ರಾಷ್ಟ್ರೀಯ

ಪ್ರಧಾನಿ ಮೋದಿ ಸಂಸತ್ತಿಗೆ ಬಾರದೆ ಬೆಡ್​ರೂಂ​ನಲ್ಲಿ ಅಡಗಿಕೊಳ್ಳುತ್ತಿದ್ದಾರೆ: ರಾಹುಲ್

Pinterest LinkedIn Tumblr


ನವದೆಹಲಿ: ಇಂದು ನಡೆದ ಸಂಸತ್​ ಅಧಿವೇಶನದಲ್ಲಿ ರಫೇಲ್​ ಒಪ್ಪಂದದ ವಿಚಾರ ಮತ್ತೆ ಮೊಳಗಿತು. ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಹಾಗೂ ವಿತ್ತ ಸಚಿವ ಅರುಣ್​ ಜೇಟ್ಲಿ ನಡುವಿನ ವಾಕ್​ ಸಮರಕ್ಕೆ ಸದನ ಸಾಕ್ಷಿಯಾಯಿತು. ಮೋದಿ ಅಧಿವೇಶನಕ್ಕೆ ಬಾರದೆ ತಮ್ಮ ಬೆಡ್​ರೂಂ​ನಲ್ಲಿ ಅಡಗಿಕೊಳ್ಳುತ್ತಿದ್ದಾರೆ ಎಂದು ರಾಹುಲ್ ಕುಹಕವಾಡಿದರು. ಇದಕ್ಕೆ ಪ್ರತ್ಯುತ್ತರ ನೀಡಿದ ಜೇಟ್ಲಿ ಕಾಂಗ್ರೆಸ್​ ಸುಳ್ಳನ್ನೇ ಹೇಳುತ್ತದೆ ಎಂದರು.

“ನಮ್ಮ ಸರ್ಕಾರ 126 ಯುದ್ಧ ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿತ್ತು. ಆದರೆ ಈ ಒಪ್ಪಂದವನ್ನು ರದ್ದು ಮಾಡಿದ್ದೇಕೆ? ವಿಮಾನಗಳ ಸಂಖ್ಯೆಯನ್ನು 36ಕ್ಕೆ ಇಳಿಕೆ ಮಾಡಿದ್ದೇಕೆ? ರಾಷ್ಟ್ರದ ಭದ್ರತೆಯಲ್ಲಿ ಮೋದಿ ಬದಲಾವಣೆ ಮಾಡಿದರೇ? ಈ ಪ್ರಶ್ನೆಗಳಿಗೆ ಬಿಜೆಪಿ ಉತ್ತರಿಸಬೇಕು” ಎಂದು ರಾಹುಲ್​ ಆಗ್ರಹಿಸಿದರು.

ಇನ್ನು ಒಪ್ಪಂದವನ್ನು ಅನಿಲ್​ ಅಂಬಾನಿ ಸಂಸ್ಥೆಗೆ ಕೊಟ್ಟಿರುವ ಬಗ್ಗೆಯೂ ರಾಹುಲ್​ ಪ್ರಶ್ನಿಸಿದರು. “ರಫೇಲ್​ ಒ​ಪ್ಪಂದ ನಡೆಯುವ 10 ದಿನಕ್ಕೂ ಮೊದಲು ಅನಿಲ್​ ಅಂಬಾನಿ ಈ ಸಂಸ್ಥೆ ಆರಂಭಿಸಿದ್ದರು. ಡಸ್ಸಾಲ್ಟ್​​​ ಸಂಸ್ಥೆ ಜೊತೆ ಮಾಡಿಕೊಂಡ ಒಪ್ಪಂದ ರದ್ದು ಮಾಡಿದ ಅದನ್ನು ನಿಮ್ಮ ಆಪ್ತ ಮಿತ್ರನಿಗೆ ನೀಡಿದ್ದೇಕೆ?” ಎಂದು ರಾಹುಲ್​ ಪ್ರಶ್ನಿಸಿದರು.

ಧೈರ್ಯವಿದ್ದರೆ ಮೋದಿ ಸಂಸತ್ತಿಗೆ ಆಗಮಿಸಲಿ ಎಂದು ಪ್ರಧಾನಿಗೆ ರಾಹುಲ್​ ಸವಾಲು ಹಾಕಿದರು. “ಮೋದಿ ಸುದ್ದಿ ವಾಹಿನಿಗಳಲ್ಲಿ ಗಂಟೆಗಟ್ಟಲೆ ಸಂದರ್ಶನ ನೀಡುತ್ತಾರೆ. ಆದರೆ, ಸಂಸತ್ತಿಗೆ ಬರುವುದಿಲ್ಲ. ಬೆಡ್​ರೂಂನಲ್ಲಿ ಅಡಗಿಕೂರುವ ಬದಲು ಧೈರ್ಯವಿದ್ದರೆ ಮೋದಿ ಅಧಿವೇಶನಕ್ಕೆ ಬಂದು ಮಾತನಾಡಲಿ” ಎಂದರು. ಇನ್ನು, ರಫೇಲ್​ ಒಪ್ಪಂದದ ಬಗ್ಗೆ ಕಾಂಗ್ರೆಸ್​ ಬಿಡುಗಡೆ ಮಾಡಿದ ಆಡಿಯೋ ಕ್ಲಿಪ್​ ವಿಚಾರವೂ ಸದನದಲ್ಲಿ ಪ್ರಸ್ತಾಪವಾಯಿತು.

ರಾಹುಲ್​ ಗಾಂಧಿ ಹೇಳಿಕೆಗೆ ಅರುಣ್​ ಜೇಟ್ಲಿ ತಿರುಗೇಟು ನೀಡಿದರು. ರಾಹುಲ್​ ದೇಶದ ಜನತೆಗೆ ನಿರಂತರವಾಗಿ ಸುಳ್ಳು ಹೇಳುತ್ತಿದ್ದಾರೆ ಎಂದರು. “ರಾಹುಲ್​ ಹಾಗೂ ಕಾಂಗ್ರೆಸ್​ ಪಕ್ಷ ದೇಶಕ್ಕೆ ಸುಳ್ಳನ್ನು ಹೇಳುತ್ತಿದೆ. ಅಷ್ಟೇ ಅಲ್ಲ, ಸುಪ್ರೀಂಕೋರ್ಟ್​​ ನೀಡಿದ ಆದೇಶಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಕೆಲವರು ಸತ್ಯವನ್ನು ಇಷ್ಟಪಡುವುದೇ ಇಲ್ಲ” ಎಂದು ರಾಹುಲ್​ ಅವರನ್ನು ಜೇಟ್ಲಿ ಟೀಕಿಸಿದರು.

ಇದೇ ವೇಳೆ ರಾಷ್ಟ್ರದ ಭದ್ರತೆ ಜೊತೆಗೆ ಯುಪಿಎ ಸರ್ಕಾರ ಆಟವಾಡಿದೆ ಎಂದು ಜೇಟ್ಲಿ ಬಲವಾಗಿ ಆರೋಪಿಸಿದರು. ನ್ಯಾಷನಲ್​ ಹೆರಾಲ್ಡ್​ ಹಾಗೂ ಅಗಸ್ತಾ ವೆಸ್ಟ್​ ಲ್ಯಾಂಡ್ ಪ್ರಕರಣಗಳನ್ನು ಉಲ್ಲೇಖಿಸಿ ಮಾತನಾಡಿದ ಜೇಟ್ಲಿ, “ಕೆಲವರಿಗೆ ಹಣದ ಮೌಲ್ಯ ಮಾತ್ರ ಅರ್ಥವಾಗುತ್ತದೆ. ಆದರೆ ದೇಶದ ಭದ್ರತೆ ವಿಚಾರ ಅವರಿಗೆ ತಿಳಿಯುವುದೇ ಇಲ್ಲ. ಯುಪಿಎ ಸರ್ಕಾರ ಈ ಮೊದಲು ದೇಶದ ಭದ್ರತೆ ಜೊತೆಗೆ ಆಟವಾಡಿತ್ತು. ರಫೇಲ್​ ಒಪ್ಪಂದದಲ್ಲಿ ಕಾಂಗ್ರೆಸ್​​ ಇಂದು ಟೇಪ್​ ಬಿಡುಗಡೆ ಮಾಡಿದೆ. ಆದರೆ ಅದರ ಸತ್ಯಾಸತ್ಯತೆಯನ್ನು ಸಾಬೀತು ಮಾಡಲು ರಾಹುಲ್​ ಹಿಂಜರಿಯುತ್ತಿದ್ದಾರೆ. ಯುದ್ಧ ವಿಮಾನದ ಬಗ್ಗೆ ರಾಹುಲ್​ಗೆ ಜ್ಞಾನವಿಲ್ಲ” ಎಂದರು ಟೀಕಿಸಿರುವ ಜೇಟ್ಲಿ, “ಈ ಒಪ್ಪಂದ ನಡೆಯುವುದಕ್ಕೂ ಮೊದಲು 74 ಬಾರಿ ಸಭೆ ಕರೆದಿದ್ದೇವೆ. ಅಗಸ್ಟಾ ವೆಸ್ಟ್​ ಲ್ಯಾಂಡ್​, ಬೋಫೋರ್ಸ್​​ ಹಗರಣಗಳಿಂದ ಕಾಂಗ್ರೆಸ್​ ಕೈ ಕೆಸರಾಗಿದೆ” ಎಂದು ಟೀಕಿಸಿದರು.

Comments are closed.