ರಾಷ್ಟ್ರೀಯ

ರಾಮ ಮಂದಿರ ನಿರ್ಮಾಣದ ಕುರಿತು ಪ್ರಥಮ ಭಾರಿ ಬಾಯಿಬಿಟ್ಟ ಮೋದಿ

Pinterest LinkedIn Tumblr


ನವದೆಹಲಿ: ಒಂದು ಕಡೆ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ವಿಶೇಷ ಕಾನೂನು ತರಬೇಕೆಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್​ಎಸ್​ಎಸ್​) ಹಾಗೂ ಬಿಜೆಪಿಯ ಹಲವು ಸಂಸದರು ಕೇಂದ್ರ ಸರ್ಕಾರದ ಮೇಲೆ ತೀವ್ರ ಒತ್ತಡ ಹೇರುತ್ತಲೇ ಇದ್ದಾರೆ. ಪ್ರಧಾನಿ ನರೇಂದ್ರ ಮೋದಿ ಈ ವಿಷಯವಾಗಿ ಮೊದಲ ಬಾರಿ ಮೌನಮುರಿದಿದ್ದು, ರಾಮಮಂದಿರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್​​ನ ಅಂತಿಮ ತೀರ್ಪು ಪ್ರಕಟವಾಗುವವರೆಗೂ ವಿಶೇಷ ಕಾನೂನು ಅಥವಾ ಸುಗ್ರೀವಾಜ್ಞೆ ತರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಎಎನ್​ಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಮೋದಿ ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಅಯೋಧ್ಯೆಯ ವಿವಾದದ ಪ್ರಕರಣದ ವಿಚಾರಣೆಯನ್ನು ಚುರುಕುಗೊಳಿಸುವಂತೆ ಈ ಮೊದಲು ಡಿಸೆಂಬರ್​ 25ರಂದು ಕೇಂದ್ರ ಕಾನೂನು ಸಚಿವ ರವಿಶಂಕರ್​ ಪ್ರಸಾದ್​ ಸುಪ್ರೀಂಕೋರ್ಟ್​ಗೆ ಮನವಿ ಸಲ್ಲಿಸಿದ್ದರು. ದೇಶದ ಜನರು ಈ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರುವುದರಿಂದ ಆದಷ್ಟು ತ್ವರಿತಗತಿಯಲ್ಲಿ ತೀರ್ಪು ನೀಡಬೇಕಾಗಿ ಮನವಿ ಮಾಡಿದ್ದರು. ಕೇಂದ್ರ ಸರ್ಕಾರದ ಓರ್ವ ಸಚಿವನಾಗಿ ಈ ಮನವಿಯನ್ನು ಸಲ್ಲಿಸುತ್ತಿಲ್ಲ. ಬದಲಾಗಿ, ಈ ದೇಶದ ಓರ್ವ ಸಾಮಾನ್ಯ ಪ್ರಜೆಯಾಗಿ ಮತ್ತು ವಕೀಲನಾಗಿ ಅರ್ಜಿ ಸಲ್ಲಿಸುತ್ತಿದ್ದೇನೆ ಎಂದು ಸುಪ್ರೀಂಕೋರ್ಟ್​ಗೆ ತಿಳಿಸಿದ್ದರು.

ಸದ್ಯಕ್ಕೆ ಅಯೋಧ್ಯೆಯಲ್ಲಿನ ಬಾಬರಿ ಮಸೀದಿ ಮತ್ತು ರಾಮ ಮಂದಿರ ನಿರ್ಮಾಣದ ವಿವಾದದ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್​ ಜನವರಿ 4ಕ್ಕೆ ಕಾಯ್ದಿರಿಸಿದೆ.
2017ರಲ್ಲಿ ಈ ವಿವಾದದ ಬಗ್ಗೆ ಸುಪ್ರೀಂಕೋರ್ಟ್ ವಿಚಾರಣೆಯನ್ನು ಕೈಗೆತ್ತಿಕೊಂಡಾಗ 2019ರ ಲೋಕಸಭಾ ಚುನಾವಣೆ ಮುಗಿಯುವವರೆಗೆ ಪ್ರಕರಣದ ವಿಚಾರಣೆಯನ್ನು ಮುಂದೂಡುವಂತೆ ಕಾಂಗ್ರೆಸ್​ ನಾಯಕ ಹಾಗೂ ಹಿರಿಯ ವಕೀಲ ಕಪಿಲ್ ಸಿಬಲ್ ಸಲಹೆ ನೀಡಿದ್ದರು. ಆದರೆ, ಸರ್ವೋಚ್ಚ ನ್ಯಾಯಾಲಯವು ಈ ಮನವಿಯನ್ನು ಪುರಸ್ಕರಿಸದೆ, ವಿಚಾರಣೆಯನ್ನು ಆರಂಭಿಸಲು ಜನವರಿ 4 ದಿನಾಂಕವನ್ನು ನಿಗದಿಪಡಿಸಿದೆ.

Comments are closed.