ರಾಷ್ಟ್ರೀಯ

ರಾಹುಲ್, ಸೋನಿಯಾ ಗಾಂಧಿಯಿಂದ 100 ಕೋಟಿ ರೂಪಾಯಿಗಳಷ್ಟು ಆದಾಯ ತೆರಿಗೆ ಪಾವತಿಸದೆ ವಂಚಿಸಿದ್ದಾರೆ: ಐಟಿ ಇಲಾಖೆ ನೊಟೀಸ್ ಜಾರಿ

Pinterest LinkedIn Tumblr

ನವದೆಹಲಿ: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಅವರ ಪುತ್ರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ 2011-12ರಲ್ಲಿ ಸುಮಾರು 100 ಕೋಟಿ ರೂಪಾಯಿಗಳಷ್ಟು ಆದಾಯ ತೆರಿಗೆ ಪಾವತಿಸದೆ ವಂಚಿಸಿದ್ದಾರೆ ಎಂದು ತೆರಿಗೆ ಇಲಾಖೆ ಆರೋಪಿಸಿದೆ. ಈ ಕುರಿತು ಇಬ್ಬರಿಗೂ ನೊಟೀಸ್ ಜಾರಿ ಮಾಡಿದೆ.

ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಕೇಸಿಗೆ ಸಂಬಂಧಪಟ್ಟಂತೆ ಇವರ ಆದಾಯ ಕುರಿತು ಮರು ಮೌಲ್ಯಮಾಪನ ನಡೆಸಿದ ನಂತರ ಆದಾಯ ತೆರಿಗೆ ಇಲಾಖೆಗೆ ಆದಾಯ ಘೋಷಣೆ ಮತ್ತು ತೆರಿಗೆ ಪಾವತಿಯಲ್ಲಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಕೇಸಿನಲ್ಲಿ ಈಗಾಗಲೇ ಇಬ್ಬರೂ ಕ್ರಿಮಿನಲ್ ತನಿಖೆ ಎದುರಿಸುತ್ತಿದ್ದಾರೆ.

2011-12ರಲ್ಲಿ ಸೋನಿಯಾ ಗಾಂಧಿ 155 ಕೋಟಿ ರೂಪಾಯಿ ಹಾಗೂ ರಾಹುಲ್ ಗಾಂಧಿ 155.4 ಕೋಟಿ ರೂಪಾಯಿ ಆದಾಯ ಘೋಷಿಸಿದ್ದರೂ ಅದಕ್ಕಿಂತ ಹೆಚ್ಚಿನ ಆದಾಯ ಹೊಂದಿದ್ದರು ಎಂದು ಇಂಗ್ಲಿಷ್ ದೈನಿಕ ಪತ್ರಿಕೆಯೊಂದು ವರದಿ ಮಾಡಿದೆ.

ಆ ವರ್ಷ ರಾಹುಲ್ ಗಾಂಧಿಯವರು 68.12 ಲಕ್ಷ ರೂಪಾಯಿ ತೆರಿಗೆ ಘೋಷಿಸಿದ್ದರೆ ಅವರ ಆದಾಯ 155.4 ಕೋಟಿ ರೂಪಾಯಿಗಳಾಗಿತ್ತು ಮತ್ತು ಅವರ ತಾಯಿ ಸೋನಿಯಾ ಅವರ ಆದಾಯ 155 ಕೋಟಿ ರೂಪಾಯಿಗಳಾಗಿದ್ದವು ಎಂದು ಐಟಿ ಇಲಾಖೆಯ ಪರಾಮರ್ಶೆ ವೇಳೆ ತಿಳಿದುಬಂದಿದೆ. ಅವರ ಸಹೋದ್ಯೋಗಿ ಆಸ್ಕರ್ ಫೆರ್ನಾಂಡಿಸ್ 2011-12ರಲ್ಲಿ 48.93 ಕೋಟಿ ರೂಪಾಯಿ ಆದಾಯ ಹೊಂದಿದ್ದರು ಎಂದು ಐಟಿ ಇಲಾಖೆ ಮೂಲಗಳು ಹೇಳುತ್ತವೆ.

ಸುಮಾರು 300 ಕೋಟಿ ರೂಪಾಯಿ ಆದಾಯಕ್ಕೆ ಸುಮಾರು 100 ಕೋಟಿ ರೂಪಾಯಿಗಳಷ್ಟು ತೆರಿಗೆ ಪಾವತಿಯಿಂದ ತಪ್ಪಿಸಿಕೊಂಡಿದ್ದಾರೆ ಎಂದು ಮರು ಮೌಲ್ಯಮಾಪನ ವೇಳೆ ತಿಳಿದುಬಂದಿದೆ.

ಇದಕ್ಕೂ ಮುನ್ನ ಸುಪ್ರೀಂ ಕೋರ್ಟ್ ನಲ್ಲಿ ತೆರಿಗೆ ಮೌಲ್ಯಮಾಪನ ಮರು ಆರಂಭದ ವಿರುದ್ಧ ಸೋನಿಯಾ ಗಾಂಧಿಯವರ ಪರವಾಗಿ ನ್ಯಾಯಮೂರ್ತಿ ಎ ಕೆ ಸಿಕ್ರಿ ಎದುರು ವಾದ ಮಂಡಿಸಿದ ಪಿ ಚಿದಂಬರಂ, ಸೋನಿಯಾ ಅವರ ಆದಾಯವನ್ನು ಮರು ಮೌಲ್ಯಮಾಪನಗೊಳಿಸುವ ಮೂಲಕ ಸುಮಾರು 44 ಕೋಟಿ ರೂಪಾಯಿ ತೆರಿಗೆ ಪಾವತಿ ಮಾಡಬೇಕೆಂದು ದುರುದ್ದೇಶಪೂರ್ವಕವಾಗಿ ತೋರಿಸಲಾಗುತ್ತಿದೆ ಎಂದು ಆರೋಪಿಸಿದ್ದರು.

ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್(ಎಜೆಎಲ್) ಗೆ ಸಂಬಂಧಪಟ್ಟಂತೆ ಸೋನಿಯಾ ಗಾಂಧಿಯವರ 141 ಕೋಟಿ ರೂಪಾಯಿ ಆದಾಯಕ್ಕೆ ತೆರಿಗೆ ಪಾವತಿ ಸಲ್ಲಿಸದೆ ತಪ್ಪಿಸಿಕೊಂಡಿದ್ದಾರೆ ಎಂಬ ನಿರ್ಧಾರಕ್ಕೆ ಐಟಿ ಇಲಾಖೆ ಅಧಿಕಾರಿಗಳು ಬಂದಿದ್ದಾರೆ ಎಂದು ಚಿದಂಬರಂ ವಾದ ಮಂಡಿಸಿದರು. ರಾಹುಲ್ ಗಾಂಧಿ ಕೂಡ ಇಷ್ಟೇ ಮೊತ್ತಕ್ಕೆ ತೆರಿಗೆ ಪಾವತಿ ವಂಚನೆ ಆರೋಪ ಎದುರಿಸುತ್ತಿದ್ದಾರೆ.

ಐಟಿ ಇಲಾಖೆಯ ಪರಿಶೀಲನೆ ಆದೇಶವನ್ನು ಕಳೆದ ಡಿಸೆಂಬರ್ 31ಕ್ಕೆ ಸೋನಿಯಾ, ರಾಹುಲ್ ಮತ್ತು ಆಸ್ಕರ್ ಫೆರ್ನಾಂಡೀಸ್ ವಿರುದ್ಧ ಹೊರಡಿಸಲಾಗಿತ್ತು. ಅದರ ಪ್ರತಿಯನ್ನು ಉತ್ತರಿಸಲು ಕಳುಹಿಸಲಾಗಿದೆ. ಮುಂದಿನ ವಿಚಾರಣೆ ಇದೇ ತಿಂಗಳ 29ರಂದು ನಡೆಯಲಿದೆ.

Comments are closed.