ರಾಷ್ಟ್ರೀಯ

ರಾಮಮಂದಿರ ನಿರ್ಮಾಣ ನೀವು ನೀಡಿದ ಭರವಸೆ; ವಿಎಚ್​​ಪಿ ರ‍್ಯಾಲಿಯಲ್ಲಿ ಬಿಜೆಪಿಗೆ ಭಯ್ಯಾಜಿ ತಪರಾಕಿ

Pinterest LinkedIn Tumblr


ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುತ್ತೇವೆಂದು ಭರವಸೆ ನೀಡಿದ್ದು ನೀವೆ, ನಾವೇನು ವಿಶೇಷವಾಗಿ ಭಿಕ್ಷೆ ಬೇಡುತ್ತಿಲ್ಲ ಎಂದು ಆರ್​ಎಸ್​ಎಸ್​ ನಾಯಕ ಭಯ್ಯಾಜಿ ಬಿಜೆಪಿಗೆ ತಪರಾಕಿ ಬಾರಿಸಿದ್ಧಾರೆ. ಅಲ್ಲದೇ ಅಗತ್ಯ ಬಿದ್ದಲ್ಲಿ ಮಂದಿರ ನಿರ್ಮಾಣಕ್ಕೆ ನೂತನ ಕಾನೂನು ರೂಪಿಸಿ. ಜನರಿಗೆ ನೀವು ನೀಡಿದ ಭರವಸೆಯನ್ನು ಈಡೇರಿಸಿ ಎಂದು ಬಿಜೆಪಿಗೆ ಭಯ್ಯಾಜಿ ಆಗ್ರಹಿಸಿದ್ದಾರೆ.

ರಾಮಮಂದಿರ ನಿರ್ಮಾಣದ ಕೂಗು ದೆಹಲಿ ಮುಟ್ಟಿದೆ. ಕೇಂದ್ರ ಸರ್ಕಾರದ ವಿರುದ್ಧ ವಿಎಚ್​​ಪಿ, ಶಿವಸೇನೆ ಸೇರಿದಂತೆ ಹಿಂದೂಪರ ಸಂಘಟನೆಗಳು ಹೋರಾಟ ನಡೆಸುತ್ತಿವೆ. ಜೊತೆಗೆ ಮಂದಿರ ನಿರ್ಮಾಣ ಮಾಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿವೆ. ಹೀಗಾಗಿಯೇ ದೆಹಲಿಯಲ್ಲಿ ವಿಎಚ್​​ಪಿಯಿಂದ ರಾಮಮಂದಿರಕ್ಕೆ ಆಗ್ರಹಿಸಿ ಕಾಲ್ನಡಿಗೆ ಜಾಥ ನಡೆಸಿ ಸಮಾವೇಶವನ್ನು ಆಯೋಜಿಸಲಾಗಿದೆ. ಇಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಹಿರಿಯ ಆರ್​ಎಸ್​ಎಸ್​ ನಾಯಕ ಭಯ್ಯಾಜಿ ಜೋಷಿಯವರು ಗುಡುಗಿದ್ದಾರೆ.

ಇಂದು ಭಾನುವಾರ ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯುತ್ತಿರುವ ವಿಎಚ್​​ಪಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಬಿಜೆಪಿ ಸರ್ಕಾರವೇ ಮಂದಿರ ನಿರ್ಮಾಣ ಮಾಡುತ್ತೇವೆಂದು ಭರವಸೆ ನೀಡಿದೆ. ಜನರ ಮಾತುಗಳನ್ನು ಕೇಳಿಸಿಕೊಳ್ಳಬೇಕು. ನಮ್ಮ ಹಿಂದೂ ಸಮಾಜದ ಭಾವನೆಗಳನ್ನು ಗೌರವಿಸಿ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಮಾಡಬೇಕು. ಅಗತ್ಯ ಬಿದ್ದಲ್ಲಿ ಸಂಸತ್​​ನಲ್ಲಿ ನೂತನ ಕಾನೂನು ರೂಪಿಸಬೇಕೆಂದು ಆಗ್ರಹಿಸಿದರು.

ಈ ಹಿಂದೆಯೇ ಮಂದಿರ ನಿರ್ಮಾಣದ ಭರವಸೆ ನೀವು ನೀಡಿದ್ದೀರಿ. ನಮ್ಮ ಭಾವನೆಗಳನ್ನು ನಿಮ್ಮ ಮುಂದೆ ವ್ಯಕ್ತಪಡಿಸುತ್ತಿದ್ದೇವೆ. ನೀವು ನಮ್ಮ ಮಾತನ್ನು ಆಲಿಸಬೇಕು. ಹಿಂದೂ ಸಮಾಜ ಕಂಡ ಮಂದಿರ ನಿರ್ಮಾಣದ ಕನಸು ನನಸು ಮಾಡಬೇಕು. ಈ ದೇಶಕ್ಕೆ ರಾಮ ರಾಜ್ಯ ಬೇಕೆ ಬೇಕು. ನೀವು ರಾಮ ಮಂದಿರ ನಿರ್ಮಾಣ ಮಾಡುತ್ತೀರಿ ಎಂಬ ಭರವಸೆ ನಮಗಿದೆ. ಹೀಗಾಗಿ ಕೂಡಲೇ ವಿವಾದಿತ ಸ್ಥಳದಲ್ಲಿ ಮಂದಿರ ಕಟ್ಟುವ ಕಾರ್ಯವನ್ನು ಶುರು ಮಾಡಿ ಎಂದು ಒತ್ತಾಯಿಸಿದರು.

ಇದೇ ಮಂಗಳವಾರ ಸಂಸತ್​ನಲ್ಲಿ ಚಳಿಗಾಲ ಅಧಿವೇಶನ ಆರಂಭವಾಗಲಿದೆ. ಇದಕ್ಕಿಂತ ಮುಂಚೆಯೇ ಕೇಂದ್ರದ ಮೇಲೆ ಒತ್ತಡ ಹೇರುವ ಸಾಲುವಾಗಿ ಈ ರ‍್ಯಾಲಿ ನಡೆಸಲಾಗುತ್ತಿದೆ. ಜೊತೆಗೆ ಈ ಅಧಿವೇಶದಲ್ಲಿ ಇದೇ ಪ್ರಮುಖ ಅಜೆಂಡಾ ಆಗಬೇಕು. ಅಗತ್ಯ ಬಿದ್ದಲ್ಲಿ ಎಲ್ಲಾ ಪಕ್ಷದವರೂ ನೂತನ ಕಾನೂನು ರೂಪಿಸಲು ಮುಂದಾಗಬೇಕು. ಕೇಂದ್ರದ ಜೊತೆಗೆ ಎಲ್ಲಾ ಪಕ್ಷಗಳು ಕೈಜೋಡಿಸಬೇಕು ಎಂದು ಹಿಂದೂಪರ ಸಂಘಟನೆಗಳು ಒತ್ತಾಯಿಸಿವೆ ಎನ್ನಲಾಗಿದೆ.

ಏನಿದು ಕೇಸ್​​: ಒಂದು ಕಾಲದಲ್ಲಿಮೊಘಲ್ ದೊರೆ ಬಾಬರ್ ಅವರು ಅಯೋಧ್ಯಾದಲ್ಲಿ 1528ರಲ್ಲಿ ಬಾಬ್ರಿ ಮಸೀದಿ ನಿರ್ಮಿಸಿದ್ದರು. ಆದರೆ, ಹಿಂದೂ ಸಂಘಟನೆಗಳು ಡಿಸೆಂಬರ್ 06, 1992 ರಂದು ಬಾಬ್ರಿ ಮಸೀದಿಯನ್ನು ಕೆಡವಿದರು ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಈ ವಿವಾದಿತ ಸ್ಥಳದಲ್ಲಿ ರಾಮ ಮಂದಿರ ನಿರ್ಮಿಸಲು ಹಿಂದೂಪರ ಸಂಘಟನೆಗಳು ಮುಂದಾಗಿದ್ದು, ಇದಕ್ಕೆ ಮುಸ್ಲಿಂ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿವೆ.

ಅಲಹಬಾದ್​​ ಹೈಕೋರ್ಟ್​​ ತೀರ್ಪು: ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2010 ರಲ್ಲಿ ಅಯೋಧ್ಯೆ ಜಮೀನನ್ನು ಮೂರು ಭಾಗಗಳಾಗಿ ವಿಂಗಡಿಸಿ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿತ್ತು. ಅಲ್ಲದೇ ಅಯೋಧ್ಯೆಯಲ್ಲಿನ ವಿವಾದಿತ ಜಾಗ(2.77 ಎಕರೆ)ದ ಮೇಲೆ ಹಿಂದೂ(ರಾಮ್ ಲಲ್ಲಾ), ಮುಸ್ಲಿಂ(ಸುನ್ನಿ ವಕ್ಫ್ ಮಂಡಳಿ) ಹಾಗೂ ನಿರ್ಮೋಹಿ ಅಖಾರಕ್ಕೆ ಸಮಾನವಾದ ಅಧಿಕಾರವಿದೆ ಎಂದು ಹೈಕೋರ್ಟ್ ತೀರ್ಪು ನೀಡಿತ್ತು. ಆದರೆ ಈ ತೀರ್ಪನ್ನು ವಿರೋಧಿಸಿ ಹಿಂದೂಪರ ಸಂಘಟನೆಗಳು ಸುಪ್ರೀಂಕೋರ್ಟ್​​ಗೆ ಮೇಲ್ಮನವಿ ಸಲ್ಲಿಸಿದ್ಧಾರೆ.

Comments are closed.