ರಾಷ್ಟ್ರೀಯ

ಚರ್ಚ್, ಮಸೀದಿಗಳಿಗೆ ಉಚಿತ ವಿದ್ಯುತ್: ತೆಲಂಗಾಣದಲ್ಲಿ ಮತದಾರರಿಗೆ ಕಾಂಗ್ರೆಸ್​ ಭರವಸೆ

Pinterest LinkedIn Tumblr


ಹೈದ್ರಾಬಾದ್​: ಮಸೀದಿ, ಚರ್ಚ್​ಗಳಿಗೆ ಉಚಿತ ವಿದ್ಯುತ್​ ಸೇವೆ, ಉರ್ದುವನ್ನು ಎರಡನೇ ಆಡಳಿತ ಭಾಷೆ ಸ್ಥಾನಮಾನ, ಮುಸ್ಲಿಂ ಮತ್ತು ಕ್ರಿಶ್ಚಿಯನ್​ ಧರ್ಮಗುರುಗಳಿಗೆ ಮಾಸಿಕ ವೇತನ ಸೇರಿದಂತೆ ಅಲ್ಪ ಸಂಖ್ಯಾತ ಸಮುದಾಯಗಳಿಗೆ ಅನೇಕ ಸೌಲಭ್ಯವನ್ನು ಈ ಬಾರಿ ಕಾಂಗ್ರೆಸ್​ ಪ್ರಣಾಳಿಕೆಯಲ್ಲಿ ಘೋಷಿಸಿದ್ದು, ಅವರ ಓಲೈಕೆಗೆ ಮುಂದಾಗಿದೆ,

ತೆಲಂಗಾಣ ಮತದಾರರ ಸೆಳೆಯಲು ಮುಂದಾಗಿರುವ ಕಾಂಗ್ರೆಸ್​ ಈಗಾಗಲೇ ಪ್ರಣಾಳಿಕೆಯನ್ನು ಸಿದ್ಧಪಡಿಸಿದ್ದು, ಇದರ ಕರುಡು ಪ್ರತಿ ನ್ಯೂಸ್​ 18ಗೆ ಲಭಿಸಿದೆ. ಡಿ. 7ರಂದು ತೆಲಂಗಾಣದ 119 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಇದರಲ್ಲಿ 12.5 ರಷ್ಟು ಜನಸಂಖ್ಯೆಯನ್ನು ಹೊಂದಿರುವ ಮುಸ್ಲಿಂರು 42 ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರವನ್ನು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಣಾಳಿಕೆಯಲ್ಲಿ ಅಲ್ಪಸಂಖ್ಯಾತರಿಗೆ ಭರವಸೆಗಳ ಮಹಾಪೂರವನ್ನೇ ಹರಿಸಿದೆ.

ತೆಲಂಗಾಣದ ಜನ ತಮಗೆ ಮತ ನೀಡಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ತೆಲುಗು ನಂತರ ‘ಉರ್ದುವಿಗೆ ಎರಡನೇ ಆಡಳಿತ ಭಾಷೆ’ ಸ್ಥಾನಮಾನ ನೀಡಲಾಗುವುದು. ಸರ್ಕಾರದ ಎಲ್ಲಾ ಆದೇಶಗಳು ಉರ್ದುವಿನಲ್ಲಿ ಕೂಡ ನೀಡುವಂತೆ ನೋಡಿಕೊಳ್ಳಲಾಗುವುದು ಎಂದು ಆಶ್ವಾಸನೆ ನೀಡಿದೆ.

ಮುಸ್ಲಿಂ, ಕ್ರಿಶ್ಚಿಯನ್​ ಮತ್ತು ಇತರೆ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಮೂರು ಹಣಕಾಸು ನಿಗಮಗಳನ್ನು ಸ್ಥಾಪಿಸಲಾಗುವುದು ಎಂದು ಕೂಡ ಕಾಂಗ್ರೆಸ್​ ಭರವಸೆ ನೀಡಿದೆ.

ಈ ಹಣಕಾಸು ನಿಗಮದ ಅಡಿಯಲ್ಲಿ ಮುಸ್ಲಿಂ ಯುವಕರು ಸರ್ಕಾರದ ಯೋಜನೆ, ಸರ್ಕಾರದ ಗುತ್ತಿಗೆಯ ಕೆಲಸವನ್ನು ಪಡೆಯಬಹುದು; ಮನೆ ಕಟ್ಟಲು 5ಲಕ್ಷದವರೆಗೆ ಹಣಕಾಸಿನ ನೆರವು ಪಡೆಯಬಹುದು; ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಸಹಾಯಕ್ಕಾಗಿ 20 ಲಕ್ಷದವರೆಗೆ ನೆರವು ಪಡೆಯಬಹುದು ಎಂದು ತಿಳಿಸಿದೆ.

ತೆಲಂಗಾಣ ರಾಜ್ಯ ಲೋಕಸೇವಾ ಆಯೋಗದಲ್ಲಿ ಮುಸ್ಲಿಂ ಸಮುದಾಯದ ಒಬ್ಬ ಸದಸ್ಯರಿಗೆ ಕೆಲಸ ಹಾಗೂ ಮಸೀದಿಗಳ ಧರ್ಮಾಧಿಕಾರಿಗಳಾದ ಇಮಾಮ್​ಗಳಿಗೆ ತಿಂಗಳಿಗೆ 6 ಸಾವಿರ ಮಾಸಿಕ ವೇತನ ನೀಡುವುದಾಗಿ ತಿಳಿಸಿದೆ.

ಇನ್ನು ಕಾಂಗ್ರೆಸ್​ನ ಈ ಕರಡು ಪ್ರಣಾಳಿಕೆ ಕುರಿತು ಮಾತನಾಡಿದ ಬಿಜೆಪಿ ನಾಯಕ ಅರುಣ್​ ಜೇಟ್ಲಿ, “ಧರ್ಮದ ಆಧಾರದ ಮೇಲೆ ಯಾವುದೇ ರೀತಿಯ ವರ್ಗೀಕರಣವನ್ನು ಸಂವಿಧಾನದಲ್ಲಿ ನೀಡಲಾಗುವುದಿಲ್ಲ” ಎಂದು ಟೀಕಿಸಿದ್ದಾರೆ.

ಕೇಂದ್ರ ಸಚಿವ ಮುಖ್ತರ್​ ಅಬ್ಬಸ್​ ನಖ್ವಿ ಮಾತನಾಡಿ, ಮೋದಿ ನೇತೃತ್ವದ ನಮ್ಮ ಪಕ್ಷ ಯಾವುದೇ ತಾರತಮ್ಯ ನೀತಿ ಅನುಸರಿಸದೆ ಅಭಿವೃದ್ಧಿಯ ಮೇಲೆ ನಂಬಿಕೆ ಹೊಂದಿದ್ದರೆ, ಕಾಂಗ್ರೆಸ್​ ಮುಸ್ಲಿಂ ಓಲೈಕೆ ಪ್ರಯತ್ನ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.

ತೆಲಂಗಾಣದಲ್ಲಿ ಏಕಾಂಗಿಯಾಗಿ ಸ್ಪರ್ಧಿಸುತ್ತಿರುವ ಬಿಜೆಪಿ ಕೂಡ ಮುಸ್ಲಿಮ್ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಘಟಾನುಘಟಿ ನಾಯಕರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಮುಸ್ಲಿಮರಿಗೆ ಪ್ರತ್ಯೇಕ ಕೋಟಾ ನೀಡುವುದನ್ನು ಬಿಜೆಪಿ ವಿರೋಧಿಸುವ ಮೂಲಕ ಮತ ವಿಭಜೀಕರಣಕ್ಕೆ ಮುಂದಾಗಿದೆ.

ಮುಸ್ಲಿಮರಿಗೆ ಪ್ರತ್ಯೇಕ ಕೋಟಾ ನೀಡುವ ಭರವಸೆಯು ತೆಲಂಗಾಣ ರಾಷ್ಟ್ರ ಸಮಿತಿಗೆ ಮೊದಲಿಂದಲೂ ಟ್ರಂಪ್ ಕಾರ್ಡ್ ಆಗಿದೆ. ಆದರೆ, ಅಧಿಕಾರಕ್ಕೆ ಬಂದರೂ ಮುಸ್ಲಿಮರಿಗೆ ಕೋಟಾ ಒದಗಿಸಲು ಕೆಸಿಆರ್ ವಿಫಲವಾಗಿದೆ ಎಂದು ಹೇಳಿಕೊಂಡು ಕಾಂಗ್ರೆಸ್ ಲಾಭ ಮಾಡಿಕೊಳ್ಳುವ ಅವಕಾಶವಿದೆ. ಕಾಂಗ್ರೆಸ್ ಇದೇ ವಿಚಾರವನ್ನು ಎತ್ತಿಕೊಂಡು ಮುಸ್ಲಿಮರನ್ನ ಓಲೈಸುವ ಕಾರ್ಯದಲ್ಲಿ ತೊಡಗಿದೆ.

2014ರ ಚುನಾವಣೆಯಲ್ಲಿ ಕೂಡ ಕೆಸಿಆರ್​ ಅಧಿಕಾರಕ್ಕೆ ಬಂದ ನಾಲ್ಕು ತಿಂಗಳ ಒಳಗೆ ಮುಸ್ಲಿಂರಿಗೆ ಶೆ 12ರಷ್ಟು ಕೋಟಾವನ್ನು ನೀಡುವುದಾಗಿ ತಿಳಿಸಿತು. ಬಳಿಕ ಸುದೀರ್​ ಮತ್ತು ಬಿಸಿ ಆಯೋಗದ ಮೂಲಕ 12 ರಷ್ಟು ಮೀಸಲಾತಿ ಹೆಚ್ಚಳಕ್ಕೆ ಕೆಸಿಆರ್​ ಮುಂದಾಗಿದ್ದರು. ಆದರೆ, ಪ್ರಧಾನಿ ನರೇಂದ್ರ ಮೋದಿಯೊಂದಿಗೆ ಕೆಸಿಆರ್​ ತಂತ್ರಹೂಡಿದ ಹಿನ್ನಲೆ ಈ ಮೀಸಲಾತಿಯನ್ನು ಕೇಂದ್ರ ಸರ್ಕಾರ ಮೂಲೆಗೆ ಎಸೆಯಿತು ಎಂದು ಕೂಡ ಪ್ರಣಾಳಿಕೆ ತಿಳಿಸಿದೆ.

ಮುಸ್ಲಿಂರ ಓಲೈಕೆ ಹೊರತಾಗಿ ಕ್ರಿಶ್ಚಿಯನ್​ ಸಮುದಾಯಕ್ಕೂ ಕಾಂಗ್ರೆಸ್​ ಆಶ್ವಾಸನೆ ಮಹಾಪೂರ ಹರಿಸಿದೆ. ದಲಿತ ಕ್ರಿಶ್ಚಿಯನರಿಗೆ ಪರಿಶಿಷ್ಟ ವರ್ಗ ಮೀಸಲಾತಿ, ಧರ್ಮಾಧಿಕಾರಿ, ಪಾದ್ರಿಗಳಿಗೆ 5 ಲಕ್ಷದವರೆಗೆ ಆರೋಗ್ಯ ಮತ್ತು ಅಪಘಾತ ವಿಮೆ, 2ರೂಂ ಹೊಂದಿರುವ ಮನೆ, ಕ್ರಿಶ್ಚಿಯನ್​ ಸಮುದಾಯದ ಮಕ್ಕಳಿಗೆ ಉಚಿತ ಶಿಕ್ಷಣದ ಭರವಸೆಯನ್ನು ನೀಡಿದೆ,

ಅಷ್ಟೇ ಅಲ್ಲದೇ ಹಿಂದೂ ಧರ್ಮದ ಪರಿಶಿಷ್ಟ ಜಾತಿ, ವರ್ಗ ಹಾಗೂ ಹಿಂದುಳಿದ ಸಮುದಾಯಗಳ ಜನರಿಗೂ ಸಾಕಷ್ಟು ಸೌಲಭ್ಯಗಳ ಭರವಸೆಗಳನ್ನು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ನೀಡಲಾಗಿದೆ.

Comments are closed.