ರಾಷ್ಟ್ರೀಯ

ಭಾರತದಲ್ಲಿ ಮುಸ್ಲಿಮರಿಗೆ ಅವಕಾಶವ ಇಲ್ಲವಾದರೆ ಹಿಂದುತ್ವವೇ ಅಪೂರ್ಣ: ಮೋಹನ್ ಭಾಗವತ್

Pinterest LinkedIn Tumblr

ನವದೆಹಲಿ: ಹಿಂದೂ ರಾಷ್ಟ್ರ ಎಂದ ಮಾತ್ರಕ್ಕೆ ಮುಸ್ಲಿಮರಿಗೆ ಜಾಗವಿಲ್ಲ ಎಂದಲ್ಲ, ಮುಸ್ಲಿಮರಿಗೆ ಇಲ್ಲಿ ಅವಕಾಶವಿಲ್ಲವಾದರೆ ಹಿಂದುತ್ವವೇ ಅಪೂರ್ಣ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದ್ದಾರೆ.

ದೆಹಲಿಯಲ್ಲಿ ನಡೆಯುತ್ತಿರುವ ‘ಭವಿಷ್ಯದ ಭಾರತ: ಆರ್ ಎಸ್‍ಎಸ್ ದೃಷ್ಟಿಕೋನ’ ಉಪನ್ಯಾಸ ಮಾಲಿಕೆಯ 3ನೇ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮೋಹನ್ ಭಾಗ್ವತ್ ಅವರು, ‘ಹಿಂದುತ್ವ ಎಂದರೆ ಹಿಂದೂಗಳು ಮಾತ್ರವಲ್ಲ ಮುಸ್ಲಿಂ ಸಮುದಾಯದವರನ್ನೂ ಒಪ್ಪಿಕೊಳ್ಳುವುದು ಇದರ ಒಂದು ಭಾಗವಾಗಿದೆ ಎಂದು ಹೇಳಿದ್ದಾರೆ.

ಅಂತೆಯೇ ‘ಹಿಂದೂ ರಾಷ್ಟ್ರ ಎಂದರೆ ಮುಸ್ಲಿಮರಿಗೆ ಇಲ್ಲಿ ಸ್ಥಳವಿಲ್ಲ ಎಂಬ ಅರ್ಥವಲ್ಲ. ಮುಸ್ಲಿಮರಿಗೆ ಇಲ್ಲಿ ಅವಕಾಶ ಇಲ್ಲವೆಂದಾದರೆ ಹಿಂದುತ್ವವೇ ಅಪೂರ್ಣವಾಗುತ್ತದೆ. ಹಿಂದುತ್ವವು ಭಾರತೀಯತೆ ಮತ್ತು ಅಂತರ್ಗತವಾದದ್ದು. ಆರ್ ಎಸ್‍ಎಸ್ ಎಲ್ಲ ಧರ್ಮದವರ ಹಿತ ಬಯಸುತ್ತದೆ ಎಂದು ಭಾಗ್ವತ್ ಹೇಳಿದರು.

ಆರ್ ಎಸ್‍ಎಸ್ ಅಲ್ಪಸಂಖ್ಯಾತರನ್ನು ತುಚ್ಛೀಕರಿಸುತ್ತದೆ ಎಂಬ ಕಾಂಗ್ರೆಸ್‌ ಟೀಕೆಗೆ ಎದಿರೇಟು ನೀಡಿದ ಭಾಗ್ವತ್, ‘ಸಂಘವು ವೈವಿಧ್ಯತೆಯನ್ನು ಪ್ರೀತಿಸುತ್ತದೆಯೇ ಹೊರತು ದ್ವೇಷಿಸುವುದಿಲ್ಲ. ವಿಶ್ವ ಸಹೋದರತೆ ಹಿಂದುತ್ವದ ಪರಂಪರೆಯಾಗಿದ್ದು, ಈ ಭ್ರಾತೃತ್ವವು ವೈವಿಧ್ಯತೆಯಲ್ಲಿ ಏಕತೆಯನ್ನು ಕಲ್ಪಿಸುತ್ತದೆ. ಹೀಗಾಗಿ ಸಂಘವು ಭಾರತವನ್ನು ಹಿಂದೂ ರಾಷ್ಟ್ರ ಎಂದು ಕರೆಯಲು ಖುಷಿ ಪಡುತ್ತದೆ. ಇಡೀ ಸಮಾಜವನ್ನು ಒಟ್ಟುಗೂಡಿಸುವುದೇ ಸಂಘದ ಗುರಿಯಾಗಿದೆಯೇ ಹೊರತು ಸಂಘಕ್ಕೆ ಯಾವುದೇ ಪಕ್ಷ ಮುಖ್ಯವಲ್ಲ. ರಾಷ್ಟ್ರದ ಹಿತಾಸಕ್ತಿಯೊಂದೇ ಜೀವಾಳ. ಆರ್ ಎಸ್‍ಎಸ್ ಹುಟ್ಟಿದ ಬಳಿಕ ರಾಜಕೀಯದಿಂದ ದೂರ ಉಳಿಯಲು ನಿರ್ಧರಿಸಿದೆ. ಸಂಘ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಅಥವಾ ಚುನಾವಣಾ ರಾಜಕೀಯದಲ್ಲಿ ಭಾಗವಹಿಸುವುದಿಲ್ಲ. ಸಂಘದ ಕಾರ್ಯಕರ್ತರು ಯಾವುದೇ ಒಂದು ನಿರ್ದಿಷ್ಟ ಪಕ್ಷದ ಜತೆ ಗುರುತಿಸಿಕೊಳ್ಳಲು ಇಷ್ಟಪಡುವುದಿಲ್ಲ ಎಂದೂ ತಿಳಿಸಿದರು.

ಅಲ್ಲದೆ ಸಂವಿಧಾನದ ಬಗ್ಗೆ ಮಾತನಾಡಿದ ಮೋಹನ್ ಭಾಗ್ವತ್, ಆರ್ ಎಸ್‍ಎಸ್ ಸಂವಿಧಾನವನ್ನು ಗೌರವಿಸುತ್ತದೆ. ಸಂವಿಧಾನ ಹಾಗೂ ಕಾನೂನಿನ ವಿರುದ್ಧ ಸಂಘ ಯಾವತ್ತೂ ಕೆಲಸ ಮಾಡುವುದಿಲ್ಲ ಎಂದು ಹೇಳಿದರು. ಆ ಮೂಲಕ ಸಂವಿಧಾನ ಬದಲಿಸುವ ಹೇಳಿಕೆ ನೀಡಿದ್ದ ತಮ್ಮದೇ ಬಿಜೆಪಿ ಪಕ್ಷದ ಕೇಂದ್ರ ಸಚಿವರಿಗೆ ಪರೋಕ್ಷ ತಿರುಗೇಟು ನೀಡಿದರು.

Comments are closed.