ರಾಷ್ಟ್ರೀಯ

ಪಟಾಕಿಗೆ ದಟ್ಟ ಹೊಗೆಯಲ್ಲಿ ಮರೆಯಾದ ದೆಹಲಿ

Pinterest LinkedIn Tumblr


ನವದೆಹಲಿ: ವಿಪರೀತ ವಾಯುಮಾಲಿನ್ಯದಿಂದಾಗಿ ತತ್ತರಿಸಿಹೋಗಿರುವ ದೆಹಲಿ ಮತ್ತೆ ದೀಪಾವಳಿ ಪಟಾಕಿ ಹೊಗೆಯಲ್ಲಿ ಮರೆಯಾಗಿ ಹೋಗಿದೆ. ಪಟಾಕಿ ಸಿಡಿಸಲು ಸುಪ್ರೀಂಕೋರ್ಟ್​ ಸಮಯ ನಿಗದಿ ಮಾಡಿ, ಆದೇಶ ಮಾಡಿದ್ದರೂ ಕೂಡ ಕೋರ್ಟ್​ ಆದೇಶವನ್ನು ಮೀರಿ ಹೆಚ್ಚಿನ ಕಾಲ ಪಟಾಕಿ ಸಿಡಿಸಲಾಗಿದೆ.

ದೆಹಲಿಯ ಆನಂದ್ ವಿಹಾರ್ ಮತ್ತು ಧ್ಯಾನ್ ಚಂದ್ ರಾಷ್ಟ್ರಿಯ ಕ್ರೀಡಾಂಗಣದ ಸುತ್ತಮುತ್ತಲಿನ ವಾಯು ಗುಣಮಟ್ಟ ಮಾಪನ 999 ತಲುಪಿ ದಾಖಲೆ ಬರೆಯಿತು. ಚಾಣಕ್ಯಪುರಿ ಮತ್ತು ಅಮೆರಿಕ ರಾಯಭಾರಿ ಕಚೇರಿ ಸುತ್ತಮುತ್ತ ವಾಯು ಗುಣಮಟ್ಟ ಪ್ರಮಾಣ 459 ತಲುಪಿತ್ತು. ಒಟ್ಟಾರೆ ದೆಹಲಿಯ ವಾಯುಮಾಲಿನ್ಯ ತೀರಾ ಅಪಾಯಕಾರಿ ಮಟ್ಟ ಮುಟ್ಟಿದೆ ಎಂದು ಎಎನ್​ಐ ವರದಿ ಮಾಡಿದೆ.

ದೆಹಲಿ ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ಕೆಲವು ವಾರಗಳ ಹಿಂದೆಯಷ್ಟೇ ಸುಪ್ರೀಂಕೊರ್ಟ್ ದೀಪಾವಳಿಯಂದು​ ರಾತ್ರಿ 8 ಗಂಟೆಯಿಂದ 10 ಗಂಟೆಯರವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ ನೀಡಿತ್ತು. ಅಲ್ಲದೇ, ಕಡಿಮೆ ಶಬ್ದ, ಅಪಾಯಕಾರಿ ರಾಸಾಯನಿಕ ಬಳಸದಂತೆ ಹಾಗೂ ಕಡಿಮೆ ಬೆಳಕಿನ ಪರಿಸರಸ್ನೇಗಿಯಾಗಿ ಪಟಾಕಿಯನ್ನು ಮಾತ್ರವೇ ತಯಾರಿಸುವಂತೆ ತಯಾರಕರಿಗೂ ಸುಪ್ರೀಂಕೋರ್ಟ್​ ಕಟ್ಟುನಿಟ್ಟಿನ ಆದೇಶ ನೀಡಿತ್ತು. ಈ ನಿಯಮಗಳನ್ನು ಮೀರಿ, ತಯಾರಿಸಿದ ಪಟಾಕಿ ನಿಷೇಧ ಮಾಡುವಂತೆ ಕ್ರಮ ಕೈಗೊಳ್ಳಲು ಪೊಲೀಸರಿಗೆ ಕೋರ್ಟ್​ ತಿಳಿಸಿತ್ತು. ಆದರೆ, ಅಪೆಕ್ಸ್​ ಕೋರ್ಟಿನ ಆದೇಶ ಹಲವು ಪ್ರದೇಶಗಳಲ್ಲಿ ಪಾಲನೆ ಆಗಲೇ ಇಲ್ಲ. 10 ಗಂಟೆಯ ನಂತರವೂ ಪಟಾಕಿಗಳನ್ನು ಸಿಡಿಲಾಗಿದೆ.

ಆನಂದ್​ ವಿಹಾರ್, ಐಟಿಒ ಮತ್ತು ಜಹಾಂಗಿರ್​ಪುರಿ ಸೇರಿ ಹಲವು ನಗರಗಳಲ್ಲಿ ವಾಯುಮಾಲಿನ್ಯದ ಪ್ರಮಾಣದ ತುಂಬಾ ಗಂಭೀರವಾಗಿದೆ. ಮಯೂರ್​ ವಿಹಾರ್ ವಲಯ, ಲಜ್​ಪತ್​ ನಗರ, ಐಪಿ ವಲು, ದ್ವಾರಕಾ, ನೋಯ್ಡಾ ಸೆಕ್ಟರ್ 78 ಸೇರಿ ಹಲವು ನಗರಗಳು ಸುಪ್ರೀಂಕೋರ್ಟ್​ ಆದೇಶವನ್ನು ಉಲ್ಲಂಘಿಸಿವೆ. ಕೋರ್ಟ್​ ಆದೇಶ ಉಲ್ಲಂಘಿಸಿದವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಲಿದ್ದು, ಕಠಿಣ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

Comments are closed.