ತಿರುವನಂತಪುರಂ: ಕೇರಳ ಪ್ರವಾಹದಲ್ಲಿ ನೂರಾರು ಜೀವಗಳನ್ನು ರಕ್ಷಿಸಿ ಸುದ್ದಿಯಾಗಿದ್ದ 24ರ ಹರೆಯದ ಮೀನುಗಾರ ಜಿನೇಶ ಅಪಘಾತದಲ್ಲಿ ಗಾಯಗೊಂಡು ದುರ್ಮರಣವನ್ನಪ್ಪಿದ್ದಾರೆ. ವಿಪರ್ಯಾಸವೆಂದರೆ ಗಾಯಗೊಂಡು ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಜಿನೇಶ್ ಸಹಾಯಕ್ಕಾಗಿ ಅಂಗಲಾಚುತ್ತಿದ್ದರೂ ಬರೋಬ್ಬರಿ ಅರ್ಧ ಗಂಟೆ ಕಾಲ ಯಾರೊಬ್ಬರು ಸಹ ಸಹಾಯಕ್ಕೆ ಬರಲಿಲ್ಲ ಎಂಬ ಅಮಾನವೀಯ ಸತ್ಯ ಬೆಳಕಿಗೆ ಬಂದಿದೆ.
ಕಳೆದ ವಾರ ಬೈಕ್‌ಲ್ಲಿ ತೆರಳುತ್ತಿದ್ದಾಗ ಲಾರಿ ಹರಿದು ಆಸ್ಪತ್ರೆ ಸೇರಿದ್ದ ಜಿನೇಶ್, ಭಾನುವಾರ ಕೊನೆಯುಸಿರೆಳೆದಿದ್ದಾರೆ.
ಜಿನೇಶ್ ಓಡಿಸುತ್ತಿದ್ದ ಬೈಕ್ ಹಿಂಬದಿ ಸ್ನೇಹಿತ ಜಗನ್ ಕುಳಿತಿದ್ದರು. ಬೈಕ್ ಸ್ಕಿಡ್ ಆಗಿದ್ದು ಇಬ್ಬರು ರಸ್ತೆಗುರುಳಿದ್ದಾರೆ. ಜಿನೇಶ್ ಸಾವರಿಸಿಕೊಳ್ಳುವಷ್ಟರಲ್ಲಿ ವೇಗವಾಗಿ ಬಂದ ಲಾರಿಯೊಂದು ಅವರ ಮೇಲೆ ಹರಿದಿತ್ತು. ಅಪಘಾತದಲ್ಲಿ ಜಗನ್ ಕೂಡ ಗಾಯಗೊಂಡಿದ್ದರು. ಅಂಬುಲೆನ್ಸ್ ಸ್ಥಳಕ್ಕೆ ತಲುಪಲು ಬರೋಬ್ಬರಿ 30 ನಿಮಿಷಗಳಾಗಿದ್ದು, ಬಳಿಕವಷ್ಟೇ ಸ್ನೇಹಿತರಿಬ್ಬರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಚಿಂತಾಜನಕ ಸ್ಥಿತಿಯಲ್ಲಿದ್ದ ಜಿನೇಶ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
”ಆತನ ಸೊಂಟದ ಕೆಳಗಿನ ಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿ ಪ್ರಾಣವನ್ನುಳಿಸಿ ಎಂದಾತ ದಾರಿಹೋಕರಲ್ಲಿ ಅಂಗಲಾಚುತ್ತಿದ್ದ. ಆದರೆ ರಸ್ತೆಯ ಮೇಲೆ ಸಾಗುತ್ತಿದ್ದ ವಾಹನ ಸವಾರರ್ಯಾರೂ ನಮ್ಮ ಸಹಾಯಕ್ಕೆ ಬರಲಿಲ್ಲ. ಜಿನೇಶ್ ಅಂತವನಿಗೆ ಇಂತಹದ್ದು ನಡೆಯುತ್ತದೆ ಎಂದರೆ ನನ್ನಿಂದ ನಂಬಲಾಗುತ್ತಿಲ್ಲ. ಆತ ಪರೋಪಕಾರದಲ್ಲೇ ಖುಷಿ ಪಡುತ್ತಿದ್ದ. ಆತನ ಈ ಗುಣದಿಂದಾಗಿ ಕೇರಳ ಪ್ರವಾಹದ ಸಂದರ್ಭದಲ್ಲಿ ಹೀರೋ ಆಗಿ ಗುರುತಿಸಿಕೊಂಡಿದ್ದ,” ಎಂದು ಜಗನ್ ಕಣ್ಣೀರಾಗುತ್ತಾನೆ.
ಜಿನೇಶ್ ಮತ್ತು ಆತನ ಸ್ನೇಹಿತರು ಕೇರಳ ಪ್ರವಾಹ ಸಂದರ್ಭಲ್ಲಿ 100ಕ್ಕೂ ಹೆಚ್ಚು ಜನರ ಪ್ರಾಣವನ್ನುಳಿಸಿದ್ದರು. ಪ್ರವಾಹದಿಂದ ಅತಿಯಾಗಿ ಬಾಧಿತವಾಗಿದ್ದ ಅಲಾಪುಝಾದ ಚೆಂಗನ್ನೂರಿಗೆ ರಕ್ಷಣೆಗಾಗಿ ಕರೆಸಿಕೊಳ್ಳಲಾಗಿದ್ದ ತಂಡದಲ್ಲಿ ಜಿನೇಶ್ ಇದ್ದರು. ತಮ್ಮ ಪ್ರಾಣದ ಹಂಗು ತೊರೆದು ಸಂತ್ರಸ್ತರ ಪ್ರಾಣ ರಕ್ಷಣೆಗೆ ನಿಂತಿದ್ದ ಜಿನೇಶ್ ದೇಶಾದ್ಯಂತ ಸುದ್ದಿಯಾಗಿದ್ದರು.
Comments are closed.