ರಾಷ್ಟ್ರೀಯ

ಶಿವಮಂದಿರಕ್ಕೆ ಕಳೆದ 300 ವರ್ಷಗಳಿಂದ ಕಾವಲು ನಿಂತ ಮುಸ್ಲಿಂ ಕುಟುಂಬ!

Pinterest LinkedIn Tumblr


ಕೋಲ್ಕತ್ತಾ: ಹಿಂದು ಮುಸ್ಲಿಂ ಭಾವೈಕ್ಯ ದೂರವಾಗುತ್ತಿರುವ ಈ ದಿನಗಳಲ್ಲಿ ಮುರ್ಶಿದಾಬಾದ್‌ನ ಮುಸ್ಲಿಂ ಕುಟುಂಬವೊಂದು ಶಿವ ದೇಗುಲಕ್ಕೆ ಕಳೆದ ಸುಮಾರು 300 ವರ್ಷಗಳಿಂದ ಕಾವಲು ನಿಂತು, ಪೂಜೆ ಪುನಸ್ಕಾರ ನಡೆಸಲು ನೆರವಾಗುತ್ತಿದೆ.

ಪ್ರಸ್ತುತ ಅಝಾರುಲ್ ಶೇಖ್ ಮತ್ತು ಸಾದಿಕ್ ಶೇಖ್ ಮುರ್ಶಿದಾಬಾದ್‌ನ ಅನಂತ ಹಾಜ್ರಾ ಮತ್ತು ಆಸಿಂ ದಾಸ್ ಜತೆ ಸೇರಿ ದೇವಸ್ಥಾನದ ಉತ್ಸವ, ಪೂಜೆ ಇತರ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಹಿಂದು-ಮುಸ್ಲಿಂ ಭಾವೈಕ್ಯತೆಗೆ ಈ ದೇಗುಲ ಸಾಕ್ಷಿಯಾಗಿದೆ.

ಅತ್ಯಂತ ಪ್ರಾಚೀನ ಶಿವ ದೇಗುಲದಲ್ಲಿ ಎಲ್ಲ ಧರ್ಮದವರೂ ಬಂದು ಪೂಜೆ ಪುನಸ್ಕಾರ ನಡೆಸುತ್ತಾರೆ. ಇಲ್ಲಿ ಶಿವನನ್ನು ಬಾಬಾ ರತ್ನೇಶ್ವರ್ ಎಂದು ಪೂಜಿಸುತ್ತಾರೆ. ದೇಗುಲದ ಉತ್ಸವಕ್ಕೆ ಮುಸಲ್ಮಾನರೇ ಗ್ರಾಮದಲ್ಲಿ ದೇಣಿಗೆ ಸಂಗ್ರಹಿಸುತ್ತಾರೆ.

1494ರಲ್ಲಿ ಸುಲ್ತಾನ್ ಅಲಾವುದ್ದೀನ್ ಹುಸೇನ್ ಶಾ ಬಂಗಾಳದ ಆಡಳಿತಗಾರನಾಗಿದ್ದ ಸಂದರ್ಭ ಕರ್ನಾಟಕದಿಂದ ಸುಮಾರು 1200 ಬ್ರಾಹ್ಮಣ ಕುಟುಂಬಗಳು ಬಂದು ಅಲ್ಲಿ ನೆಲೆಯೂರಿದ್ದಾರೆ ಎನ್ನಲಾಗಿದೆ. ಅವರ ಪೈಕಿ ಕಾನುಂಗೊ ಜಯನಾರಾಯಣ್ ಶಿವ ಮಂದಿರವನ್ನು ನಿರ್ಮಿಸಿರಬಹುದು ಎಂದು ಹೇಳಲಾಗಿದೆ.

ಪ್ರಸ್ತುತ ದೇಗುಲ ಜೀರ್ಣಾವಸ್ಥೆಯಲ್ಲಿದ್ದು, ಟೆರಾಕೋಟ ಬಳಸಿ ವಿವಿಧ ರಚನೆ ಆಕೃತಿ ರಚಿಸಲಾಗಿದೆ. ಆದರೆ ದೇಗುಲ ಹಳೆಯದಾಗಿರುವುದರಿಂದ ಅದನ್ನು ಸುಸ್ಥಿತಿಯಲ್ಲಿರಿಸುವುದು ಸವಾಲಾಗಿದ್ದು, ಮುಸ್ಲಿಂ ಯುವಕರೇ ನಿರ್ವಹಣೆ ಮಾಡುತ್ತಿದ್ದಾರೆ. ಒಮ್ಮೆ ದೇಗುಲದ ಶಿವಲಿಂಗ ಕಳವಾಗಿತ್ತು. ನಂತರ ಅದನ್ನು ಪೊಲೀಸರು ಪತ್ತೆಹಚ್ಚಿದ್ದರು.

ಮಂದಿರವನ್ನು ನೋಡಿಕೊಳ್ಳುವುದು ಮತ್ತು ಪೂಜೆ, ಉತ್ಸವದಲ್ಲಿ ನೆರವಾಗುವುದು ನಮ್ಮ ಧರ್ಮಕ್ಕೆ ವಿರುದ್ಧ ಎಂದು ನಮಗೆ ಯಾವತ್ತೂ ಅನ್ನಿಸಿಲ್ಲ, ನಾವಿರುವವರೆಗೆ ಮತ್ತು ನಮ್ಮ ನಂತರವೂ ಮಂದಿರವನ್ನು ಉತ್ತಮವಾಗಿ ನೋಡಿಕೊಳ್ಳುತ್ತೇವೆ ಎಂದು ಅಝಾರುಲ್ ಶೇಖ್ ಮತ್ತು ಸಾದಿಕ್ ಶೇಖ್ ಹೇಳುತ್ತಾರೆ.

Comments are closed.