ರಾಷ್ಟ್ರೀಯ

ಹೈಕೋರ್ಟ್ ನ್ಯಾಯಾಧೀಶರ ನೇಮಕಾತಿಯಲ್ಲಿ ಹಸ್ತಕ್ಷೇಪ: ನ್ಯಾ| ಕುರಿಯನ್ ಜೋಸೆಫ್

Pinterest LinkedIn Tumblr


ನವದೆಹಲಿ(ನ. 30): ಸುಪ್ರೀಂ ಕೋರ್ಟ್ ನ್ಯಾಯಾಧೀಶ ಸ್ಥಾನದಿಂದ ನಿನ್ನೆಯಷ್ಟೇ ನಿವೃತ್ತರಾದ ಕುರಿಯನ್ ಜೋಸೆಫ್ ಅವರು ಇಂದು ಶುಕ್ರವಾರ ಕೇಂದ್ರ ಸರಕಾರದ ಬಗ್ಗೆ ಅಸಮಾಧಾನ ತೋಡಿಕೊಂಡರು. ಹೈಕೋರ್ಟ್ ನ್ಯಾಯಾಧೀಶರ ನೇಮಕಾತಿ ವಿಚಾರದಲ್ಲಿ ಕೇಂದ್ರ ಸರಕಾರ ಹಸ್ತಕ್ಷೇಪ ಮಾಡುತ್ತಿದೆ ಎಂದವರು ಟೀಕಿಸಿದರು. ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಈ ಬಗ್ಗೆ ಇನ್ನಷ್ಟು ವಿವರ ನೀಡಿದ ನ್ಯಾ| ಕುರಿಯನ್ ಜೋಸೆಫ್, “ನ್ಯಾಯಾಧೀಶರ ನೇಮಕಾತಿ ವಿಚಾರದಲ್ಲಿ; ನೇಮಕಾತಿ ವಿಳಂಬವಾಗುತ್ತಿರುವ ರೀತಿಯಲ್ಲಿ; ಕೆಲ ನಿರ್ದಿಷ್ಟ ನೇಮಕಾತಿಗಳು ವಿಳಂಬವಾಗುತ್ತಿರುವುದರಲ್ಲಿ; ಕೆಲ ನೇಮಕಾತಿಗಳು ಹಿಂಪಡೆದಿರುವುದರಲ್ಲಿ, ಹೀಗೆ ಇವೆಲ್ಲವೂ ಸರಕಾರದ ಹಸ್ತಕ್ಷೇಪವೇ ಆಗಿದೆ,” ಎಂದು ಸ್ಪಷ್ಟಪಡಿಸಿದರು.

ಸುಪ್ರೀಂ ಬಂಡಾಯದ ಬಗ್ಗೆ ಸ್ಪಷ್ಟನೆ:
ಇದೇ ವರ್ಷ ಜನವರಿ 12ರಂದು ಭಾರತೀಯ ಇತಿಹಾಸದಲ್ಲೇ ಕಂಡು ಕೇಳರಿಯದಂಥ ಅಚ್ಚರಿಯ ಘಟನೆ ನಡೆದಿತ್ತು. ಅಂದು ನಾಲ್ವರು ಸುಪ್ರೀಂಕೋರ್ಟ್ ಹಿರಿಯ ನ್ಯಾಯಮೂರ್ತಿಗಳು ಸುದ್ದಿಗೋಷ್ಠಿ ಕರೆದು ನ್ಯಾಯ ವ್ಯವಸ್ಥೆಯ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ತೋಡಿಕೊಂಡಿದ್ದರು. ಅಂದಿನ ಆ ನಾಲ್ವರಲ್ಲಿ ನ್ಯಾ| ಕುರಿಯನ್ ಜೋಸೆಫ್ ಕೂಡ ಒಬ್ಬರು. ಈಗಾಗಲೇ ಸುಪ್ರೀಂ ಕೋರ್ಟ್​ನಿಂದ ನಿವೃತ್ತರಾಗಿರುವ ಹಿನ್ನೆಲೆಯಲ್ಲಿ, ಕುರಿಯನ್ ಜೋಸೆಫ್ ಅವರಿಗೆ ಆ ಘಟನೆ ನಡೆಯಬಾರದಿತ್ತು ಎಂದು ಅನಿಸಿದಿದ್ದೆಯಾ? ಮಾಧ್ಯಮದವರ ಈ ಪ್ರಶ್ನೆಗೆ ನ್ಯಾ| ಜೋಸೆಫ್ ಅಷ್ಟೇ ಸ್ಪಷ್ಟವಾಗಿ ಉತ್ತರ ಕೊಟ್ಟರು.

ತಮಗೆ ಯಾವ ಬೇಸರವೂ ಇಲ್ಲ. ಅಚಾತುರ್ಯದಿಂದ ನಡೆದ ಸುದ್ದಿಗೋಷ್ಠಿಯೂ ಅದಲ್ಲ. ತಾವು ನಾಲ್ವರು ನ್ಯಾಯಮೂರ್ತಿಗಳು ಸಕಲ ರೀತಿಯಲ್ಲಿ ಸಮಾಲೋಚನೆ ನಡೆಸಿ ಪ್ರಜ್ಞಾಪೂರ್ವಕವಾಗಿ ತೆಗೆದುಕೊಂಡ ನಿರ್ಧಾರ ಅದಾಗಿತ್ತು. ಸರ್ವೋಚ್ಚ ನ್ಯಾಯಾಲಯದ ಕೆಲ ವ್ಯವಸ್ಥೆ ಮತ್ತು ಅಭ್ಯಾಸಗಳನ್ನ ಬದಲಿಸುವ ಪ್ರಕ್ರಿಯೆಗೆ ಚಾಲನೆ ಕೊಡಬೇಕಿತ್ತು. ಸುಪ್ರೀಂ ಕೋರ್ಟ್ ಎಂಥ ಸ್ಥಿತಿ ತಲುಪಿತ್ತೆಂದರೆ ತಮಗೆ ಸುದ್ದಿಗೋಷ್ಠಿ ಕರೆದು ಹೊರಜಗತ್ತಿಗೆ ಹೇಳದೆ ಬೇರೆ ದಾರಿಯೇ ಇಲ್ಲದಂತಾಗಿತ್ತು ಎಂದು ನ್ಯಾ| ಕುರಿಯನ್ ಜೋಸೆಫ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು.

ಜ. 12ರಂದು ನ್ಯಾ| ಕುರಿಯನ್ ಜೋಸೆಫ್ ಜೊತೆ ಇತರ ಸೀನಿಯರ್ ಜಡ್ಜ್​ಗಳಾದ ಜೆ. ಚಲಮೇಶ್ವರ್, ರಂಜನ್ ಗೋಗಯ್ ಮತ್ತು ಎಂ.ಬಿ. ಲೋಕೂರ್ ಅವರೂ ಇದ್ದರು. ಸುಪ್ರೀಂ ಕೋರ್ಟ್​ನಲ್ಲಿ ರೋಸ್ಟರ್ ಪದ್ಧತಿಯನ್ನು ಸರಿಯಾಗಿ ಅನುಸರಿಸುತ್ತಿಲ್ಲ. ಮುಖ್ಯನ್ಯಾಯಮೂರ್ತಿಗಳು ತಮ್ಮೊಂದಿಗೆ ಸಮಾಲೋಚನೆ ನಡೆಸದೆಯೇ ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂಬುದು ಆ ನಾಲ್ವರು ನ್ಯಾಯಮೂರ್ತಿಗಳು ಅಸಮಾಧಾನ ತೋರ್ಪಡಿಸಿದ್ದರು. ಆಗ ಮುಖ್ಯನ್ಯಾಯಮೂರ್ತಿಯಾಗಿದ್ದ ದೀಪಕ್ ಮಿಶ್ರಾ ಅವರು ನಿವೃತ್ತರಾಗಿದ್ದು, ಅವರ ಸ್ಥಾನಕ್ಕೆ ನ್ಯಾ| ರಂಜನ್ ಗೊಗೋಯ್ ಬಂದಿದ್ದಾರೆ. ಈಗ ರೋಸ್ಟರ್ ಸಮಸ್ಯೆಗೆ ಮುಕ್ತಿ ಸಿಕ್ಕಿದೆಯಾ?

ಜ. 12ರ ಸುಪ್ರೀಂ ಬಂಡಾಯದ ಆ ಸುದ್ದಿಗೋಷ್ಠಿಯಲ್ಲಿ ರೋಸ್ಟರ್ ಪದ್ಧತಿಯನ್ನಷ್ಟೇ ನ್ಯಾಯಮೂರ್ತಿಗಳು ಹೈಲೈಟ್ ಮಾಡಿದ್ದು ತಪ್ಪು ನಿರ್ಧಾರವಾಗಿತ್ತೆಂದು ನ್ಯಾ| ಕುರಿಯನ್ ಜೋಸೆಫ್ ಹೇಳುತ್ತಾರೆ. ಸುಪ್ರೀಮ್ ಕೋರ್ಟ್​ನಲ್ಲಿ ಇನ್ನೂ ಹಲವಾರು ಸಮಸ್ಯೆಗಳಿವೆ. ಅದರಲ್ಲಿ ರೋಸ್ಟರ್ ಸಿಸ್ಟಂ ಕೂಡ ಒಂದಷ್ಟೇ. ಎಲ್ಲವನ್ನೂ ಒಮ್ಮೆಗೇ ಬದಲಾಯಿಸಲು ಸಾಧ್ಯವಿಲ್ಲ. ಆದರೆ, ಬದಲಾವಣೆಯ ಪ್ರಕ್ರಿಯೆ ಆರಂಭವಾಗಲೇಬೇಕಿತ್ತು. ಅದರ ಮೊದಲ ಹೆಜ್ಜೆಯಾಗಿ ಅಂದಿನ ಸುದ್ದಿಗೋಷ್ಠಿ ನಡೆದಿತ್ತು ಎಂದು ನಿವೃತ್ತ ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು.

ಈಗ ನ್ಯಾ| ರಂಜನ್ ಗೊಗೋಯ್ ಅವರೇ ಮುಖ್ಯನ್ಯಾಯಮೂರ್ತಿಗಳಾಗಿರುವುದರಿಂದ ಸುಪ್ರೀಂ ಕೋರ್ಟ್​ನ ವ್ಯವಸ್ಥೆಯಲ್ಲಿ ಸಕರಾತ್ಮಕ ಬದಲಾವಣೆ ಆಗುವುದನ್ನು ನಿರೀಕ್ಷಿಸಬಹುದು ಎಂದೂ ಕುರಿಯನ್ ಜೋಸೆಫ್ ಹೇಳಿದರು.

Comments are closed.