ರಾಷ್ಟ್ರೀಯ

ಡೀಸೆಲ್-ಪೆಟ್ರೋಲ್ ಹೋಮ್​ ಡೆಲಿವರಿ ಸೇವೆಯ ಪ್ರಸ್ತಾವನೆಗೆ ಅನುಮೋದನೆ!

Pinterest LinkedIn Tumblr


ಕೆಲವು ತಿಂಗಳ ಹಿಂದೆ ಭಾರತದ ಅತಿದೊಡ್ಡ ಪೆಟ್ರೋಲಿಯಂ ಕಂಪೆನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್​ ಪೆಟ್ರೋಲಿಯಂ ತೈಲಗಳ ಹೋಮ್​ ಡೆಲಿವರಿ ಸೇವೆಯ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರದ ಮುಂದಿಟ್ಟಿತ್ತು. ಈ ಪ್ರಸ್ತಾವನೆಗೆ ಅನುಮೋದನೆ ದೊರೆತಿದ್ದು, ಅದರಂತೆ ಈಗ ಪುಣೆ ಮತ್ತು ಚೆನ್ನೈ ನಗರಗಳಲ್ಲಿ ಪೆಟ್ರೋಲ್​ ಡೆಲಿವರಿ ಸೇವೆಯನ್ನು ಪ್ರಾರಂಭಿಸಿದೆ ಎಂದು ವರದಿಯಾಗಿದೆ.

ಈ ಸೇವೆಯನ್ನು ಡಿಸೇಲ್​ ಡೆಲಿವರಿ ಮೂಲಕ ಆರಂಭಿಸಲಾಗಿದ್ದು, ಶೀಘ್ರದಲ್ಲೇ ದೇಶದ ಎಲ್ಲ ನಗರಗಳಿಗೂ ಹೊಸ ಯೋಜನೆ ವಿಸ್ತರಿಸಲಿದೆ ಎನ್ನಲಾಗಿದೆ. ಈ ಇಂಧನ ವಿತರಣಾ ಲಾರಿಯ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಇದರಿಂದ ಹೊಸ ಸೇವೆಯು ಸಾಕಷ್ಟು ಪ್ರಚಾರ ಕೂಡ ಗಿಟ್ಟಿಸಿಕೊಂಡಿದೆ.

ಈ ಡೆಲಿವರಿ ಟ್ಯಾಂಕರ್​ ಲಾರಿಯಲ್ಲಿ ಪಂಪ್​ ಅಳವಡಿಸಲಾಗಿದ್ದು, ಗ್ರಾಹಕರ ಕೋರಿಕೆಯ ಮೇರೆಗೆ ಇಂಧನವನ್ನು ವಿತರಿಸಲಿದೆ ಎನ್ನಲಾಗಿದೆ. ಇದರಿಂದ ಟ್ರಾನ್ಸ್​ಪೋರ್ಟ್​ ಸೇವೆಗಳನ್ನು ನೀಡುವ ಕಂಪೆನಿಗಳಿಗೆ ಹೆಚ್ಚು ಅನುಕೂಲ ಆಗಲಿದೆ. ಅಲ್ಲದೆ ಇದರಿಂದ ಬೇಡಿಕೆಗೆ ಅನುಗುಣವಾಗಿ ಮಾಲೀಕರು ತಮ್ಮ ವಾಹನಗಳಿಗೆ ಡಿಸೇಲ್ ಅಥವಾ ಪೆಟ್ರೋಲ್​ಗಳನ್ನು ತುಂಬಿಸಿಕೊಳ್ಳಬಹುದಾಗಿದೆ.

ಅಷ್ಟೇ ಅಲ್ಲದೆ ದೂರ ಊರಿಗೆ ಕೂಡ ತೈಲ ಸೇವೆಯನ್ನು ಒದಗಿಸಲು ಇದರಿಂದ ನೆರವಾಗಲಿದ್ದು, ತುರ್ತು ಪರಿಸ್ಥಿತಿಯಂತಹ ಸಂದರ್ಭದಲ್ಲಿ ಈ ಸೇವೆಯ ಸದುಪಯೋಗ ಪಡೆದುಕೊಳ್ಳಬಹುದು. ಮೊಬೈಲ್ ಅಪ್ಲಿಕೇಶನ್​ ಮೂಲಕ ಗ್ರಾಹಕರು ತೈಲದ ಡೆಲಿವರಿಗೆ ಮನವಿ ಸಲ್ಲಿಸಲು ವ್ಯವಸ್ಥೆ ಮಾಡಲಾಗಿದೆ. ಆದರೆ ಈ ಡೆಲಿವರಿಗಾಗಿ ಕನಿಷ್ಠ 200 ಲೀಟರ್​ಗಳಷ್ಟು ಬೇಡಿಕೆಯನ್ನು ಸಲ್ಲಿಸಬೇಕಾಗುತ್ತದೆ. ಅಲ್ಲದೆ 2500 ಲೀಟರ್​ವರೆಗೂ ತೈಲ ಡೆಲಿವರಿ ಸಿಗುತ್ತದೆ.

ಸದ್ಯ ಸಕಲ ಸುರಕ್ಷಾ ಮುನ್ನೆಚರಿಕೆಯೊಂದಿಗೆ ಡಿಸೇಲ್​ ಡೆಲಿವರಿಗೆ ಇಂಡಿಯನ್ ಆಯಿಲ್ ಮುಂದಾಗಿದ್ದು, ಪೆಟ್ರೋಲ್​ ವಿತರಣೆಯ ಬಗ್ಗೆ ಮತ್ತಷ್ಟು ಸುರಕ್ಷತೆಯ ಅಗತ್ಯತೆ ಇದೆ ಎಂದು ತಿಳಿಸಲಾಗಿದೆ. ಈ ಡೆಲಿವರಿ ವಾಹನದಲ್ಲಿ ಅಗ್ನಿ ಶಾಮಕ ಕಿಟ್, ಸುರಕ್ಷತಾ ಸಾಧನಗಳನ್ನು ಇರಿಸಲಾಗಿದೆ. ದೇಶದಲ್ಲಿ ಇದೇ ಮೊದಲ ಬಾರಿ ಡೆಲಿವರಿ ಯೋಜನೆಗೆ ಇಂಡಿಯನ್ ಆಯಿಲ್ ಕಾರ್ಪೊರೇಷನ್​ನ ಕೈ ಹಾಕಿದ್ದು, ಯಾವ ರೀತಿಯಾಗಿ ಯಶಸ್ವಿಯಾಗಲಿದೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

Comments are closed.