ರಾಷ್ಟ್ರೀಯ

72ನೇ ಹುಟ್ಟುಹಬ್ಬ ಆಚರಿಸಿಕೊಂಡ ಸೋನಿಯಾ ಗಾಂಧಿ

Pinterest LinkedIn Tumblr


ನವದೆಹಲಿ: ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಇಂದು 72ನೇ ಹುಟ್ಟುಹಬ್ಬದ ಸಂಭ್ರಮ. ದೆಹಲಿಯಲ್ಲಿನ ಸೋನಿಯಾ ಅವರ ನಿವಾಸದಲ್ಲಿಯೇ ಜನ್ಮದಿನಾಚಾರಣೆಯನ್ನು ಆಚರಿಸಲಾಗುತ್ತಿದೆ. ಈಗಾಗಲೇ ಕಾಂಗ್ರೆಸ್​ನ ಹಿರಿಯ ನಾಯಕರೆಲ್ಲ ಸೋನಿಯಾವರ ನಿವಾಸದತ್ತ ತೆರಳಿದ್ದು, ಶುಭಾಶಯಗಳನ್ನು ಕೋರಿದ್ದಾರೆ. ಇನ್ನೊಂದೆಡೆ ಸಾವಿರಾರು ಕಾಂಗ್ರೆಸ್​ನ ಕಾರ್ಯಕರ್ತರು ಇಲ್ಲಿ ಮನೆಯ ಮುಂಭಾಗ ಜಮಾವಣೆಗೊಂಡು, ಸೋನಿಯಾ ಅವರಿಗೆ ಜೈಕಾರ ಕೂಗುವ ಮೂಲಕ ತಮ್ಮ ಅಭಿಮಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಸೋನಿಯಾ ಅವರ ಜನ್ಮದಿನದ ಪ್ರಯುಕ್ತ ಈಗಾಗಲೇ ಪ್ರಧಾನಿ ಸೇರಿದಂತೆ ಹಲವು ಗಣ್ಯರು ಶುಭಾಶಯಗಳನ್ನು ಕೋರಿದ್ದಾರೆ. ಮಾಜಿ ರಾಷ್ಟ್ರಪತಿ ಡಾ. ಪ್ರಣವ್ ಮುಖರ್ಜಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಡಾ.ಎಂ.ಮನಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಲೋಕಸಭೆ ಸಂಸದೀಯ ನಾಯಕ ಡಾ. ಎಂ. ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಬಿ ಆಜಾದ್ ಸೇರಿದಂತೆ ಎಲ್ಲಾ ರಾಜ್ಯಗಳ ಕಾಂಗ್ರೆಸ್​​ ಸಮಿತಿ ಅಧ್ಯಕ್ಷರು, ಶಾಸಕರು, ಸಂಸದರು, ಕಾರ್ಯಕರ್ತರು ಭರಪೂರ ಶುಭಾಶಯಗಳನ್ನು ತಿಳಿಸಿದ್ದಾರೆ.

ಯುಪಿಎ ಅಧ್ಯಕ್ಷೆ ಸೋನಿಯಾ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ಸಂಪತ್ತು ನೀಡಲಿ ಎಂದು ಆಶಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್​ ಮೂಲಕ ಶುಭಾಶಯ ಕೋರಿದ್ದಾರೆ. ಇನ್ನು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ತೃಣಮೂಲ ಕಾಂಗ್ರೆಸ್​​ ಮುಖ್ಯಸ್ಥೆ, ಸಿಎಂ ಮಮತಾ ಬ್ಯಾನರ್ಜಿ ಸೇರಿದಂತೆ ಹಲವು ಗಣ್ಯರು ಶುಭ ಹಾರೈಸಿದ್ದಾರೆ. ಸಂಜೆ ದೆಹಲಿಗೆ ತೆರಳಿ, ಸೋನಿಯಾವರೊಂದಿಗೆ ಒಂದಷ್ಟು ಮಾತುಕತೆ ನಡೆಸುವುದಾಗಿ ಸಿಎಂ ಮಮತಾ ಬ್ಯಾನರ್ಜಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

Comments are closed.