ರಾಷ್ಟ್ರೀಯ

2000 ರೂ. ಮುದ್ರಣ ನಿಲ್ಲಿಸಿದ ಸರ್ಕಾರ

Pinterest LinkedIn Tumblr

ನವದೆಹಲಿ: ಕೆಲದಿನಗಳಿಂದ 2 ಸಾವಿರ ರೂ. ನೋಟನ್ನು ಕೇಂದ್ರ ಸರ್ಕಾರ ರದ್ದುಗೊಳಿಸಲಿದೆ ಎಂಬ ಸುದ್ದಿಯೊಂದು ಹರಿದಾಡಿತ್ತು. ಇದನ್ನು ಪುಷ್ಠೀಕರಿಸುವಂತೆ 2 ಸಾವಿರ ನೋಟುಗಳ ಮುದ್ರಣವನ್ನು ಸರ್ಕಾರ ನಿಲ್ಲಿಸಿದೆ ಎಂದು ವರದಿಯಾಗಿದೆ.

2016 ರಲ್ಲಿ ಕಪ್ಪುಹಣವನ್ನು ತಡೆಯುವ ಉದ್ದೇಶದೊಂದಿಗೆ ದೇಶದಲ್ಲಿ 500 ರೂ ಮತ್ತು 1,000 ರೂ. ಮುಖಬೆಲೆಯ ನೋಟುಗಳನ್ನು ನೋಟು ಅಮಾನ್ಯೀಕರಣಗೊಳಿಸಲಾಗಿತ್ತು. ಈ ವೇಳೆ ಸಾವಿರ ರೂ.ಗೆ ಬದಲಾಗಿ 2 ಸಾವಿರದ ನೋಟನ್ನು ಚಲಾವಣೆಗೆ ತರಲಾಗಿತ್ತು.

ಆದರೆ ಈ ನೋಟಿನ ಚಲಾವಣೆಯು ಕಡಿಮೆ ಆಗುತ್ತಿರುವುದರಿಂದ ನೋಟಿನ ಮುದ್ರಣವನ್ನು ನಿಲ್ಲಿಸಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿರುವುದಾಗಿ ದಿ ಪ್ರಿಂಟ್​ ವರದಿ ಮಾಡಿದೆ. ಇದರಿಂದ ಕ್ರಮೇಣವಾಗಿ 2 ಸಾವಿರ ರೂ. ನೋಟನ್ನು ಹಿಂತೆಗೆದುಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

ನೋಟು ರದ್ದತಿ ಬಳಿಕ ಮಾರ್ಚ್​, 2018 ರವರೆಗೆ ದೇಶದಲ್ಲಿ ಒಟ್ಟು 18.03 ಲಕ್ಷ ಕೋಟಿ ರೂ. ಕರೆನ್ಸಿ ಚಲಾವಣೆಯಲ್ಲಿದ್ದು, ಇದರಲ್ಲಿ 6.73 ಲಕ್ಷ ಕೋಟಿ ರೂ. ಅಥವಾ ಶೇ.37ರಷ್ಟು 2,000 ರೂ. ನೋಟುಗಳು ಎಂಬುದು ವಿಶೇಷ. ಹಾಗೆಯೇ 7.73 ಲಕ್ಷ ಕೋಟಿ ರೂ. ಮೌಲ್ಯದ 500 ರೂ. ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿದೆ.

ಹೀಗಾಗಿ 2 ಸಾವಿರದ ನೋಟನ್ನು ಏಕಾಏಕಿ ರದ್ದು ಮಾಡಿದರೆ ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಮುದ್ರಣವನ್ನು ನಿಲ್ಲಿಸಿ, ನೋಟಿನ ಚಲಾವಣೆಯನ್ನು ನಿಯಂತ್ರಿಸಲು ಸರ್ಕಾರ ಮುಂದಾಗಿದೆ ಎಂಬ ಮಾತುಗಳು ಕೇಳಿ ಬಂದಿದೆ.

ಚರ್ಚೆ ಹುಟ್ಟುಹಾಕಿದ್ದ ಹೊಸ ನೋಟು:

ದೇಶದಲ್ಲಿ ಮೊದಲ ಬಾರಿಗೆ 2 ಸಾವಿರದ ನೋಟನ್ನು ಪರಿಚಯಿಸಿದಾಗಲೇ ತೀಕ್ಷ್ಣ ವಿಮರ್ಶೆಗಳು ವ್ಯಕ್ತವಾಗಿದ್ದವು. ಪ್ರಧಾನಿ ನರೇಂದ್ರ ಮೋದಿ ಅವರ ತೆಗೆದುಕೊಂಡ ಕ್ರಮವನ್ನು ಹಲವಾರು ಆರ್ಥಿಕ ತಜ್ಞರು ಕಟುವಾಗಿ ಟೀಕಿಸಿದ್ದರು. 1 ಸಾವಿರ ರೂ. ನೋಟಿಗೆ ಬದಲಾಗಿ 2 ಸಾವಿರ ರೂ. ತಂದಿದ್ದು, ತೆರಿಗೆ ವಂಚಕರಿಗೆ ಮತ್ತು ಹಣ ಕ್ರೋಡೀಕರಿಸುವರಿಗೆ ವರದಾನವಾಗಲಿದೆ ಎಂದು ಹಲವು ತಜ್ಞರು ವಾದಿಸಿದ್ದರು.

ಈ ವಾದವನ್ನು ಎತ್ತಿ ಹಿಡಿಯುವಂತೆ ಕಳೆದ ಏಪ್ರಿಲ್ ವೇಳೆ ದೇಶದ ಅನೇಕ ನಗರಗಳಲ್ಲಿ ನಗದು ಕೊರತೆ ಉಂಟಾಗಿತ್ತು. ಇದೇ ವೇಳೆ ಸರ್ಕಾರ ಚುನಾವಣೆಗಾಗಿ ಹಣವನ್ನು ಸಂಗ್ರಹಿಸುತ್ತಿದೆ ಎಂಬ ಆರೋಪ ಕೂಡ ಕೇಳಿ ಬಂದಿದ್ದು, ಹಾಗೆಯೇ ಪಂಚಾಬ್ ನ್ಯಾಷನಲ್​ ಬ್ಯಾಂಕ್- ನೀರವ್​ ಮೋದಿಯ ವಂಚನೆ ಕೂಡ ನಗದು ಕೊರತೆ ಮುಖ್ಯ ಕಾರಣ ಎನ್ನಲಾಗಿತ್ತು. ಅಲ್ಲದೆ ಆದಾಯ ತೆರಿಗೆ ಇಲಾಖೆಯ ದಾಳಿಯಲ್ಲಿ 2 ಸಾವಿರ ನೋಟುಗಳು ಹೆಚ್ಚಾಗಿ ಕಂಡು ಬಂದಿದ್ದರಿಂದ ವಂಚನೆಗೆ ಹೊಸ ನೋಟು ವರವಾಗಿದೆ ಎಂಬ ಮಾತುಗಳು ಕೇಳಿಬಂದಿದ್ದವು.

ಕರೆನ್ಸಿ ಚಲಾವಣೆಗೆ ಹೊಡೆತ:

2018 ರಲ್ಲಿ ಆರ್​ಬಿಐ ವಾರ್ಷಿಕ ವರದಿಯ ಪ್ರಕಾರ 2017-18 ರಲ್ಲಿ 7.8 ಕೋಟಿ ರೂ. 2,000 ಸಾವಿರ ನೋಟುಗಳು ಚಲಾವಣೆಯಲ್ಲಿದೆ ಎಂದು ಹೇಳಲಾಗಿದೆ. ಮಾರ್ಚ್​ 2018ರ ವೇಳೆಗೆ ಒಟ್ಟು 336.3 ಕೋಟಿ 2 ಸಾವಿರ ನೋಟುಗಳನ್ನು ಮುದ್ರಿಸಲಾಗಿದ್ದರೂ, ಅತ್ಯಂತ ಕಡಿಮೆ ಪ್ರಮಾಣದಲ್ಲಿ ನೋಟುಗಳನ್ನು ಚಲಾವಣೆಯಲ್ಲಿದ್ದವು ಎಂದು ತಿಳಿಸಲಾಗಿದೆ.

ಅದೇ ರೀತಿ ಮಾರ್ಚ್​ 2017 ರಲ್ಲಿ ಶೇ.50 ರಷ್ಟು ಚಲಾವಣೆಯಲ್ಲಿದ್ದ 2 ಸಾವಿರದ ನೋಟಿನ ಬಳಕೆಯು ಶೇ.13 ರಷ್ಟು ಇಳಿಕೆಯಾಗಿತ್ತು. ಅಂದರೆ ಒಂದು ವರ್ಷದ ಅಂತರದಲ್ಲಿ ನೋಟಿನ ಬಳಕೆಯು ಶೇ.37.3ರಷ್ಟಾಗಿತ್ತು. ಆದರೆ 500 ರೂ. ಮುಖಬೆಲೆಯ ನೋಟಿನ ಚಲಾವಣೆಯು ಏರಿಕೆಯಾಗಿದ್ದು, 2017-18 ರಲ್ಲಿ ಒಟ್ಟು 958.7 ಕೋಟಿ ಚಲಾವಣೆಯಲ್ಲಿದ್ದವು. ಇದೇ ಪ್ರಮಾಣವನ್ನು ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ 588.2 ಕೋಟಿ ಮಾತ್ರ ಚಲಾವಣೆಯಲ್ಲಿತ್ತು.

Comments are closed.