ರಾಷ್ಟ್ರೀಯ

ಡಿಸೆಂಬರ್ 5 ರಿಂದ ಪ್ಯಾನ್ ಕಾರ್ಡ್ ಗೆ ಹೊಸ ನಿಯಮಗಳು ಜಾರಿಗೆ

Pinterest LinkedIn Tumblr


ನವದೆಹಲಿ: ಆದಾಯ ತೆರಿಗೆ ನಿಯಮಗಳಲ್ಲಿ ತಿದ್ದುಪಡಿ ಮಾಡಲಾಗಿದ್ದು, ಡಿಸೆಂಬರ್ 5 ರಿಂದ ಹೊಸ ನಿಯಮ ಜಾರಿಗೆ ಬರಲಿದೆ ಎಂದು ಕೇಂದ್ರ ತೆರಿಗೆ ಮಂಡಳಿ (ಸಿಬಿಡಿಟಿ) ಅಧಿಸೂಚನೆಯಲ್ಲಿ ತಿಳಿಸಿದೆ.

ಬ್ಯಾಂಕ್ ಖಾತೆ ತೆರೆಯಲು, 2 ಲಕ್ಷಕ್ಕೂ ಮೇಲ್ಪಟ್ಟ ವ್ಯವಹಾರಗಳಿಗೆ ಸಂಬಂಧಿಸಿದಂತೆ ಹಾಗೂ ಇತರ ಕೆಲವು ಕೆಲಸಗಳಿಗೆ PAN ಕಾರ್ಡ್ ಕಡ್ಡಾಯವಾಗಿದೆ. ವಾರ್ಷಿಕ 2.5 ಲಕ್ಷ ರೂ. ಅಥವಾ ಅದಕ್ಕಿಂತ ಮೇಲ್ಪಟ್ಟು ಆರ್ಥಿಕ ವ್ಯವಹಾರ ನಡೆಸಿರುವ ಸಂಸ್ಥೆಗಳು ಪಾನ್ ಕಾರ್ಡ್‌ಪಡೆದುಕೊಳ್ಳುವುದು ಕಡ್ಡಾಯ ಮಾಡಲಾಗಿದೆ.

ಆದಾಯ ತೆರಿಗೆ ನಿಯಮಗಳಲ್ಲಿ ನಿಯಮ 114ರ ತಿದ್ದುಪಡಿ ಮಾಡಲಾಗಿದ್ದು, ಆ ತಿದ್ದುಪಡಿಯು ಡಿ.5, 2018ರಿಂದ ಜಾರಿಗೆ ಬರಲಿದೆ. ಹಣಕಾಸು ವರ್ಷವೊಂದರಲ್ಲಿ 2.5 ಲಕ್ಷ ರೂ.ಗಿಂತ ಮೇಲ್ಪಟ್ಟ ವ್ಯವಹಾರ ನಡೆಸುವ ಸಂಸ್ಥೆಗಳಿಗೆ ಪಾನ್ ಕಾರ್ಡ್ ಕಡ್ಡಾಯಗೊಳಿಸಲು 2018ರ ಬಜೆಟ್‌ನಲ್ಲಿ ಸೆಕ್ಷನ್ 139ಎ ತಿದ್ದುಪಡಿ ತರಲು ಪ್ರಸ್ತಾಪಿಸಲಾಗಿತ್ತು. ಇದು 2018-19ನೇ ಹಣಕಾಸು ವರ್ಷದಿಂದ ಜಾರಿಗೆ ಬಂದಿದೆ.

ಡಿಸೆಂಬರ್ 5 ರಿಂದ ಜಾರಿಗೆ ಬರುವ ಹೊಸ ಪ್ಯಾನ್ ಕಾರ್ಡ್ ನಿಯಮಗಳು:

ವ್ಯಕ್ತಿಗತವಲ್ಲದ ಸಂಸ್ಥೆಗಳ ಮಾಲೀಕರು ಹಣಕಾಸು ವರ್ಷವೊಂದರಲ್ಲಿ 2.5 ಲಕ್ಷ ರೂ. ಮೇಲ್ಪಟ್ಟ ವಹಿವಾಟು ನಡೆಸುತ್ತಿದ್ದು, ಇನ್ನೂ ಪಾನ್ ಕಾರ್ಡ್ ಹೊಂದಿಲ್ಲವೇ? ಹಾಗಿದ್ದರೆ, ಮುಂದಿನ ಹಣಕಾಸು ವರ್ಷದ ಮೇ 31ರೊಳಗೆ ನೀವು ಕಡ್ಡಾಯವಾಗಿ ಪ್ಯಾನ್ ಕಾರ್ಡ್ ಮಾಡಿಸಿಕೊಳ್ಳಲೇಬೇಕು.
ವ್ಯಕ್ತಿಗತವಲ್ಲದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ, ನಿರ್ದೇಶಕ, ಪಾಲುದಾರ, ಟ್ರಸ್ಟಿ, ಸಂಸ್ಥಾಪಕ, ಕರ್ತಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಥವಾ ಪದಾಧಿಕಾರಿ ಅಥವಾ ಆ ಸಂಸ್ಥೆಯ ಪರವಾಗಿ ಕಾರ್ಯ ನಿರ್ವಹಿಸುವ ವ್ಯಕ್ತಿಗೆ ಈ ನಿಯಮ ಅನ್ವಯವಾಗುತ್ತದೆ.
ಪ್ಯಾನ್ ಕಾರ್ಡ್‌ಗಾಗಿ ಹಾಕುವ ಅರ್ಜಿಯಲ್ಲಿ ತಂದೆಯ ಹೆಸರನ್ನು ತಿಳಿಸುವುದು ಕಡ್ಡಾಯವಲ್ಲ. ಪ್ಯಾನ್ ಕಾರ್ಡ್ ಅರ್ಜಿಗಳಲ್ಲಿ, ತಾಯಿಯು ಸಿಂಗಲ್ ಪೇರೆಂಟ್ ಆಗಿದ್ದಾರೆಯೇ ಎಂದು ಅರ್ಜಿದಾರರಲ್ಲಿ ಕೇಳಲಾಗುವುದು. ಹೌದಾದಲ್ಲಿ ಅರ್ಜಿದಾರರು ಕೇವಲ ತನ್ನ ತಾಯಿಯ ಹೆಸರನ್ನು ತಿಳಿಸಿದರೆ ಸಾಕು ಎಂದು ಆದಾಯ ತೆರಿಗೆ ನಿಯಮಗಳಿಗೆ ತಿದ್ದುಪಡಿಯನ್ನು ಮಾಡಲಾದ ಅಧಿಸೂಚನೆಯಲ್ಲಿ ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ತಿಳಿಸಿದೆ.

Comments are closed.