ನವದೆಹಲಿ: 2 ತಿಂಗಳ ಹಿಂದೆ ಮುಂಬೈ-ಜೈಪುರ ಮಾರ್ಗದ ಜೆಟ್ ಏರ್ವೇಸ್ನಲ್ಲಿ ಕಾಣಿಸಿಕೊಂಡಿದ್ದ ಕ್ಯಾಬಿನ್ ಒತ್ತಡದಿಂದ ಓರ್ವ ಪ್ರಯಾಣಿಕ ಶಾಶ್ವತವಾಗಿ ಶ್ರವಣ ಶಕ್ತಿಯನ್ನು ಕಳೆದುಕೊಂಡಿದ್ದಾರೆ.
ಸೆಪ್ಟೆಂಬರ್ ತಿಂಗಳ 20ರಂದು ಜೆಟ್ ಏರ್ವೇಸ್ನಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದ ಕ್ಯಾಬಿನ್ ಪ್ರೆಷರ್ ಹೆಚ್ಚಾಗಿ ಪ್ರಯಾಣಿಕರ ಮೂಗು, ಕಿವಿಗಳಲ್ಲಿ ರಕ್ತ ಕಾಣಿಸಿಕೊಂಡಿತ್ತು. ಬಳಿಕ, ವಿಮಾನವನ್ನು ಕೆಳಗಿಳಿಸಿ ತುರ್ತು ಚಿಕಿತ್ಸೆ ನೀಡಲಾಗಿತ್ತು. ಆ ಘಟನೆಯ ಬಗ್ಗೆ ವಿಮಾನಯಾನ ಸಚಿವಾಲಯ ಸ್ಪಷ್ಟೀಕರಣ ಕೇಳಿತ್ತು. ಇದಾದ ನಂತರ, ಆ ದಿನ ವಿಮಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಯನ್ನು ಜೆಟ್ ಏರ್ವೇಸ್ ವಜಾಗೊಳಿಸಿತ್ತು.
ಈ ವೇಳೆ ಪ್ರಯಾಣ ಮಾಡುತ್ತಿದ್ದ ಮುಖೇಶ್ ಶರ್ಮ ಎಂಬ ಪ್ರಯಾಣಿಕನ ಕಿವಿಯಲ್ಲಿ ರಕ್ತ ಸುರಿದಿತ್ತು. ಬಳಿಕ, ಜೈಪುರ ಆಸ್ಪತ್ರೆಯಲ್ಲಿ ಅವರ ಕಿವಿಯನ್ನು ತಪಾಸಣೆ ನಡೆಸಲಾಗಿತ್ತು. ಆದರೆ, ಅದಾದ ನಂತರ ಆತ ಕೇಳುವ ಸಾಮರ್ಥ್ಯವನ್ನು ಕಳೆದುಕೊಂಡಿದ್ದಾರೆ.
ಸಂಸ್ಥೆಯೊಂದರಲ್ಲಿ ರಿಸರ್ಚ್ ಸ್ಕಾಲರ್ ಆಗಿ ಕೆಲಸ ಮಾಡುತ್ತಿದ್ದ ಶರ್ಮ 2 ತಿಂಗಳ ಹಿಂದೆ ಈ ಘಟನೆಯಾದ ನಂತರ ಕಿವಿಯಲ್ಲಿ ತೀವ್ರ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಚಿಕಿತ್ಸೆಗೆಂದೇ 6 ಲಕ್ಷ ಖರ್ಚು ಮಾಡಿದ್ದರೂ ಶಾಶ್ವತವಾಗಿ ಶ್ರವಣ ಶಕ್ತಿಯನ್ನು ಕಳೆದುಕೊಂಡಿದ್ದಾರೆ.
ಇದೇ ವೇಳೆ ಪ್ರಯಾಣಿಸುತ್ತಿದ್ದ ಕೂಡ ಇದೇ ಸಮಸ್ಯೆ ಎದುರಾಗಿದ್ದು, ಗ್ರಾಹಕರ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದಾರೆ. ಜೆಟ್ ಏರ್ವೇಸ್ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಆತನ ಭವಿಷ್ಯವೇ ಹಾಳಾಗಿಹೋಯಿತು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಚಿಕಿತ್ಸೆಗೆ ತಗುಲಿದ ವೆಚ್ಚದ ಬಿಲ್ ನೀಡಿದರೂ ಜೆಟ್ ಏರ್ವೇಸ್ ಯಾವುದೇ ಸ್ಪಂದನೆ ನೀಡದ ಕಾರಣ ಗ್ರಾಹಕ ನ್ಯಾಯಾಲಯದಲ್ಲಿ ನ್ಯಾಯ ಕೇಳಲು ಅವರು ಮುಂದಾಗಿದ್ದಾರೆ.
Comments are closed.