ರಾಷ್ಟ್ರೀಯ

ಶಬರಿಮಲೆ ಪ್ರತಿಭಟನೆ: 48 ಗಂಟೆಗಳಲ್ಲಿ 266 ಬಂಧನ; 3 ಬಿಜೆಪಿ ಕಾರ್ಯಕರ್ತರಿಗೆ ಚೂರಿ ಇರಿತ, ಪೊಲೀಸರು, ಬಸ್’ಗಳ ಮೇಲೆ ದಾಳಿ

Pinterest LinkedIn Tumblr


ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ಸನ್ನಿಧಾನಕ್ಕೆ ನಿರ್ಬಂಧಿತ ವಯಸ್ಸಿನ ಮಹಿಳೆಯರು ಪ್ರವೇಶಮಾಡಿದ ನಂತರ ಕೇರಳದಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದು, ಪ್ರತಿಭಟನೆ ಹಿಂಸಾಚಾರದ ರೂಪ ಪಡೆಯುವುದನ್ನು ತಡೆಗಟ್ಟಲು ಪೊಲೀಸರು ಹಲವು ಕ್ರಮ ಕೈಗೊಂಡಿದ್ದಾರೆ.
ಹಿಂಸಾಚಾರದ ಪ್ರತಿಭಟನೆಯಲ್ಲಿ ತೊಡಗಿರುವವರನ್ನು ಪೊಲೀಸರು ಮುಲಾಜಿಲ್ಲದೇ ಬಂಧಿಸಿದ್ದು, ಈ ರೀತಿಯ ಪ್ರತಿಭಟನೆಯಲ್ಲಿ ತೊಡಗಿ ಬಂಧನಕ್ಕೊಳಗಾದ ಪ್ರತಿಭಟನಾಕಾರರ ಸಂಖ್ಯೆ 48 ಗಂಟೆಗಳಲ್ಲಿ 266 ಕ್ಕೆ ಏರಿಕೆಯಾಗಿದೆ. ಇನ್ನು ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಬರೊಬ್ಬರಿ 334 ಜನರನ್ನು ವಶಕ್ಕೆ ಪಡೆದಿದ್ದಾರೆ.
ಹಿಂದೂ ಸಂಘಟನೆಗಳು ಕರೆ ನೀಡಿರುವ ಪ್ರತಿಭಟನೆಯ ನಂತರ ಹಿಂಸಾಚಾರವಾಗಿರುವ ಬಗ್ಗೆ ವರದಿಗಳು ಪ್ರಕಟವಾಗಿದ್ದು, ಈ ರೀತಿಯ ಪ್ರತಿಭಟನೆಯನ್ನು ಹತ್ತಿಕ್ಕುವುದಕ್ಕಾಗಿ ಕೇರಳ ರಾಜ್ಯ ಪೊಲೀಸರು ಆಪರೇಷನ್ ಬ್ರೋಕನ್ ವಿಂಡೋ ಎಂಬ ಕಾರ್ಯಾಚಾರಣೆಯನ್ನು ಪ್ರಾರಂಭಿಸಿದ್ದಾರೆ.
ಕಾರ್ಯಾಚರಣೆಯ ಭಾಗವಾಗಿ ಹಿಂಸಾಚಾರದಲ್ಲಿ ತೊಡಗಿರುವ ಪ್ರತಿಭಟನಾ ನಿರತರನ್ನು ಬಂಧಿಸುವುದಷ್ಟೇ ಅಲ್ಲದೇ ಅವರ ಮೊಬೈಲ್ ಫೋನ್ ಗಳನ್ನು ವಶಕ್ಕೆ ತೆಗೆದುಕೊಂಡು ಡಿಜಿಟಲ್ ಪರಿಶೀಲನೆಗೆ ನೀಡಲಾಗುತ್ತದೆ ಹಾಗೂ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಶಂಕೆಯಿಂದ ಪ್ರತಿಭಟನಾಕಾರರ ಮನೆಗಳ ಮೇಲೆ ದಾಳಿಯನ್ನೂ ನಡೆಸಲಾಗುತ್ತದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ನು ಸಾಮಾಜಿಕ ಜಾಲತಾಣದಲ್ಲಿ ಹಿಂಸಾಚಾರಕ್ಕೆ ಉತ್ತೇಜನ ನೀಡುವವರ ವಿರುದ್ಧವೂ ಪ್ರಕರಣ ದಾಖಲಿಸಲಾಗುತ್ತದೆ ಎಂದು ಕೇರಳ ಪೊಲೀಸ್ ಇಲಾಖೆ ತಿಳಿಸಿದೆ.
………………….

3 ಬಿಜೆಪಿ ಕಾರ್ಯಕರ್ತರಿಗೆ ಚೂರಿ ಇರಿತ, ಪೊಲೀಸರು, ಬಸ್’ಗಳ ಮೇಲೆ ದಾಳಿ
ತಿರುವನಂತಪುರ: ಇಬ್ಬರು ಮಹಿಳೆಯರು ಶಬರಿಮಲೆ ಪ್ರವೇಶಿಸಿದ್ದನ್ನು ಖಂಡಿಸಿ ಕೇರಳ ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಮೂವರು ಬಿಜೆಪಿ ಕಾರ್ಯಕರ್ತರಿಗೆ ಚೂರಿ ಇರಿದಿರುವುದಾಗಿ ವರದಿಗಳಿಂದ ತಿಳಿದುಬಂದಿದೆ.
ಪ್ರತಿಭಟನೆ ವೇಳೆ 3 ಬಿಜೆಪಿ ಕಾರ್ಯಕರ್ತರಿಗೆ ಚೂರಿ ಇರಿಯಲಾಗಿದ್ದು, ಕಾರ್ಯಕರ್ತರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆಯಲ್ಲಿ ಎಸ್’ಡಿಪಿಐ ಕೈವಾಡವಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.
ಇದಲ್ಲದೆ, ಪೊಲೀಸರು, ಮಾಧ್ಯಮದ ವರದಿಗಾರರು ಹಾಗೂ ಲೇಖಕರ ಮೇಲೆಯೂ ದಾಳಿಗಲು ನಡೆದಿರುವುದಾಗಿ ವರದಿಗಳು ತಿಳಿಸಿವೆ.
ಪ್ರತಿಭಟನೆ ವೇಳೆ 7 ಪೊಲೀಸ್ ವಾಹನಗಳು ಹಾಗೂ 79 ಕೆಎಸ್ಆರ್’ಟಿಸಿ ಬಸ್ ಗಳನ್ನು ಧ್ವಂಸಗೊಳಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ತಿರುವನಂತಪುರಂನ ನೆಡುಮಂಗಡುವಿನಲ್ಲಿ ಕೆಲ ದುಷ್ಕರ್ಮಗಿಳು ಬಾಂಬ್ ದಾಳಿಯನ್ನೂ ನಡೆಸಿದ್ದು, ಘಟನೆಯಲ್ಲಿ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ.
ಈ ನಡುವೆ ಮಾಧ್ಯಮ ವರದಿಗಾರರ ಮೇಲೆ ನಡೆದ ದಾಳಿಯನ್ನು ಕೇರಳ ಪತ್ರಕರ್ತ ಸಂಘಟನೆ ತೀವ್ರವಾಗಿ ಖಂಡಿಸಿದೆ. ಅಲ್ಲದೆ, ಬಿಜೆಪಿ ಮುಖ್ಯಸ್ಥ ಶ್ರೀಧರನ್ ಪಿಳ್ಳೈ ಅವರ ಪತ್ರಿಕಾಗೋಷ್ಠಿಯನ್ನೂ ಬಹಿಷ್ಕರಿಸಿದೆ.
ಮಾಧ್ಯಮ ವರದಿಗಾರರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕೇರಳ ರಾಜ್ಯ ಪೊಲೀಸ್ ಮುಖ್ಯಸ್ಥ ಲೋಕನಾಥ್ ಬೆಹೆರಾ ಅವರು, ಆಯಾ ಜಿಲ್ಲಾ ಮುಖ್ಯಸ್ಥರು ವಿಶೇಷ ತಂಡವನ್ನು ರಚಿಸಿ ತನಿಖೆ ನಡೆಸುವಂತೆ ಸೂಚಿಸಿದ್ದಾರೆ.

Comments are closed.