ರಾಷ್ಟ್ರೀಯ

ಪರೀಕ್ಷೆಯಲ್ಲಿ ನಕಲು ಮಾಡಿ ಸಿಕ್ಕಿಬಿದ್ದಿದ್ದರಿಂದ ಚಲಿಸುತ್ತಿರುವ ರೈಲಿಗೆ ಹಾರಿದ ವಿದ್ಯಾರ್ಥಿನಿ

Pinterest LinkedIn Tumblr


ತಿರುವನಂತಪುರಂ: ಪರೀಕ್ಷೆಯಲ್ಲಿ ನಕಲು ಮಾಡುತ್ತಾ ಸಿಕ್ಕಿಬಿದ್ದ ಯುವತಿಯೊಬ್ಬಳು, ಚಲಿಸುತ್ತಿರುವ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದಿದೆ.

ರಾಖಿ ಕೃಷ್ಣ (19) ಆತ್ಮಹತ್ಯೆ ಮಾಡಿಕೊಂಡ ಯುವತಿ. ಕೊಲ್ಲಂ ಜಿಲ್ಲೆಯ ಫಾತಿಮಾ ಮಾತಾ ನ್ಯಾಷನಲ್ ಕಾಲೇಜಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಯಾಗಿದ್ದ ರಾಖಿ ಸೆಮಿಸ್ಟರ್ ಪರೀಕ್ಷೆಯಲ್ಲಿ ನಕಲು ಮಾಡುತ್ತಿರುವಾಗ ಪ್ರಾಧ್ಯಾಪಕರ ಕೈಗೆ ಸಿಕ್ಕಿಬಿದ್ದಿದ್ದಳು. ಕೂಡಲೇ ಪ್ರಾಧ್ಯಾಪಕರು ರಾಖಿಯನ್ನು ನಕಲು ನಿಗ್ರಹ ದಳದ ಅಧಿಕಾರಿಗಳಿಗೆ ಒಪ್ಪಿಸಿದ್ದರು. ಯುವತಿಯನ್ನು ವಶಕ್ಕೆ ಪಡೆದ ಅಧಿಕಾರಿಗಳು, ಪೋಷಕರನ್ನು ಕರೆತರುವಂತೆ ಆಗ್ರಹಿಸಿದ್ದರು.

ಈ ವೇಳೆ 12 ಗಂಟೆಗೆ ಪೋಷಕರನ್ನು ಕರೆತರುವುದಾಗಿ ಕಾಲೇಜಿನಿಂದ ರಾಖಿ ಹೊರಟಿದ್ದಳು. ಆದರೆ ಮನೆಗೆ ರಾಖಿ ಹೋಗದಿರುವುದನ್ನು ಅರಿತ ಕಾಲೇಜು ಪ್ರಾಧ್ಯಾಪಕರು ಆಕೆಯನ್ನು ಎಲ್ಲೆಡೆ ಹುಡುಕಾಡಿದ್ದರು. ಕೆಲ ಸಮಯದ ನಂತರ ಯುವತಿಯ ಶವ ರೈಲ್ವೇ ಹಳಿ ಬಳಿ ದೊರತಿದೆ. ಎಚ್ಚೆತ್ತ ಕಾಲೇಜು ಸಿಬ್ಬಂದಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತ ಯುವತಿಯ ಶವವನ್ನು ತಿರುವನಂತಪುರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ. ಘಟನಾ ಸಂಬಂಧ ಕೊಲ್ಲಂನ ಪೂರ್ವ ವಿಭಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ಆಯುಕ್ತ ಪಿ.ಕೆ.ಮಧು, ಪ್ರಾಥಮಿಕ ತನಿಖೆಗಳ ಪ್ರಕಾರ ಅಸಹಜ ಸಾವು ಎಂಬುದಾಗಿ ಪ್ರಕರಣ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇನೆ. ಅಲ್ಲದೇ ಯುವತಿಯ ಕುಟುಂಬಸ್ಥರು ಅಥವಾ ಆಕೆಯ ಸ್ನೇಹಿತರಿಂದ ದೂರು ಬಂದಲ್ಲಿ ತನಿಖೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

Comments are closed.