ರಾಷ್ಟ್ರೀಯ

ಶಬರಿಮಲೆಯಲ್ಲಿ ಮದ್ಯ ಸೇವಿಸುವ ಆನೆಗಳು

Pinterest LinkedIn Tumblr


ಕೊಚ್ಚಿ: ಶಬರಿಮಲೆ ದೇವಸ್ಥಾನಕ್ಕೆ ಹೋಗುವ ಭಕ್ತಾಧಿಗಳಿಗೆ ಇದೀಗ ಹೊಸ ಭಯ ಹುಟ್ಟಿದೆ.

ದೇವಾಲಯ ಇರುವ ಪೆರಿಯಾರ್‌ ಹುಲಿ ರಕ್ಷಿತಾರಣ್ಯದಲ್ಲಿ ಕಾಕಂಬಿಯನ್ನು ಸೇವಿಸಿ ಮತ್ತೇರಿದ ಆನೆಗಳ ಹಾವಳಿ ಹೆಚ್ಚಾಗಿದ್ದು, ಭಕ್ತರು ಹಾಗೂ ಪೊಲೀಸರಲ್ಲಿ ಮನೆ ಮಾಡಿದೆ.

ದೇವಾಲಯಕ್ಕೆ ಸಾಗುವ ಕಾಡಿನ ದಾರಿಯಲ್ಲಿ ಪಂಪಾ ನದಿ ತೀರ ಪ್ರದೇಶವಾಗಿರುವ ನೀಳಕ್ಕಳ್‌ ಪ್ರದೇಶದಲ್ಲಿ ಮದ್ಯದ ರೀತಿಯ, ಮತ್ತೇರಿಸುವ ಪದಾರ್ಥ ಶೇಖರಣೆಯಾಗಿದೆ. ಕಾಕಂಬಿ ಸವಿಯಲೆಂದು ಬರುವ ಆನೆಗಳಿಗೆ ಈ ಮದ್ಯದ ರೀತಿಯ ಪದಾರ್ಥದ ರುಚಿ ಹತ್ತಿವೆ.

ಏನಿದು ಪದಾರ್ಥ?

ನೀಲಕಲ್‌ನಿಂದ ಭಕ್ತಾಧಿಗಳು ನಡೆದು ದೇವಾಲಯಕ್ಕೆ ಸಾಗಬೇಕಾಗುತ್ತದೆ. ಇದೇ ಜಾಗದಲ್ಲಿ ತ್ಯಾಜ್ಯಗಳನ್ನೂ ವಿಲೇವಾರಿ ಮಾಡಲಾಗಿದೆ. ಮಳೆನೀರು, ತ್ಯಾಜ್ಯ, ಕೊಳೆತ ಹಣ್ಣುಗಳೆಲ್ಲವೂ ಕಾಕಂಬಿ ಜತೆ ಸೇರಿ ಮಧ್ಯದ ಮಾದರಿಯ ಮತ್ತೇರಿಸುವ ಪದಾರ್ಥವಾಗಿದೆ. ಕಳೆದ ತಿಂಗಳು ಸುರಿದ ರಕ್ಕಸ ಮಳೆಗೆ ನೀರಿನಲ್ಲಿ ಕೊಚ್ಚಿ ಬಂದಿರುವ ಕಾಕಂಬಿಯೂ ಇದೇ ಜಾಗದಲ್ಲಿ ಶೇಖರಣೆಯಾಗಿದೆ ಎನ್ನಲಾಗಿದೆ.

ಮತ್ತೇರಿದ ಆನೆಗಳು

ಇದರ ರುಚಿ ಹಿಡಿದಿರುವ ಆನೆಗಳು ಈ ಜಾಗಕ್ಕೆ ಖಾಯಂ ಗಿರಾಕಿಗಳಾಗಿದ್ದಾರೆ. ಮತ್ತೇರಿದ ಆನೆಗಳಿಂದ ದಾಳಿಗೊಳಗಾಗುವ ಭೀತಿ ಭಕ್ತರಲ್ಲೂ, ಭದ್ರತೆಗಾಗಿ ನಿಯೋಜಿಸಲಾಗಿರುವ ಪೊಲೀಸರಲ್ಲೂ ಮನೆ ಮಾಡಿದೆ. ಅರಣ್ಯ ಇಲಾಖೆ ಹಾಗೂ ಪೊಲೀಸ್‌ ಇಲಾಖೆಗೆ ಆನೆಗಳ ಹಾವಳಿಯಿಂದ ತಪ್ಪಿಸಿಕೊಳ್ಳಲು ಉಪಾಯ ಹುಡುಕುತ್ತಿದ್ದಾರೆ.

ಇದನ್ನು ಸೇವಿಸಿದ ಕೆಲ ಆನೆಗಳ ವರ್ತನೆಯಲ್ಲಿ ಬದಲಾವಣೆ ಕಂಡು ಬಂದಿದ್ದು, ದಾಳಿ ನಡೆಸುವ ಸಾಧ್ಯತೆ ಇವೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಪಂಪಾ ಹಾಗೂ ನೀಳಕ್ಕಳ್‌ನಲ್ಲಿ ಅವೈಜ್ಞಾನಿಕ ತ್ಯಾಜ್ಯ ಹಾಗೂ ಒಳಚರಂಡಿ ವ್ಯವಸ್ಥೆಯಿಂದ ಇಂತಹ ಸಮಸ್ಯೆ ಎದುರಾಗಿದೆ. ಒಳಚರಂಡಿ ತುಂಬಿ ಕಕ್ಕಟ್ಟಾರು ಭಾಗಕ್ಕೆ ಹರಿದು ಬರುತ್ತಿದೆ ಎಂದು ಪರಿಸರವಾದಿ ಎನ್‌ಕೆ ಸುಕುಮಾರನ್‌ ನಾಯರ್‌ ಹೇಳಿದ್ದಾರೆ.

ಈ ಸಮಸ್ಯೆ ಕುರಿತು ಈ ವರೆಗೆ ಮಾಹಿತಿ ಬಂದಿಲ್ಲ. ಜೈವಿಕ ಹಾಗೂ ಅಜೈವಿಕ ತ್ಯಾಜ್ಯಗಳನ್ನು ಸುರಿಯಲಾಗುತ್ತಿದೆ ಎಂಬ ಮಾಹಿತಿಯಷ್ಟೇ ನಮಗಿತ್ತು. ಈ ವಿಚಾರ ನಮಗೆ ಹೊಸತು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪಿ ಟಿ ಅಬ್ರಾಹಂ ಪ್ರತಿಕ್ರಿಯೆ ನೀಡಿದ್ದಾರೆ.

Comments are closed.