ರಾಷ್ಟ್ರೀಯ

ತೆಲಂಗಾಣ ರಾಷ್ಟ್ರೀಯ ಸಮಿತಿ ಬಿಜೆಪಿಯ ಬೀ ಟೀಂ: ರಾಹುಲ್‌‌ ಗಾಂಧಿ

Pinterest LinkedIn Tumblr


ಹೈದರಾಬಾದ್: ತೆಲಂಗಾಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರಡಕ್ಕೂ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್(ಕೆಸಿಆರ್) ಅವರೇ ಪ್ರಮುಖ ಎದುರಾಳಿ. ಈ ಎರಡೂ ರಾಷ್ಟ್ರೀಯ ಪಕ್ಷಗಳು ಕೆಸಿಆರ್ ಮತ್ತು ಅವರ ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್‌ಎಸ್) ಪಕ್ಷವನ್ನೇ ಗುರಿಯಾಗಿರಿಸಿಕೊಂಡು ವಾಗ್ದಾಳಿ ನಡೆಯುತ್ತಿದೆ.

ನಿನ್ನೆಯಷ್ಟೇ ತೆಲಂಗಾಣದಲ್ಲಿ ಪ್ರಚಾರ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಟಿಆರ್‌ಎಸ್ ಕಾಂಗ್ರೆಸ್‌ನ ಬಿ ಟೀಮ್ ಆಗಿದ್ದು ಕೇವಲ ಸೌಜನ್ಯದ ಪಂದ್ಯವನ್ನಾಡುತ್ತಿವೆ ಎಂದು ಟೀಕಿಸಿದ್ದರು. ಆದರೆ ಬುಧವಾರ ಪ್ರಚಾರ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಟಿಆರ್‌ಎಸ್ ಬಿಜೆಪಿಯ ಬಿ ಟೀಂ ಎಂದು ಪ್ರತಿದಾಳಿ ನಡೆಸಿದ್ದಾರೆ. ತೆಲಂಗಾಣದಲ್ಲಿ ಡಿ.7ರಂದು ಚುನಾವಣೆ ನಡೆಯಲಿದೆ.

ಮಂಗಳವಾರ ಮೋದಿ ಎರಡು ರ‍್ಯಾಲಿಗಳಲ್ಲಿ ಭಾಗವಹಿಸಿ ಪ್ರಚಾರ ಕೈಗೊಂಡಿದ್ದರೆ ರಾಹುಲ್ ಗಾಂಧಿ, ತೆಲುಗು ದೇಶಂ ಮುಖಂಡ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಜತೆ ಜಂಟಿ ಪ್ರಚಾರ ನಡೆಸಿ ಗಮನ ಸೆಳೆದರು. ಟಿಆರ್‌ಎಸ್ ಮತ್ತು ಕಾಂಗ್ರೆಸ್‌ನ ಒಂದೇ ನಾಣ್ಯದ ಎರಡು ಮುಖಗಳು ಎಂದು ಮೋದಿ ಹೇಳುತ್ತಾರೆ. ಆದರೆ ಚುನಾವಣೆಗೂ ಮುನ್ನ ಮೋದಿ ಏಕೆ ಈ ರೀತಿ ಹೇಳುತ್ತಿರಲಿಲ್ಲ ಎಂದು ರಾಹುಲ್ ಪ್ರಶ್ನಿಸಿದರು. ನಂತರ ಕೆಸಿಆರ್ ವಿರುದ್ಧ ಟೀಕಾ ಪ್ರಹಾರ ನಡೆಸಿದ ರಾಹುಲ್ ನಿರುದ್ಯೋಗ ಸೃಷ್ಠಿಯಲ್ಲಿ ಕೆಸಿಆರ್ ಪ್ರಧಾನಿ ಮೋದಿ ಅವರನ್ನು ಅನುಕರಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ನಾವು ತೆಲಂಗಾಣದ ಜನರ ಕನಸುಗಳನ್ನು ಈಡೇರಿಸುತ್ತೇವೆ. ಪ್ರತ್ಯೇಕ ರಾಜ್ಯ ಬೇಕೆಂಬ ನಿಮ್ಮ ಬೇಡಿಕೆಯನ್ನು ಈಡೇರಿಸಿದ್ದು ಸೋನಿಯಾ ಗಾಂಧಿ. ಮೊದಲು ನಾವು ಕೆಸಿಆರ್ ಅವರನ್ನು ಸೋಲಿಸಿ ನಂತರ 2019ರಲ್ಲಿ ಮೋದಿ ಅವರನ್ನು ಮಣಿಸುತ್ತೇವೆ. ಇಲ್ಲಿ ನಿಮಗಾಗಿ ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಟಿಆರ್‌ಎಸ್ ಎಂದರೆ ತೆಲಂಗಾಣ ರಾಷ್ಟ್ರೀಯ ಸಂಘ ಪರಿವಾರ. ಕೆಸಿಆರ್ ಅವರ ಭಾಷಣವನ್ನು ಗಮನವಿಟ್ಟು ಆಲಿಸಿ… ಅವರು ಎಂದೂ ಮೋದಿ ಅವರನ್ನು ಟೀಕಿಸುವುದಿಲ್ಲ. ರಫೇಲ್ ಹಗರಣ ಕೆಸಿಆರ್ ಎಷ್ಟು ಭಾರಿ ಮಾತನಾಡಿದ್ದಾರೆ?
– ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ

Comments are closed.