ರಾಷ್ಟ್ರೀಯ

ಪಂಚ ರಾಜ್ಯಗಳ ಚುನಾವಣಾ ಸೋಲು: ಮೋದಿಯಿಂದ ರೈತರಿಗೆ ‘ಅಚ್ಛೇ ದಿನ್’ ಗಿಫ್ಟ್?

Pinterest LinkedIn Tumblr


ನವದೆಹಲಿ: ಐದು ರಾಜ್ಯಗಳ ಚುನಾವಣೆಯಲ್ಲಿ ಶಾಕಿಂಗ್ ಸೋಲು ಕಂಡ ಕೇಂದ್ರ ಸರಕಾರ ಈಗ ಹೊಸ ವರಸೆಗೆ ಕೈಹಾಕುವ ಚಿಂತನೆ ನಡೆಸಿದೆ. ಕೆಲ ಮಾಧ್ಯಮಗಳಲ್ಲಿ ಬಂದಿರುವ ಸುದ್ದಿಯ ಪ್ರಕಾರ, ನರೇಂದ್ರ ಮೋದಿ ಅವರು ರೈತರ ಸಾಲ ಮನ್ನಾ ಮಾಡುವು ಚಿಂತನೆಯಲ್ಲಿದ್ದಾರೆ. ರೈತರು ಈ ದೇಶ ಬೆನ್ನೆಲುಬಾಗಿರುವಂತೆ, ಸರಕಾರ ನಿಲ್ಲಿಸಲು ರೈತರ ಬೆಂಬಲ ಬೇಕೇ ಬೇಕಿದೆ. ರೈತರ ಸಾಲ ಮನ್ನಾ ಮಾಡುವುದರಿಂದ ರೈತರ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ವಾದ ಮಂಡಿಸುತ್ತಾ ಬಂದಿದ್ದ ಕೇಂದ್ರಕ್ಕೆ ಈಗ ವಾಸ್ತವ ಸ್ಥಿತಿಯ ಅರಿವಾಗಿದೆ. ರೈತರೇ ಬಹುಭಾಗವಿರುವ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್​ಗಡದಲ್ಲಿ ಬಿಜೆಪಿಗೆ ಆಗಿರುವ ಆಘಾತಕ್ಕೆ ರೈತರ ಮುನಿಸೇ ಕಾರಣ ಎಂಬ ಸತ್ಯ ಕೇಂದ್ರಕ್ಕೆ ಮನವರಿಕೆಯಾಗಿದೆ. ಹೀಗಾಗಿ, ರೈತರ ಸಾಲ ಮನ್ನಾ ಮಾಡಿ ರೈತರ ಮನ ಒಲಿಸಿಕೊಳ್ಳಲು ನರೇಂದ್ರ ಮೋದಿ ಬಯಸಿದ್ದಾರೆನ್ನಲಾಗಿದೆ.

ಚುನಾವಣೆಗೆ ಕೆಲವೇ ತಿಂಗಳು ಇರುವ ಹಿನ್ನೆಲೆಯಲ್ಲಿ ರೈತರಿಗೆ ಉಡುಗೊರೆ ನೀಡಲು ಕೇಂದ್ರ ಸರಕಾರಕ್ಕೆ ಬೇರೆ ದಾರಿ ಇಲ್ಲ. ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಸೇರಿದಂತೆ ಬೇರೆ ಜನಪ್ರಿಯ ಯೋಜನೆಗಳ ಜಾರಿಗೆ ಈ ಅಲ್ಪ ಸಮಯ ಸಾಕಾಗುವುದಿಲ್ಲ. ಸಾಲ ಮನ್ನಾ ಮಾತ್ರ ಕೇಂದ್ರದ ಮುಂದಿರುವ ಏಕೈಕ ದಾರಿ ಎನ್ನಲಾಗುತ್ತಿದೆ. ಮೋದಿ ಟೀಮ್​ನಲ್ಲಿ ಈ ಬಗ್ಗೆ ಈಗಾಗಲೇ ಗಹನವಾದ ಚರ್ಚೆ ನಡೆಯುತ್ತಿದ್ದು, ರೈತರ ಸುಮಾರು 4 ಲಕ್ಷ ಕೋಟಿ ಹಣವನ್ನು ಮನ್ನಾ ಮಾಡುವುದಾಗಿ ಘೋಷಿಸಲು ನಿರ್ಧರಿಸಲಾಗಿದೆಯಂತೆ.

ಕೇಂದ್ರದ ಈ ಅಚ್ಚರಿಯ ನಿರ್ಧಾರಕ್ಕೆ ಹಿಂದಿನ ಯುಪಿಎ ಸರಕಾರವೂ ಕಾರಣವಾಗಿರಬಹುದು. ಏಕೆಂದರೆ, 2008ರಲ್ಲಿ ಯುಪಿಎ ಸರಕಾರ ಕೂಡ ತನ್ನ ಮೊದಲ ಅಧಿಕಾರಾವಧಿಯ ಅಂತ್ಯದಲ್ಲಿ 72 ಸಾವಿರ ಕೋಟಿ ರೂ ರೈತ ಸಾಲ ಮನ್ನಾ ಮಾಡಿತ್ತು. ಮರು ವರ್ಷ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಯುಪಿಎ ಸರಕಾರ ಭರ್ಜರಿ ಗೆಲುವಿನೊಂದಿಗೆ ಅಧಿಕಾರ ಉಳಿಸಿಕೊಂಡಿತ್ತು. ರೈತರು ಕಾಂಗ್ರೆಸ್ ಕೈ ಹಿಡಿದಿದ್ದರು. ಇದೇ ಲೆಕ್ಕಾಚಾರದಲ್ಲಿ ಈಗ ಎನ್​ಡಿಎ ಕೂಡ ಇದೆ. ಹಾಗೆಯೇ, ಈಗಷ್ಟೇ ನಡೆದ ಐದು ರಾಜ್ಯಗಳ ಚುನಾವಣೆಯ ವೇಳೆ ರಾಹುಲ್ ಗಾಂಧಿ ಅವರು ಸಾಲ ಮನ್ನಾ ಸೇರಿದಂತೆ ರೈತರ ಹಲವು ಪ್ರಮುಖ ಸಮಸ್ಯೆಗಳ ಬಗ್ಗೆ ಮಾತನಾಡಿದ್ದರು. ಅದು ಕಾಂಗ್ರೆಸ್​ಗೆ ವರ್ಕೌಟ್ ಆಗಿರುವುದು ಮೇಲ್ನೋಟಕ್ಕೆ ತೋರುತ್ತಿದೆ. ಹಾಗೆಯೇ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಬಿಜೆಪಿ ಹಲವು ಕ್ಷೇತ್ರಗಳಲ್ಲಿ ಬೆರಳೆಣಿಕೆಯ ಮತಗಳಿಂದ ಸೋಲನುಭವಿಸಿತ್ತು. ಈ ರಾಜ್ಯಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಮತಗಳಲ್ಲಿ ಶೇ. 1-2ರಷ್ಟು ಮಾತ್ರ ವ್ಯತ್ಯಾಸವಿದೆ. ಹೀಗಾಗಿ, ಸಾಲ ಮನ್ನಾ ಮಾಡುವ ಮೂಲಕ ರೈತರ ಬೆಂಬಲ ಗಳಿಸುವುದು ಬಿಜೆಪಿಗೆ ಬಹಳ ಮುಖ್ಯವಾದುದು ಎಂಬ ಮಾತಿದೆ.

ಕೋಡಿಹಳ್ಳಿ ಚಂದ್ರಶೇಖರ್ ಸ್ವಾಗತ:

ಕೇಂದ್ರದಿಂದ ರೈತರ ಸಾಲ ಮನ್ನಾ ಮಾಡುವ ನಿರ್ಧಾರ ಬಂದರೆ ಅದನ್ನು ಸ್ವಾಗತಿಸುವುದಾಗಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು. ಕೋಡಿಹಳ್ಳಿ ಚಂದ್ರಶೇಖರ್, ಅಂಥದ್ದೊಂದು ಸುದ್ದಿ ನಿಜವೇ ಆಗಿದ್ದರೆ ಕೇಂದ್ರಕ್ಕೆ ಕೆಟ್ಟ ಮೇಲಾದರೂ ಬುದ್ಧಿ ಬಂದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ನಾಲ್ಕು ವರ್ಷಗಳಲ್ಲಿ ಈ ದೇಶದಲ್ಲಿ ರೈತರು ಇದ್ದಾರೆ ಎಂಬುದು ಕೇಂದ್ರಕ್ಕೆ ಅನಿಸಿಯೇ ಇರಲಿಲ್ಲ. ರೈತರು ವಿಷ ಕುಡಿದು ಸಾಯುವಾಗ ಕೇಂದ್ರ ಕಳವಳ ಪಡಲಿಲ್ಲ. ಮಧ್ಯಪ್ರದೇಶದಲ್ಲಿ 6 ರೈತರನ್ನು ಗೋಲಿಬಾರ್​ನಿಂದ ಕೊಂದು ಹಾಕಿದ ಬಗ್ಗೆ ಕೇಂದ್ರ ಒಂದೇ ಶಬ್ದ ಬಾಯಿಬಿಟ್ಟಿಲ್ಲ. ಪ್ರಧಾನಿ ಅವರ ಮನ್ ಕೀ ಬಾತ್ ಕಾರ್ಯಕ್ರಮದಲ್ಲೆಲ್ಲೂ ರೈತರ ಬಗ್ಗೆ ಮಾತನಾಡಿದ್ದನ್ನು ಕೇಳಲಿಲ್ಲ. ‘ನಮ್ಮ ಬಗ್ಗೆ ಯೋಚಿಸದವರಿಗೆ ವೋಟ್ ಕೊಡೋದಿಲ್ಲ’ ಎಂದು ನಾವು ರೈತ ಸಮಾವೇಶದಲ್ಲಿ ತೀರ್ಮಾನಿಸಿದ ಮೇಲೆ ಕೇಂದ್ರ ಎಚ್ಚೆತ್ತುಕೊಂಡಿದೆ. ರೈತರು ಎಷ್ಟು ಮುಖ್ಯ ಎಂಬುದು ಕೇಂದ್ರಕ್ಕೆ ಗೊತ್ತಾಗಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

Comments are closed.