ರಾಷ್ಟ್ರೀಯ

ನೋಟು ಅಮಾನ್ಯ ಮಾಡಲು ಕೋರ್ಟ್​ ಆದೇಶಕ್ಕೆ ಕಾಯದ ನೀವು, ಮಂದಿರ ನಿರ್ಮಿಸಲು ಯಾಕೆ ಕಾಯುತ್ತಿದ್ದೀರಿ?

Pinterest LinkedIn Tumblr


ಆಯೋಧ್ಯ: ಆಯೋಧ್ಯದಲ್ಲಿ ರಾಮ ಮಂದಿರ ನಿರ್ಮಿಸುವ ವಿಚಾರವಾಗಿ ಒಂದೆಡೆ ಧರ್ಮ ಸಂಸತ್​ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವಾಗಲೇ ಮತ್ತೊಂದೆಡೆ ಮೈತ್ರಿ ಪಕ್ಷ ಶಿವಸೇನೆಯೂ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಗುಡುಗಿದೆ.

“ನೋಟು ಅಮಾನ್ಯ ಮಾಡಲು ಕೋರ್ಟ್​ ಆದೇಶಕ್ಕೆ ಕಾಯದ ನೀವು, ಮಂದಿರ ನಿರ್ಮಿಸಲು ಯಾಕೆ ಕಾಯುತ್ತಿದ್ದೀರಿ. ಮಂದಿರ ಕಟ್ಟಲು ನಿಮಗೆ ಇನ್ನೂ ಎಷ್ಟು ಸಮಯ ಬೇಕು? ನಿರ್ಮಾಣದ ದಿನಾಂಕವನ್ನು ಶೀಘ್ರವೇ ಘೋಷಣೆ ಮಾಡಿ,” ಎಂದು ಶಿವ ಸೇನೆಯ ಮುಖ್ಯಸ್ಥ ಉದ್ಧವ್​ ಠಾಕ್ರೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಶಿವಸೇನೆಯ ಮುಖ್ಯಸ್ಥ ಉದ್ಧವ್​ ಠಾಕ್ರೆ, ಪುತ್ರ ಆದಿತ್ಯ ಠಾಕ್ರೆ ಇಂದು ಮಧ್ಯಾಹ್ನ 1.30 ರ ಸುಮಾರಿನಲ್ಲಿ ಅಯೋಧ್ಯೆಗೆ ಆಗಮಿಸಿದರು. ಅಲ್ಲದೆ, ಅಲ್ಲಿ ನಡೆಯುತ್ತಿದ್ದ ಮಹಾ ಪೂಜೆಯಲ್ಲಿ ಭಾಗವಹಿಸಿದ ಅವರು, ಕೇಂದ್ರದ ವಿರುದ್ಧ ಕಿಡಿ ಕಾರಿದರು.

“ಅಟಲ್​ ಬಿಹಾರಿ ವಾಜಪೇಯಿ ಅವರ ಸರ್ಕಾರ ಮೈತ್ರಿ ಮೇಲೆ ನಿಂತಿದ್ದು. ಅಲ್ಲದೆ, ಅವರಿಗೆ ಕೆಲವು ಇತಿಮಿತಿಗಳಿದ್ದವು. ಆದರೆ, ಈಗಿನ ಮೋದಿ ಸರ್ಕಾರಕ್ಕೆ ಸಂಪೂರ್ಣ ಬಹುಮತವಿದೆ. ಅಗತ್ಯವಿದ್ದರೆ ಸುಗ್ರೀವಾಜ್ಞೆ ಜಾರಿಗೆ ತನ್ನಿ ಅಥವಾ ಕಾನೂನು ತನ್ನಿ. ಆದರೆ, ಮಂದಿರ ನಿರ್ಮಿಸುವ ದಿನಾಂಕ ಘೋಷಣೆ ಮಾಡಿ,” ಎಂದು ಅವರು ಒತ್ತಾಯಿಸಿದ್ದಾರೆ.

” ಕುಂಬಕರ್ಣ ಆರು ತಿಂಗಳು ನಿದ್ರಿಸುತ್ತಿದ್ದ. ಆದರೆ ಈ ಕುಂಬಕರ್ಣ (ಮೋದಿ ಸರ್ಕಾರ) ನಾಲ್ಕು ವರ್ಷಗಳಿಂದ ನಿದ್ರೆ ಮಾಡುತ್ತಿದ್ದಾನೆ. ನಾನಿಲ್ಲಿಗೆ ಯಾರ ಪರವಾಗಿಯೂ ಬಂದಿಲ್ಲ. ಮಂದಿರ ನಿರ್ಮಾಣದಿಂದ ಬರುವ ಖ್ಯಾತಿಯೂ ನನಗೆ ಬೇಕಿಲ್ಲ. ರಾಮಮಂದಿರವನ್ನು ನೀವೇ (ಬಿಜೆಪಿ) ಕಟ್ಟಿ. ಅದರ ಹೆಸರನ್ನೂ ನೀವೇ ತೆಗೆದುಕೊಳ್ಳಿ,” ಎಂದು ಅವರು ಹೇಳಿದರು.

ದೇಶದಲ್ಲಿ ನೋಟು ಅಮಾನ್ಯ ಮಾಡುವ ಮುನ್ನ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್​ನ ಆದೇಶದ ವರೆಗೆ ಕಾಯಲಿಲ್ಲ. ಆದರೆ, ಈಗ ಮಂದಿರ ನಿರ್ಮಾಣ ಮಾಡುವಾಗ ನ್ಯಾಯಾಲಯದ ಆದೇಶಕ್ಕೆ ಯಾಕೆ ಕಾಯುತ್ತಿದ್ದೀರಿ ಎಂದೂ ಅವರು ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

Comments are closed.