ರಾಷ್ಟ್ರೀಯ

ಕೋಟ್ಯಾಂತರ ರೂಪಾಯಿ ಸಾಲ ಮಾಡಿ ದೇಶ ಬಿಟ್ಟು ಪರಾರಿಯಾಗಿರುವ ವಿಜಯ್ ಮಲ್ಯ ಕಳೆದುಕೊಂಡ ಅಮೂಲ್ಯ ವಸ್ತುಗಳೇನು ಗೊತ್ತೇ…?

Pinterest LinkedIn Tumblr

ಮುಂಬಯಿ: 9 ಸಾವಿರ ಕೋಟಿ ರೂ. ಸಾಲ ಮಾಡಿ ದೇಶ ಬಿಟ್ಟು ಪರಾರಿಯಾಗಿರುವ ವಿಜಯ್ ಮಲ್ಯ ಇತ್ತೀಚೆಗೆ ಹಲವು ಕಾರಣಗಳಿಂದ ಸುದ್ದಿಯಾಗುತ್ತಿದ್ದಾರೆ. ಇತ್ತೀಚೆಗಷ್ಟೇ ಮಲ್ಯನನ್ನು ಭಾರತಕ್ಕೆ ಗಡೀಪಾರು ಮಾಡಲು ಯುಕೆಯ ವೆಸ್ಟ್‌ಮಿನ್‌ಸ್ಟರ್ ನ್ಯಾಯಾಲಯ ಒಪ್ಪಿಗೆ ನೀಡಿತ್ತು. ತೀರ್ಪನ್ನು ಓದುವ ವೇಳೆ, ಅಲ್ಲಿನ ನ್ಯಾಯಾಧೀಶರೊಬ್ಬರು ಮಲ್ಯನನ್ನು ”ಆಡಂಬರ ಪ್ರಿಯ, ಆಭರಣ ಭೂಷಿತ ಪ್ಲೇಬಾಯ್” ಎಂದು ಕರೆದಿದ್ದರು. ಆದರೆ, ಮದ್ಯದ ದೊರೆಯಾಗಿದ್ದ ವಿಜಯ್‌ ಮಲ್ಯ, ಸದ್ಯ ತನ್ನ ಕೋಟ್ಯಂತರ ರೂ. ಮೌಲ್ಯದ ಆಭರಣವನ್ನಾಗಲೀ ಅಥವಾ ಫೆರಾರಿ, ಪೊರ್ಷ್ , ಮೇಬ್ಯಾಚ್ ಮುಂತಾದ ಐಷಾರಾಮಿ ವಾಹನದಲ್ಲಿ ಸುತ್ತಾಡುವುದಿಲ್ಲ.

ಈ ಬಗ್ಗೆ ವಿಜಯ್ ಮಲ್ಯ ಪರ ವಕೀಲ ಅಮಿತ್ ದೇಸಾಯಿ, ವಿಶೇಷ ಟ್ರಯಲ್ ಕೋರ್ಟ್ ನ್ಯಾಯಾಧೀಶ ಎಂಎಸ್‌ ಅಜ್ಮಿಗೆ ಮಾಹಿತಿ ನೀಡಿದ್ದಾರೆ. ವಿವಾದಾತ್ಮಕ ಉದ್ಯಮಿಯ ಪ್ರತಿಯೊಂದು ಸ್ವತ್ತು ಸಹ ಸದ್ಯ ನ್ಯಾಯಾಲಯದ ಕಸ್ಟಡಿಯಲ್ಲಿದೆ ಅಥವಾ ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಲಂಡನ್‌ ಕೋರ್ಟ್‌ನ ದಂಡಾಧಿಕಾರಿಗೆ ವಿಜಯ್ ಮಲ್ಯ ಅವರ ವಾಚ್, ಆಭರಣ ಹಾಗೂ ಕಾರುಗಳನ್ನು ಹಸ್ತಾಂತರಿಸಿದ್ದಾರೆ. ಸದ್ಯ, ಅವರ ಬಳಿ ಯಾವ ಸ್ವತ್ತುಗಳು ಇಲ್ಲ ಎಂದು ಅಮಿತ್ ದೇಸಾಯಿ ತಿಳಿಸಿದ್ದಾರೆ.

ಈ ಹಿಂದೆ ವಿಜಯ್‌ ಮಲ್ಯ 10 ಲಕ್ಷ ರೂ. ಮೌಲ್ಯದ ಎರಡು ಚಿನ್ನದ ನೆಕ್ಲೇಸ್‌ಗಳನ್ನು, ವಜ್ರದ ಕಿವಿಯೋಲೆಗಳು, ವಜ್ರದ ಬ್ರೇಸ್ಲೆಟ್ ಅಥವಾ ಅವರ 70 ಲಕ್ಷ ರೂ. ಮೌಲ್ಯದ ವಾಚ್ ಸೇರಿ 9 ಐಷಾರಾಮಿ ವಾಚುಗಳನ್ನು ಧರಿಸುತ್ತಿದ್ದರು. ಆದರೆ, ಯುಕೆ ಕೋರ್ಟ್‌ಗೆ 9 ವಾಹನಗಳು, 3 ಯಾಚ್‌ಗಳು ( ವಿಹಾರ ನೌಕೆ ), 7 ಆಭರಣ, 9 ವಾಚುಗಳು, ಎರಡು ರತ್ನದ ಕಲ್ಲುಗಳು, 12 ಖಡ್ಗ, 2 ಗುರಾಣಿಗಳನ್ನು ಒಳಗೊಂಡ ರಕ್ಷಾಕವಚದ ಪುರಾತನ ಸೂಟ್ ಅನ್ನು ವಿಜಯ್ ಮಲ್ಯ ಹಸ್ತಾಂತರ ಮಾಡಿರುವ ಬಗ್ಗೆ ದಾಖಲೆಗಳು ದೊರೆತಿವೆ. ಸಾಲ ಮರುಪಾವತಿ ಮಾಡುವಂತೆ ಬ್ಯಾಂಕ್‌ಗಳ ಒಕ್ಕೂಟ ಮಾಡಿದ ಮನವಿಯ ಬಳಿಕ ಅಲ್ಲಿನ ನಿಯಮಗಳಂತೆ ಈ ರೀತಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

ವಿಜಯ್ ಮಲ್ಯರ ವೈಯಕ್ತಿಕ ಸುಮಾರು 70 ಸ್ವತ್ತುಗಳನ್ನು ಹಸ್ತಾಂತರ ಮಾಡಲಾಗಿದೆ ಎನ್ನಲಾಗಿದೆ. ಈ ಪೈಕಿ, ಭಾರತದಲ್ಲೂ ಮಲ್ಯಗೆ ಸೇರಿದ ಕೆಲ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೆ, 95 ಲಕ್ಷ ರೂ. ಮೌಲ್ಯದ ರೋಲ್ಸ್ ರಾಯ್ಸ್ ಫ್ಯಾಂಟಮ್, ಜಾನ್ ಕೂಪರ್, ರೇಂಜ್ ರೋವರ್, ಬೆಂಟ್ಲೇ ಟರ್ಬೋ ಆರ್, 4.3 ಕೋಟಿ ರೂ. ಮೌಲ್ಯದ ಒಂದು ಫೆರಾರಿ ಕಾರು ಸೇರಿ ಮೂರು ಫೆರಾರಿ ಕಾರುಗಳನ್ನು ಸದ್ಯ ಮದ್ಯದ ದೊರೆ ಕಳೆದುಕೊಂಡಿದ್ದಾರೆ. ಒಟ್ಟಾರೆ 16 ಕೋಟಿ ರೂ. ಮೌಲ್ಯದ ವಾಹನಗಳನ್ನು ಕಳೆದುಕೊಂಡಿದ್ದಾರೆ.

ಇಷ್ಟೇ ಅಲ್ಲದೆ, ಸುಮಾರು 30 ಕೋಟಿ ರೂ. ಮೌಲ್ಯದ ಝಿಪ್ಪೋ, ಕಿಂಗ್‌ಸ್ಟಾರ್, ಸೆಟಾ ಎಲಾ – ಹೀಗೆ 3 ವಿಹಾರ ನೌಕೆಗಳನ್ನು ನೀಡಿದ್ದಾರೆ. ಜತೆಗೆ, 3 ಕೋಟಿ ರೂ. ಗೂ ಅಧಿಕ ಮೌಲ್ಯದ ವಜ್ರದ ಕಿವಿಯೋಲೆಗಳು, ನೀಲಿ ಬಣ್ಣದ ನೀಲಮಣಿ ಹರಳು ಉಂಗುರ, ವಜ್ರದ ಬ್ರೇಸ್‌ಲೆಟ್, 2.7 ಕೋಟಿ ರೂ. ಮೌಲ್ಯದ ವಜ್ರದುಂಗುರ, ಹಸಿರು ಪಚ್ಚೆಕಲ್ಲು ಸೇರಿ ಎಲ್ಲವನ್ನು ಯುನೈಟೆಡ್‌ ಕಿಂಗ್‌ಡಮ್‌ ನ್ಯಾಯಾಲಯದ ವಶಕ್ಕೆ ನೀಡಲಾಗಿದೆ. ಅಲ್ಲದೆ, ಮಲ್ಯ ಬಳಿ 2.6 ಕೋಟಿ ರೂ. ಮೌಲ್ಯದ ವಾಚುಗಳು, 9 ಕೋಟಿ ಮೌಲ್ಯದ ಎರಡು ಅಮೆಥಿಸ್ಟ್ ಕಲ್ಲುಗಳು, ಬ್ಯಾಂಕ್‌ ಖಾತೆಗಳು, ಫಿಕ್ಸೆಡ್ ಡೆಪಾಸಿಟ್‌ ಹಾಗೂ ಷೇರುಗಳು ಸೇರಿ ಪಾರ ಪ್ರಮಾಣದ ಸ್ವತ್ತುಗಳನ್ನು ಮದ್ಯದ ದೊರೆ ವಿಜಯ್ ಮಲ್ಯ ಹೊಂದಿದ್ದರು.

Comments are closed.