ರಾಷ್ಟ್ರೀಯ

ತ್ರಿವಳಿ ತಲಾಕ್​​​: ವಿರೋಧದ ನಡುವೆಯೂ ಮಸೂದೆಗೆ ಅಸ್ತು!

Pinterest LinkedIn Tumblr


ನವದೆಹಲಿ: ಲೋಕಸಭೆಯಲ್ಲಿ ಇಂದು ಗುರುವಾರ ತ್ರಿವಳಿ ತಲಾಕ್‌ ಮಸೂದೆ ಮೇಲೆ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ತ್ರಿವಳಿ ತಲಾಕ್‌ ಮಸೂದೆಯನ್ನು ಸಂಸತ್ತಿನ ಜಂಟಿ ಆಯ್ಕೆ ಸಮಿತಿಗೆ ಒಪ್ಪಿಸಬೇಕೆಂದು ವಿರೋಧ ಪಕ್ಷಗಳು ಆಗ್ರಹಿಸಿದವು. ಇನ್ನೊಂದೆಡೆ ವಿಪಕ್ಷಗಳ ವಿರೋಧದ ನಡುವೆಯೂ ಮಸೂದೆಯನ್ನು ಲೋಕಸಭೆಯಲ್ಲಿ ತ್ರಿವಳಿ ತಲಾಖ್​​ಗೆ ಅಸ್ತು ನೀಡಿದೆ. ಅಲ್ಲದೇ ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್​​ ಮಸೂದೆಗೆ ಅನುಮೋದನೆ ಸಿಗಬೇಕಿದೆ.

ತ್ರಿವಳಿ ತಲಾಖೆ ಮಸೂದೆಯಲ್ಲಿ ಕೆಲವು ಅಂಶಗಳು ಅಸಾಂವಿಧಾನಿಕವಾಗಿವೆ. ಈ ಕರಡು ಕಾನೂನನ್ನು ಇನ್ನಷ್ಟು ಆಳವಾಗಿ ಅವಲೋಕಿಸಬೇಕಾದ ಅಗತ್ಯವಿದೆ. ಹೀಗಾಗಿ ಮುಸ್ಲಿಂ ಮಹಿಳೆಯರ ವೈವಾಹಿಕ ಹಕ್ಕುಗಳ ರಕ್ಷಣೆ ಮಸೂದೆ (ತ್ರಿವಳಿ ತಲಾಕ್‌ ಮಸೂದೆ) ಯನ್ನು ಎರಡೂ ಸದನಗಳ ಜಂಟಿ ಆಯ್ಕೆ ಸಮಿತಿಗೆ ಉಲ್ಲೇಖಿಸಬೇಕು. ಇದರಲ್ಲಿ ಒಳಗೊಂಡಿರುವ ಅಸಾಂವಿಧಾನಿಕ ಅಂಶಗಳನ್ನು ಮತ್ತೊಮ್ಮೆ ಅವಲೋಕಿಸಬೇಕೆಂದು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.

ಕಾಂಗ್ರೆಸ್​​ ಜೊತೆಗೆ ಎಐಎಡಿಎಂಕೆ ನಾಯಕ ಪಿ ವೇಣುಗೋಪಾಲ್‌, ಟಿಎಂಸಿ ಸದಸ್ಯ ಸುದೀಪ್‌ ಬಂದೋಪಾಧ್ಯಾಯ, ಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಸೇರಿದಂತೆ ಎನ್‌ಸಿಪಿಯ ಸುಪ್ರಿಯಾ ಸುಳೆ ಅವರು ಕೂಡ ಇದೇ ಆಗ್ರಹವನ್ನು ಮುಂದಿಟ್ಟಿದ್ದಾರೆ. ಅಲ್ಲದೇ ಇದೇ ರೀತಿಯ ಮಸೂದೆಯನ್ನು ಲೋಕಸಭೆಯಲ್ಲಿ ಈ ಹಿಂದೆ ಚರ್ಚಿಸಲಾಗಿದೆ. ಹೀಗಾಗಿ ಸಂಸದರು ಚರ್ಚಿಸುವ ಸಂದರ್ಭದಲ್ಲಿ ತಮ್ಮ ಪ್ರಶ್ನೆಗಳನ್ನು ಗುರುತಿಸಿ ಇಟ್ಟುಕೊಳ್ಳಬೇಕಾಗುತ್ತದೆ ಎಂದು ಸ್ವೀಕರ್​​ ಸುಮಿತ್ರಾ ಮಹಾಜನ್‌ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಕೇಂದ್ರ ಕಾನೂನು ಸಚಿವ ರವಿಶಂಕರ್​​ ಪ್ರಸಾದ್​ ಅವರು, ತ್ರಿವಳಿ ತಲಾಕ್‌ ನೀಡುವ, ಮಹಿಳೆಯರ ಮೇಲೆ ಅಪರಾಧ ಎಸಗುವ ಮುಸ್ಲಿಮ್‌ ಪುರುಷನನ್ನು ದಂಡಿಸಬೇಕು. ಇದಕ್ಕೆ ಕಾನೂನಿನಲ್ಲಿ ಅವಕಾಶ ನೀಡಬೇಕು. ಹಾಗೆಯೇ ಮುಸ್ಲಿಂ ಸಮುದಾಯದ ಮಹಿಳಾ ಸಬಲೀಕರಣ ಆಗಬೇಕಿದೆ. ಈ ಕಾರಣದಿಂದಾಗಿ ನಾವು ಈ ಮಸೂದೆ ಮಾಡಲು ಹೊರಟಿದ್ದೇವೆ ಹೊರತು; ಯಾವುದೇ ರಾಜಕೀಯ ಉದ್ದೇಶದಿಂದಲ್ಲ ಎಂದು ಹೇಳಿದರು.

ಇದಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್​ ಸಂಸದೆ ಸುಷ್ಮಿತಾ ದೇವ್​​ ಅವರು, ತ್ರಿವಳಿ ತಲಾಖ್​​ನಿಂದ ದೌರ್ಜನ್ಯ ಎಸಗುವ ಮುಸ್ಲಿಂ ಪುರುಷರಿಗೆ ಶಿಕ್ಷೆ ನೀಡಬಹುದು. ಆದರೆ, ಇದರಿಂದಲೇ ಮಹಿಳಾ ಸಬಲೀಕರಣ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು. ಈ ವೇಳೆ ವಿಪಕ್ಷಗಳ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್​ ಸುಮಿತ್ರಾ ಮಹಾಜನ್​​ ಅವರು, ​ಮಸೂದೆಯನ್ನು ಚರ್ಚಿಸದೆ ಇದ್ದಕ್ಕಿದ್ದಂತೆ ಆಯ್ಕೆ ಸಮಿತಿಗೆ ಕಳುಹಿಸಲಾಗದು. ಹಾಗೇ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಮಹಾಜನ್‌ ಸದಸ್ಯರಿಗೆ ತಿಳಿಸಿದರು.

ಏನಿದು ತಲಾಖೆ ಕಾಯ್ದೆ?: ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ತ್ರಿವಳಿ ತಲಾಖ್​ ಪದ್ಧತಿಗೆ ಸಮ್ಮತಿ ಇದೆ. ಮೂರು ಬಾರಿ ತಲಾಖ್ ಹೇಳುವ ಮೂಲಕ ಪತ್ನಿಗೆ ವಿಚ್ಛೇದನ ಕೊಡಬಹುದಾಗಿದೆ. ಇಸ್ಲಾಮ್​ನ ಮೂಲ ಕಾನೂನಿನಲ್ಲಿ ತ್ರಿವಳಿ ತಲಾಖ್​ಗೆ ಬೇರೆಯೇ ವಿಧಿವಿಧಾನಗಳು ಇವೆ. ಆದರೂ ಈಗೀಗ ಈ ಕಾನೂನು ದುರ್ಬಳಕೆಯಾಗಿ ಇನ್ಸ್​ಟಂಟ್ ತಲಾಖ್ ಆಗಿಬಿಟ್ಟಿದೆ. ನಿಂತಲ್ಲೇ ಮೂರು ಬಾರಿ ತಲಾಖ್ ಎಂದು ಹೇಳುವುದು; ಮೊಬೈಲ್ ಫೋನಲ್ಲೇ ಮೂರು ಬಾರಿ ತಲಾಖ್ ಎಂದು ಹೇಳುವುದು; ವಾಟ್ಸಾಪ್ ಅಥವಾ ಮೆಸೇಜ್ ಮೂಲಕ ಮೂರು ಬಾರಿ ತಲಾಖ್ ಎಂದು ಹೇಳುವುದು; ಪತ್ರವೊಂದರಲ್ಲಿ ಮೂರು ಬಾರಿ ತಲಾಖ್ ಎಂದು ಬರೆಯುವುದು ಇತ್ಯಾದಿ ಅಕ್ರಮ ತಲಾಖ್ ಪದ್ಧತಿಗಳು ಚಾಲ್ತಿಯಲ್ಲಿವೆ. ಮುಸ್ಲಿಮ್ ಮಹಿಳೆಯರು ತಲಾಖ್​ಗೆ ತುತ್ತಾಗಿ ನಿಕೃಷ್ಟಕ್ಕೊಳಗಾಗುತ್ತಿದ್ದಾರೆನ್ನಲಾಗಿದೆ.

ಕೇಂದ್ರ ಸರಕಾರ ಇದೇ ಕಾರಣ ಕೊಟ್ಟು ತ್ರಿವಳಿ ತಲಾಖ್ ಪದ್ಧತಿಯನ್ನು ರದ್ದುಗೊಳಿಸಲು ತೀರ್ಮಾನಿಸಿ ಹೊಸ ಕಾಯ್ದೆ ಜಾರಿಗೆ ತರಲು ಮಸೂದೆ ಹೊರಡಿಸಿತು. ಈ ಮಸೂದೆಯು ಲೋಕಸಭೆಯಲ್ಲಿ ಅನುಮೋದನೆ ಪಡೆದರೂ ರಾಜ್ಯಸಭೆಯಲ್ಲಿ ವಿಫಲವಾಯಿತು. ಕಾಂಗ್ರೆಸ್ ಸೇರಿದಂತೆ ಹಲವು ವಿಪಕ್ಷಗಳು ಈ ಮಸೂದೆಯನ್ನು ವಿರೋಧಿಸಿವೆ.

ಮುಸ್ಲಿಮ್ ಮಹಿಳೆಯರ ವೈವಾಹಿಕ ಹಕ್ಕು ರಕ್ಷಣೆ ಕಾಯ್ದೆ ಬಗ್ಗೆ ಮುಸ್ಲಿಮರು ಭಯಪಡುವ ಅಗತ್ಯವಿಲ್ಲ. ಕಾಯ್ದೆಯಡಿ ಸಂತ್ರಸ್ತ ಪತ್ನಿ ಅಥವಾ ಆಕೆಯ ಸಮೀಪದ ರಕ್ತ ಸಂಬಂಧಿಯೊಬ್ಬರು ಎಫ್​ಐಆರ್ ದಾಖಲಿಸಿದರೆ ಮಾತ್ರ ಆರೋಪಿಯನ್ನು ಬಂಧಿಸುವ ಅವಕಾಶವಿರುತ್ತದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳುತ್ತಾರೆ.

Comments are closed.