ರಾಷ್ಟ್ರೀಯ

ಶ್ರೀರಾಮ ಹಿಂದುಗಳಿಗೆ ಮಾತ್ರ ಸೇರಿದ ದೇವರಲ್ಲ, ಆತ ಇಡೀ ವಿಶ್ವಕ್ಕೆ ಸೇರಿದವನು: ಮಾಜಿ ಸಿಎಂ ಫಾರೂಕ್​ ಅಬ್ದುಲ್ಲ

Pinterest LinkedIn Tumblr

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಿವಾದ ರಾಜಕೀಯ ರೂಪ ತಾಳಿದೆ. ಈ ಪ್ರಕರಣದ ಬಗ್ಗೆ ಆದಷ್ಟು ಬೇಗ ಜನರೇ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಸುಮ್ಮನೆ ಈ ವಿಷಯವನ್ನು ನ್ಯಾಯಾಲಯಕ್ಕೆ ಎಳೆದಾಡುವುದು ಸರಿಯಲ್ಲ. ಮಾತುಕತೆಯಲ್ಲೇ ಮುಗಿಯುವ ವಿಷಯವನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳಲಾಗುತ್ತಿದೆ. ಶ್ರೀರಾಮ ಹಿಂದುಗಳಿಗೆ ಮಾತ್ರ ಸೇರಿದ ದೇವರಲ್ಲ. ಆತ ಇಡೀ ವಿಶ್ವಕ್ಕೆ ಸೇರಿದವನು ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್​ ಅಬ್ದುಲ್ಲ ಅಭಿಪ್ರಾಯಪಟ್ಟಿದ್ದಾರೆ.

ಈ ಹಿಂದೆ ನವೆಂಬರ್​ನಲ್ಲಿ ಈ ಬಗ್ಗೆ ಮಾತನಾಡಿದ್ದ ಫಾರುಕ್ ಅಬ್ದುಲ್ಲ, ನಾನು ಮಂದಿರಗಳನ್ನು ನಿರ್ಮಿಸಲು ಯಾವ ರೀತಿಯ ವಿರೋಧವನ್ನೂ ಮಾಡುವುದಿಲ್ಲ. ಆದರೆ, ಅಯೋಧ್ಯೆಯಲ್ಲೇ ಯಾಕೆ ರಾಮ ಮಂದಿರ ನಿರ್ಮಾಣ ಮಾಡಬೇಕು? ಎಂಬುದು ನನ್ನ ಪ್ರಶ್ನೆ ಎಂದಿದ್ದರು.

ಹಾಗೇ, ಶ್ರೀರಾಮನನ್ನು ಮುಂದಿಟ್ಟುಕೊಂಡರೆ ತಾವು ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದು ಬಿಜೆಪಿ ಅಂದುಕೊಂಡಿದೆ. ಆದರೆ, ರಾಮನಾಗಲಿ, ಅಲ್ಲಾ ಆಗಲಿ ಚುನಾವಣೆಯಲ್ಲಿ ಗೆಲ್ಲಿಸುವುದಿಲ್ಲ. ಜನ ಹಾಕುವ ಮತದಿಂದ ಮಾತ್ರ ನಾವು ಗೆಲ್ಲಲು ಸಾಧ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಹೇಳಿದ್ದರು.

ಇದೀಗ, ಶ್ರೀರಾಮ ಎಲ್ಲರಿಗೂ ಸಂಬಂಧಿಸಿದ ದೇವರು ಎಂದು ಹೇಳಿರುವ ಫಾರುಕ್ ಅಬ್ದುಲ್ಲ, ಶ್ರೀರಾಮ ದೇವರ ಬಗ್ಗೆ ಯಾರಿಗೂ ದ್ವೇಷವಿಲ್ಲ. ಈ ಸಮಸ್ಯೆಯನ್ನು ಬಗೆಹರಿಸಿಕೊಂಡು ರಾಮ ಮಂದಿರ ನಿರ್ಮಿಸಲು ಪ್ರಯತ್ನಿಸುವುದು ತಪ್ಪಲ್ಲ. ಒಂದುವೇಳೆ ಅಲ್ಲಿ ರಾಮಮಂದಿರ ನಿರ್ಮಾಣವಾಗುವುದಾದರೆ ನಾನು ಕೂಡ ಹೋಗಿ ಶಂಕುಸ್ಥಾಪನೆಯಲ್ಲಿ ಪಾಲ್ಗೊಳ್ಳುತ್ತೇನೆ ಎಂದಿದ್ದಾರೆ.

ಮಂದಿರ, ಮಸೀದಿ, ಗುರುದ್ವಾರ, ಚರ್ಚ್​ಗಳ ಪ್ರಶ್ನೆಯಲ್ಲ. ದೇಶದಲ್ಲಿ ಎಲ್ಲ ಧರ್ಮದ ಎಲ್ಲ ಸ್ಮಾರಕಗಳಿಗೂ ಅವಕಾಶ ಸಿಗಬೇಕು ಎಂದು ಜಮ್ಮು ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲ ಹೇಳಿದ್ದಾರೆ.

Comments are closed.