ರಾಷ್ಟ್ರೀಯ

ನಾನು ಪ್ರಧಾನಿ ಮೋದಿಯಿಂದ ಬಹಳಷ್ಟು ಕಲಿತಿದ್ದೇನೆ: ರಾಹುಲ್ ಗಾಂಧಿ

Pinterest LinkedIn Tumblr

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಂದ ನಾನು ಸಾಕಷ್ಟು ಪಾಠ ಕಲಿತಿದ್ದೇನೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.

ಪಂಚ ರಾಜ್ಯ ಚುನಾವಣೆಗಳಲ್ಲಿ ಕಾಂಗ್ರೆಸ್ ಜಯಭೇರಿ ಹಿನ್ನಲೆಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, 2014ರ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಸೋತಿತ್ತು ಅದರಿಂದ ನಾನು ಸಾಕಷ್ಟು ವಿಚಾರಗಳನ್ನು ಕಲಿತಿದ್ದೇನೆ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ದೇಶದ ಜನತೆ ನಾಡಿ ಮಿಡಿತವನ್ನು ಅರಿತೆ. ಏನು ಮಾಡಬಾರದು, ಏನನ್ನು ಮಾಡಬೇಕು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಅವರಿಂದ ಕಲಿತೆ. ಭಾರತೀಯರ ಭಾವನೆಗಳು ಅವರಿಗೆ ಅರ್ಥವಾಗುವುದೇ ಇಲ್ಲ ಎಂದು ಕಿಡಿಕಾರಿದ್ದಾರೆ.

ಎಲ್ಲಾ ವರ್ಗದವರು ಕಾಂಗ್ರೆಸ್ ಬೆಂಬಲಿಸಿದ್ದಾರೆ. ನಮ್ಮ ಪಕ್ಷ ಎಲ್ಲಾ ವರ್ಗದವರ ಜೊತೆಗೂ ಇರಲಿದೆ. ಇದು ರೈತರ, ಯುವಕರ ಗೆಲುವು. ಉದ್ಯೋಗ ನೀಡುವ ಭರವಸೆಯನ್ನು ಮೋದಿ ಸುಳ್ಳು ಮಾಡಿದ್ದಾರೆ. ರೈತರ ವಿಷಯದಲ್ಲೂ ಮೋದಿ ಭರವಸೆ ಈಡೇರಿಸಿಲ್ಲ. ನಾವು ಈ ವಿಷಯಗಳನ್ನು ಜನರ ಮುಂದಿಡುತ್ತೇವೆ. ದೇಶದ ಪ್ರಮುಖ ಸಮಸ್ಯೆಗಳನ್ನು ಇಟ್ಟುಕೊಂಡು ಲೋಕಸಭಾ ಚುನಾವಣೆಗೆ ಹೋಗುತ್ತೇವೆ. ಉದ್ಯೋಗ, ರೈತರು ಮತ್ತು ಭ್ರಷ್ಟಾಚಾರದ ವಿಚಾರದ ಮೇಲೆ ಮೋದಿ ಅಧಿಕಾರಕ್ಕೆ ಬಂದರೂ, ಅದನ್ನು ಈಡೇರಿಸಲು ಅವರಿಂದ ಸಾಧ್ಯವಾಗುತ್ತಿಲ್ಲ. ಮೋದಿ ಖುದ್ದು ಭ್ರಷ್ಟ. ರಫೇಲ್ ಹಗರಣದಲ್ಲಿ ಮೋದಿ ಭ್ರಷ್ಟಾಚಾರ ಮಾಡಿದ್ದಾರೆ. ಭ್ರಷ್ಟಾಚಾರದಿಂದಲೇ ಉತ್ತರಪ್ರದೇಶ, ಗುಜರಾತ್ ಗೆದ್ದಿದಾರೆ. ನಮ್ಮ ಸರ್ಕಾರ ರಚನೆಯಾದ ತಕ್ಷಣದಿಂದಲೇ ರೈತರ ಸಾಲಮನ್ನಾ ಪ್ರಕ್ರಿಯೆ ಶುರುವಾಗಲಿದೆ ಎಂದು ಹೇಳಿದರು.

ಇದೇ ವೇಳೆ ಕಾಂಗ್ರೆಸ್ ಮುಕ್ತ ಭಾರತದ ಕುರಿತು ಬಿಜೆಪಿಯನ್ನು ಕುಟುಕಿರುವ ರಾಹುಲ್, ‘ನಾವು ಬಿಜೆಪಿಯ ಸಿದ್ಧಾಂತದ ವಿರುದ್ಧ ಹೋರಾಡುತ್ತೇವೆ. ಆದರೆ ಬಿಜೆಪಿ ಮುಕ್ತ ಭಾರತದ ಬಗ್ಗೆ ಮಾತನಾಡುವುದಿಲ್ಲ. ನಮಗೆ ಬಿಜೆಪಿ ಮುಕ್ತ ಭಾರತ ಆಗಬೇಕಾಗಿಲ್ಲ. ಲೋಕಸಭಾ ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ ಎಂದು ಭವಿಷ್ಯ ನುಡಿದರು.

ಗೆಲುವಿನ ಹೊರತಾಗಿಯೂ ಇವಿಎಂ ವ್ಯವಸ್ಥೆಗೆ ರಾಹುಲ್ ವಿರೋಧ
ಇದೇ ವೇಳೆ ಚುನಾವಣೆಗಳಲ್ಲಿ ಇವಿಎಂ ವ್ಯವಸ್ಥೆಗೆ ವಿರೋಧ ಮುಂದುವರೆಸಿರುವ ರಾಹುಲ್ ಗಾಂಧಿ, ಇವಿಎಂ ಸಮಸ್ಯೆ ಭಾರತದಲ್ಲಿ ಮಾತ್ರ ಇಲ್ಲ. ಬೇರೆ ದೇಶಗಳೂ ಅದನ್ನು ಎದರಿಸುತ್ತಿವೆ. ಈ ಸಮಸ್ಯೆ ವಿರುದ್ಧ ಹೋರಾಡಬೇಕಿದೆ. ಮ್ಯಾನ್ಯುಯಲ್ ಓಟಿಂಗ್ ಬಂದರೆ ಅದರಲ್ಲಿ ವ್ಯತ್ಯಾಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Comments are closed.