ರಾಷ್ಟ್ರೀಯ

ಪೆಟ್ರೋಲ್‌ ಬೆಲೆಯಲ್ಲಿ ಭಾರೀ ಇಳಿಕೆ: ಈ ವರ್ಷದ ಕನಿಷ್ಠ ದರ ದಾಖಲು!

Pinterest LinkedIn Tumblr


ನವದೆಹಲಿ: ಲೀಟರ್‌ಗೆ 90 ರು. ಗಡಿ ದಾಟುವ ಮೂಲಕ ದೇಶವಾಸಿಗಳನ್ನು ಚಿಂತೆಗೀಡು ಮಾಡಿದ್ದ ಪೆಟ್ರೋಲ್‌ ದರ ಇದೀಗ ಈ ಹಣಕಾಸು ವರ್ಷದಲ್ಲೇ ಅತ್ಯಂತ ಕನಿಷ್ಠ ದರಕ್ಕೆ ಕುಸಿದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆ ಹಾಗೂ ಡಾಲರ್‌ ವಿರುದ್ಧ ರುಪಾಯಿ ಬಲಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಒಂದೇ ದಿನ 50 ಪೈಸೆಯಷ್ಟು ಇಳಿಕೆಯಾಗಿರುವ ಪೆಟ್ರೋಲ್‌ ಈಗ ದೆಹಲಿಯಲ್ಲಿ 74 ರು. ಗಡಿಗಿಂತ ಕೆಳಕ್ಕೆ ಜಾರಿ 73.57 ರು.ಗೆ ತಲುಪಿದೆ.

ಮತ್ತೊಂದೆಡೆ, ಬೆಂಗಳೂರಿನಲ್ಲೂ 50 ಪೈಸೆ ಇಳಿಕೆಯಾಗಿರುವ ಪೆಟ್ರೋಲ್‌ 74.24 ರು.ಗೆ ದೊರೆಯುತ್ತಿದೆ. ಇದೇ ವೇಳೆ, 84 ರು.ವರೆಗೆ ತಲುಪಿದ್ದ ಡೀಸೆಲ್‌ ಕೂಡ ಬುಧವಾರ 40 ಪೈಸೆಯಷ್ಟು ಇಳಿಕೆಯಾಗಿದ್ದು, ದೆಹಲಿಯಲ್ಲಿ 68.89 ರು.ಗೆ ಲಭ್ಯವಾಗುತ್ತಿದೆ. ಬೆಂಗಳೂರಿನಲ್ಲಿ 68.93 ರು.ಗೆ ಸಿಗುತ್ತಿದೆ.

ಒಟ್ಟಾರೆ ಕಳೆದ ಆರು ವಾರಗಳಲ್ಲಿ ಲೀಟರ್‌ ಪೆಟ್ರೋಲ್‌ ಬೆಲೆ 9.26 ಹಾಗೂ ಡೀಸೆಲ್‌ ಬೆಲೆ 7.20 ರು. ನಷ್ಟುಅಗ್ಗವಾಗಿದೆ. ಆ.16ರಿಂದ ಏರುತ್ತಲೇ ಸಾಗಿದ್ದ ಪೆಟ್ರೋಲ್‌- ಡೀಸೆಲ್‌ ದರಗಳು ಅ.18ರಿಂದ ಇಳಿಕೆ ಕಾಣುತ್ತಿವೆ.

ಕಚ್ಚಾ ತೈಲ ಬೆಲೆ ಏರಿಕೆ, ರುಪಾಯಿ ದುರ್ಬಲ ಹಿನ್ನೆಲೆಯಲ್ಲಿ ಅ.4ರಂದು ಪೆಟ್ರೋಲ್‌, ಡೀಸೆಲ್‌ ದರ ಐತಿಹಾಸಿಕ ಮಟ್ಟ ತಲುಪಿದ್ದವು. ದೆಹಲಿಯಲ್ಲಿ ಲೀಟರ್‌ ಪೆಟ್ರೋಲ್‌ ಬೆಲೆ 84 ಹಾಗೂ ಮುಂಬೈನಲ್ಲಿ 91.34 ರು.ಗೆ ಏರಿಕೆಯಾಗಿತ್ತು. ಡೀಸೆಲ್‌ ಬೆಲೆ ದೆಹಲಿ, ಮುಂಬೈನಲ್ಲಿ ಕ್ರಮವಾಗಿ ಸಾರ್ವಕಾಲಿಕ ದಾಖಲೆಯ 75.45 ಹಾಗೂ 80.10 ರು.ಗೆ ಏರಿದ್ದವು. ಬುಧವಾರ ಮುಂಬೈನಲ್ಲಿ ಪೆಟ್ರೋಲ್‌ ದರ 79.12 ಹಾಗೂ ಡೀಸೆಲ್‌ 71.91 ರು.ಗೆ ತಗ್ಗಿದೆ.

Comments are closed.