂ ಮುನ್ನವೇ ರಾಜ್ಯ ಬಿಜೆಪಿಯ 104 ಶಾಸಕರನ್ನು ದೆಹಲಿಗೆ ಕರೆಸಿಕೊಳ್ಳುತ್ತಿದ್ದಾರಂತೆ.

`ಆಪರೇಷನ್ ಡಜನ್’ಗೆ ಸೋಮವಾರ ಮುಹೂರ್ತ ಫಿಕ್ಸ್ ಮಾಡಲಾಗಿದ್ದು, ಸಿಎಂ ಕುಮಾರಸ್ವಾಮಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಸಂಕ್ರಾಂತಿಯ ಶಾಕ್ ಕೊಡಲು ಅಮಿತ್ ಶಾ ನಿರ್ಧರಿಸಿದ್ದಾರಂತೆ. ಇದರಿಂದಾಗಿ ರಾಜ್ಯ ಬಿಜೆಪಿ ಶಾಸಕರು ಈ ಬಾರಿ ಸಂಕ್ರಾಂತಿ ಆಚರಣೆಯನ್ನು ಮನೆಯಲ್ಲಿ ಮಾಡಲ್ಲ. ಬದಲಾಗಿ ದೆಹಲಿ ಅಥವಾ ಮುಂಬೈನಲ್ಲಿ ಆಚರಿಸಲಿದ್ದಾರೆ. ಈ ವೇಳೆ ಅಮಿತ್ ಶಾ ಎಲ್ಲ ಶಾಸಕರಿಗೂ ಫುಲ್ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಎಲ್ಲ ಶಾಸಕರನ್ನು ಬರಹೇಳಿದ್ದು ಯಾಕೆ?:
ಕಾಂಗ್ರೆಸ್‍ನ 12 ಜನ ಶಾಸಕರಿಂದ ರಾಜೀನಾಮೆ ಕೊಡಿಸುತ್ತಿದ್ದಂತೆ, ಸಿಎಂ ಕುಮಾರಸ್ವಾಮಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ನಮ್ಮ ಶಾಸಕರಿಗೆ ಬಲೆ ಬೀಸುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಆಪರೇಷನ್ ಡಜನ್ ಪೂರ್ಣವಾಗುವವರೆಗೂ ನಮ್ಮ ಶಾಸಕರು ದೆಹಲಿಯಲ್ಲಿಯೇ ಇರಬೇಕು. ಒಂದು ವೇಳೆ ಅಗತ್ಯ ಬಿದ್ದರೆ ಶಾಸಕರನ್ನು ಮುಂಬೈಗೆ ಕಳುಹಿಸಲಾಗುತ್ತದೆ ಎಂದು ಅಮಿತ್ ಶಾ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಸೂಚಿಸಿದ್ದಾರಂತೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿಂದಂತೆ ಪಕ್ಷದ 104 ಜನ ಶಾಸಕರು ಶುಕ್ರವಾರ ಬೆಳಗ್ಗೆ ದೆಹಲಿಗೆ ಬರಬೇಕು. ಯಾವುದೇ ಶಾಸಕರು ತಪ್ಪಿಸಿಕೊಳ್ಳುವಂತಿಲ್ಲ, ಎಲ್ಲರೂ ದೆಹಲಿಯಲ್ಲೇ ಮೂರು ದಿನ ಇರಬೇಕು. ಎಲ್ಲ ಶಾಸಕರನ್ನು ದೆಹಲಿಗೆ ಕರೆದುಕೊಂಡು ಬರುವ ಜವಾಬ್ದಾರಿಯನ್ನು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಶಾಸಕರಾದ ಅರವಿಂದ್ ಲಿಂಬಾವಳಿ ಹಾಗೂ ಉಮೇಶ್ ಕತ್ತಿ ಅವರು ವಹಿಸಿಕೊಳ್ಳಬೇಕು ಎಂದು ಅಮಿತ್ ಶಾ ಆದೇಶ ಹೊರಡಿಸಿದ್ದಾರಂತೆ.

ಬಿಜೆಪಿ ರಾಷ್ಟ್ರೀಯ ಮಂಡಳಿ ಸಭೆಯ ನೆಪದಲ್ಲಿ ಶಾಸಕರಿಗೆ ಬುಲಾವ್ ನೀಡಲಾಗಿದ್ದು, ಶುಕ್ರವಾರ, ಶನಿವಾರ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಮಂಡಳಿ ಸಭೆ ನಡೆಯಲಿದೆ. ಈ ಎರಡು ದಿನಗಳ ಸಭೆಯ ಬಳಿಕ ಭಾನುವಾರ ರಾಜ್ಯ ಶಾಸಕರು ಅಮಿತ್ ಶಾ ಅವರ ನಿರೀಕ್ಷಣೆಯಲ್ಲಿ ಶಾಸಕರು ಇರಲಿದ್ದಾರೆ. ಇತ್ತ ಕಾಂಗ್ರೆಸ್ ಅತೃಪ್ತ 12 ಜನ ಶಾಸಕರು ಕೂಡ ದೆಹಲಿಯಲ್ಲಿಯೇ ಇದ್ದಾರೆ. ಅವರು ರಾಜ್ಯಕ್ಕೆ ಮರಳಿ ಸೋಮವಾರ ರಾಜ್ಯಪಾಲರಿಗೆ ರಾಜೀನಾಮೆ ಪತ್ರ ನೀಡಲಿದ್ದಾರೆ. ಈ ಎಲ್ಲ ಪ್ಲ್ಯಾನ್ ವಿಫಲವಾಗದಂತೆ ಎಚ್ಚರ ವಹಿಸಬೇಕು ಎಂದು ಅಮಿತ್ ಶಾ ಅವರು ರಾಜ್ಯ ನಾಯಕರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ ಎಂದು ಪಕ್ಷದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

Comments are closed.