ರಾಷ್ಟ್ರೀಯ

ಬಿಜೆಪಿ ವಿರುದ್ಧ ಘಟಾನುಘಟಿ ನಾಯಕರು; ದೆಹಲಿಯಲ್ಲಿ ಮಹಾಮೈತ್ರಿ ಮೊದಲ ಸಭೆ

Pinterest LinkedIn Tumblr


ನವದೆಹಲಿ: ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಭಾರಿ ಬಹುಮತದೊಂದಿಗೆ ಬಿಜೆಪಿ ಜಯಭೇರಿ ಬಾರಿಸಿತ್ತು. ಹಾಗಾಗಿ ಈ ಬಾರಿ ವಿಪಕ್ಷಗಳು ಎಚ್ಚೆತ್ತುಕೊಂಡಿವೆ. ಸ್ಥಳೀಯ ಪಕ್ಷಗಳ ಸಹಾಯದಿಂದ ಮಹಾಮೈತ್ರಿ ಕೂಟ ರಚಿಸುವ ಮೂಲಕ ಬಿಜೆಪಿಯನ್ನು ಸೋಲಿಸಲು ತಂತ್ರ ರೂಪಿಸಲಾಗುತ್ತಿದೆ. ಇದರ ಭಾಗವಾಗಿ ಇಂದು ದೆಹಲಿಯಲ್ಲಿ ಎಲ್ಲ ವಿಪಕ್ಷ ನಾಯಕರು ಇದೇ ಮೊದಲ ಬಾರಿಗೆ ಭೇಟಿ ಮಾಡುತ್ತಿದ್ದಾರೆ.

ಜೆಡಿಎಸ್​ ಹಿರಿಯ ನಾಯಕ ಹೆಚ್​.ಡಿ.ದೇವೇಗೌಡ, ತೃಣಮೂಲ ಕಾಂಗ್ರೆಸ್​​ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್, ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್, ಶರದ್ ಯಾದವ್ ಅವರು ಭೇಟಿ ನಡೆಸಿ ಮಾತುಕತೆ ನಡೆಸಲಿದ್ದಾರೆ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಸಭೆಯ ನೇತೃತ್ವ ವಹಿಸಿಕೊಳ್ಳಲಿದ್ದಾರೆ. ಐದು ರಾಜ್ಯಗಳ ಚುನಾವಣಾ ಫಲಿತಾಂಶ ಬರುವುದಕ್ಕೂ ಮೊದಲೇ ವಿಪಕ್ಷ ನಾಯಕರು ಭೇಟಿ ಆಗುತ್ತಿರುವುದು ವಿಶೇಷ.

2019ರ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ಯಾವ ರೀತಿ ತಂತ್ರ ರೂಪಿಸಬೇಕು, ನಾಳೆಯಿಂದ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಲು ಏನೆಲ್ಲ ಮಾಡಬೇಕು ಎನ್ನುವ ಬಗ್ಗೆ ಚರ್ಚೆ ನಡೆಯಲಿದೆ. ಇನ್ನು ವಿಪಕ್ಷ ನಾಯಕರ ಮೇಲೆ ನಡೆದ ಐಟಿ ಹಾಗೂ ಇಡಿ ದಾಳಿಗಳ ಬಗ್ಗೆ ಮಾತುಕತೆ ನಡೆಯಲಿದೆಯಂತೆ.

ಈ ಮೊದಲು ಮಹಾಮೈತ್ರಿಕೂಟಕ್ಕೆ ಅರವಿಂದ್​​ ಕೇಜ್ರಿವಾಲ್​ ಬೆಂಬಲ ಸೂಚಿಸಿ, ನಂತರ ಬೆಂಬಲ ಹಿಂಪಡೆದಿದ್ದರು. ಅಚ್ಚರಿ ಎಂದರೆ, ಇಂದು ನಡೆಯುವ ಮಹಾಮೈತ್ರಿ ಸಭೆಯಲ್ಲಿ ಕೇಜ್ರಿವಾಲ್​ ಕೂಡ ಪಾಲ್ಗೊಳ್ಳುವ ಸಾಧ್ಯತೆ ಇದೆಯಂತೆ. ಹೆಚ್​.ಡಿ. ಕುಮಾರಸ್ವಾಮಿ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವಾಗ ಕೇಜ್ರಿವಾಲ್​ ಕೂಡ ಹಾಜರಿ ಹಾಕಿದ್ದರು. ಈ ಭೇಟಿ ವೇಳೆ 2019ರ ಮಹಾಮೈತ್ರಿ ಬಗ್ಗೆ ಚರ್ಚೆ ನಡೆದಿತ್ತು ಎನ್ನಲಾಗಿದೆ. ನಂತರ, ಕೇಜ್ರಿವಾಲ್​ ಈ ವಿಚಾರವಾಗಿ ಯಾವುದೇ ಪಕ್ಷದ ನಾಯಕರ ಜೊತೆ ಮಾತುಕತೆ ನಡೆಸಿರಲಿಲ್ಲ. ಇಂದಿನ ಸಭೆಯಲ್ಲಿ ಅವರು ಪಾಲ್ಗೊಳ್ಳುತ್ತಿರುವುದು ಕುತೂಹಲ ಮೂಡಿಸಿದೆ.

ಸಭೆಯಲ್ಲಿ ಸೇರುವ ಬಹುತೇಕ ನಾಯಕರಿಗೆ ಪ್ರಧಾನಿ ಹುದ್ದೆಯನ್ನು ನಮ್ಮಪಕ್ಷದವರೇ ಅಲಂಕರಿಸಬೇಕು ಎನ್ನುವ ಮಹಾತ್ವಾಕಾಂಕ್ಷೆ ಇದೆ. ಹಾಗಾಗಿ ಈ ವಿಚಾರವನ್ನು ಬದಿಗಿಟ್ಟು ಚರ್ಚೆ ನಡೆಯಲಿದೆ ಎನ್ನಲಾಗುತ್ತಿದೆ. “ನಮ್ಮ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ. ಆದರೆ ಮಹಾಮೈತ್ರಿಕೂಟದಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ಯಾರನ್ನು ಆಯ್ಕೆ ಮಾಡಲಾಗುತ್ತದೆ?. ಅದನ್ನು ಮೊದಲು ಘೋಷಿಸಲಿ. ನಂತರ ಮಹಾಮೈತ್ರಿ ರಚಿಸುವ ಬಗ್ಗೆ ಕನಸು ಕಾಣಲಿ,” ಎಂಬುದು ಬಿಜೆಪಿ ನಾಯಕರ ವಾದ.

ನಾಳೆ ಚಳಿಗಾಲದ ಅಧಿವೇಶನ ಆರಂಭಗೊಳ್ಳಲಿದೆ. ಅಧಿವೇಶನ ಸುಗಮವಾಗಿ ನಡೆಯಲು ಪ್ರಧಾನಿ ನರೇಂದ್ರ ಮೋದಿ ಅವರು ಸರ್ವಪಕ್ಷ ಸಭೆ ಕರೆದಿದ್ದಾರೆ. ಅದಕ್ಕೂ ಮೊದಲು ವಿಪಕ್ಷ ನಾಯಕರು ಪ್ರತ್ಯೇಕ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ. ಈ ವೇಳೆ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಕೂಡ ಪಾಲ್ಗೊಳ್ಳುವ ಸಾಧ್ಯತೆ ಇದೆಯಂತೆ.

Comments are closed.